ಇತ್ತೀಚಿನ ಸುದ್ದಿ
ಪಾಟೀಲ್ – ಯತ್ನಾಳ್ ವಾಕ್ಸಮರ | ಒಂದು ದಿನ ಅವರೇ ಅಪ್ಪ-ಮಕ್ಕಳನ್ನು ಕೈಬಿಟ್ಟು ನನ್ನನ್ನು ಕರೆಯುತ್ತಾರೆ: ಬಿಜೆಪಿ ಕುರಿತು ಯತ್ನಾಳ್ ನುಡಿ
02/04/2026, 19:45
ವಿಜಯಪುರ(reporterkarnataka.com): ದಾವಣಗೆರೆ-ಬಾಗಲಕೋಟೆ ಉಪ ಚುನಾವಣಾ ಕಣ ಕಾವೇರುತ್ತಿದೆ. ಈ ನಡುವೆ ಸಚಿವ ಎಂ.ಬಿ. ಪಾಟೀಲ್ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಕ್ಸಮರ ಮುಂದುವರಿದಿದೆ.’ಯತ್ನಾಳ್‌ಗೆ ಸ್ವಾಭಿಮಾನವಿದ್ದರೆ ಬಿಜೆಪಿಯನ್ನು ಸೋಲಿಸಲಿ’ ಎಂಬ ಸಚಿವರ ಸವಾಲಿಗೆ ಯತ್ನಾಳ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಸೇರುವ ಅವಶ್ಯಕತೆ ನನಗಿಲ್ಲ ಎಂದು ಯತ್ನಾಳ್ ನುಡಿದಿದ್ದಾರೆ.
ಇಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್ ಅವರು, ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದರು. ನಾನು ಯಾರ ಮುಂದೆಯೂ ಹೋಗಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಬೇಡುವುದಿಲ್ಲ. ಹನುಮ ಜಯಂತಿಯ ಈ ಪವಿತ್ರ ದಿನದಂದು ಆಂಜನೇಯನ ಸಾಕ್ಷಿಯಾಗಿ ಹೇಳುತ್ತೇನೆ, ಒಂದು ದಿನ ಅವರೇ(ಬಿಜೆಪಿ) ಅಪ್ಪ-ಮಕ್ಕಳನ್ನು (ಯಡಿಯೂರಪ್ಪ ಕುಟುಂಬ) ಕೈಬಿಟ್ಟು ನನ್ನನ್ನು ಕರೆಯುತ್ತಾರೆ. ನಾನು ನಾಟಕವಾಡಿ ಪಕ್ಷದಲ್ಲಿ ಇರುವವನಲ್ಲ ಎಂದು ಗುಡುಗಿದರು.
*ನಾನು ಅಧಿಕಾರಕ್ಕೆ ಬಂದರೆ ಯೋಗಿ ಮಾದರಿ ಆಡಳಿತ ನಡೆಸ್ತೇನೆ*
ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಯತ್ನಾಳ್ ಅವರು, ‘ಒಂದು ವೇಳೆ ನಾನು ಮುಖ್ಯಮಂತ್ರಿಯಾದರೆ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಮಾದರಿಯಲ್ಲೇ ಆಡಳಿತ ನಡೆಸುತ್ತೇನೆ. ನನ್ನ ಮೊದಲ ಸಂಪುಟ ಸಭೆಯಲ್ಲೇ ಮುಸ್ಲಿಂ ಸಮುದಾಯವನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕುತ್ತೇನೆ. ಅವರ ಬದಲಿಗೆ ನಿಜವಾದ ಅಲ್ಪಸಂಖ್ಯಾತರಾದ ಮರಾಠರು, ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೆ ಆ ಸ್ಥಾನಮಾನ ನೀಡುತ್ತೇನೆ’ ಎಂದು ಸ್ಫೋಟಕ ಹೇಳಿಕೆ ನೀಡಿದರು.ಎಂ.ಬಿ. ಪಾಟೀಲ್‌ಗೆ ಯತ್ನಾಳ್ ಸವಾಲ್. ಸಚಿವ ಎಂ.ಬಿ. ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ‘ನನಗೆ ಸ್ವಾಭಿಮಾನದ ಪಾಠ ಮಾಡುವ ಎಂ.ಬಿ. ಪಾಟೀಲ್ ಮೊದಲು ಬಾಗೇವಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದನ್ನು ನಿಲ್ಲಿಸಲಿ. ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿಯೇ ರಾತ್ರಿ ಹೊತ್ತು ಮುಸುಕು ಹಾಕಿಕೊಂಡು ಬಂದು ಪಾಟೀಲ್ ವಿರುದ್ಧ ಪ್ರಚಾರ ಮಾಡುತ್ತಾನೆ. ಇಂತಹ ಪರಿಸ್ಥಿತಿಯಲ್ಲಿರುವ ಪಾಟೀಲರಿಗೆ ನನ್ನ ಬಗ್ಗೆ ಮಾತನಾಡುವ ಹಕ್ಕಿಲ್ಲ’ ಎಂದು ವ್ಯಂಗ್ಯವಾಡಿದರು.
*ಬಾಗಲಕೋಟೆಯಲ್ಲಿ ಚರಂತಿಮಠ ಪರ ಪ್ರಚಾರ*
ವೀರಣ್ಣ ಚರಂತಿಮಠ ಅವರು ನನ್ನ ಆತ್ಮೀಯ ಸ್ನೇಹಿತರು. ಬಾಗಲಕೋಟೆಯ ಬಿಜೆಪಿ ಕಾರ್ಯಕರ್ತರು ನನ್ನನ್ನು ಪ್ರಚಾರಕ್ಕೆ ಆಹ್ವಾನಿಸಿದ್ದಾರೆ. ಹಾಗಾಗಿ ನಾನು ಅವರ ಪರವಾಗಿ ಪ್ರಚಾರಕ್ಕೆ ತೆರಳುತ್ತಿದ್ದೇನೆ ಎಂದು ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದರು.












