ಇತ್ತೀಚಿನ ಸುದ್ದಿ
ತಾಳ್ಮೆ, ಸಹನೆ, ಪರೋಪಕಾರಿತನ ಕನ್ನಡಿಗರ ಮೂಲ ಗುಣ: ಇತಿಹಾಸಕಾರ ಧರ್ಮೇಂದ್ರ ಕುಮಾರ್
24/11/2025, 19:01
•ಕನ್ನಡೇತರ ನಿವಾಸಿಗಳಿಂದ ಕನ್ನಡ ರಾಜ್ಯೋತ್ಸವದ ಆಚರಣೆ
ಬೆಂಗಳೂರು(reporterkarnataka.com): ತಾಳ್ಮೆ,ಸಹನೆ, ದೇಶಸೇವೆ, ಪರೋಪಕಾರಿ ನಡತೆ ಕನ್ನಡಿಗರ ಮೂಲ ಗುಣ, ಸದಾ ಮತ್ತೊಬ್ಬರ ಭಾವನೆಗೆ ಸ್ಪಂದಿಸುವುದು ನಮ್ಮ ನೆಲದ ಸಂಸ್ಕೃತಿ ಎಂದು ಕನ್ನಡ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಅಭಿಪ್ರಾಯಪಟ್ಟರು.

ಪೂರ್ವ ಹೈಲ್ಯಾಂಡ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನಿವಾಸಿಗಳೇ ಸೇರಿ “ಮಾತೃ ಭಾಷೆ ಯಾವುದೇ ಇರಲಿ, ಸ್ನೇಹಮಯ ಭಾಷೆ ಕನ್ನಡವಾಗಲಿ” ಶೀರ್ಷಿಕೆಯಡಿ “ಕನ್ನಡ ರಾಜ್ಯೋತ್ಸವ”ದ ವನ್ನು ಅದ್ಧೂರಿಯಾಗಿ ಆಚರಿಸಿದರು. ಈ ವೇಳೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಕೇವಲ ಭಾಷೆಯಲ್ಲ, ಅದೊಂದು ಭಾವನೆ, ನಮ್ಮ ಭಾಷೆ ನಮ್ಮವರ ನಡೆ, ನುಡಿಯನ್ನೂ ಪ್ರತಿಬಿಂಬಿಸುತ್ತದೆ. ಕನ್ನಡಿಗರೆಂದರೇ ನೆನಪಾಗುವುದೇ ತಾಳ್ಮೆ, ಸಹನೆ, ಪರೋಪಕಾರಿ ಗುಣ ಹೊಂದಿರುವ ಮನಸ್ಸುಗಳು ಎಂದು. ಎಲ್ಲರೂ ನಮ್ಮವರೇ ಎಂದು ಅಪ್ಪಿಕೊಂಡು ನಮ್ಮ ನಾಡಿನಲ್ಲಿ ಅವರಿಗೂ ಸ್ಥಳ ಹಾಗೂ ಅವಕಾಶಗಳನ್ನು ನೀಡುತ್ತಾ, ಅವರನ್ನೂ ನಮ್ಮವನ್ನಾಗಿಸಿಕೊಳ್ಳುವ ಗುಣವಿರುವವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್.ಎನ್. ಸೀತಾರಾಮ್, ಗಾಯಕ ಶಶಿಧರ್ ಕೋಟೆ ಮತ್ತಿತರರು ಉಪಸ್ಥಿತರಿದ್ದರು.
*ಕನ್ನಡೇತರ ನಿವಾಸಿಗಳಿಂದ ಕನ್ನಡ ರಾಜ್ಯೋತ್ಸವ*:
ಈ ಕನ್ನಡ ರಾಜ್ಯೋತ್ಸವದ ವಿಶೇಷವೆಂದರೆ, ಕನ್ನಡೇತರರು ಸೇರಿ ಆಚರಣೆ ಮಾಡಲಾಗಿದೆ. ೩ ಸಾವಿರಕ್ಕೂ ಹೆಚ್ಚು ನಿವಾಸಿಗಳಿರುವ ಪೂರ್ವ ಹೈಲ್ಯಾಂಡ್ ಅಪಾರ್ಟ್‌ಮೆಂಟ್‌ನಲ್ಲಿ ೧ ಸಾವಿರಕ್ಕೂ ಹೆಚ್ಚು ಕನ್ನಡೇತರ ನಿವಾಸಿಗಳು ಒಟ್ಟುಗೂಡಿ ರಾಜ್ಯೋತ್ಸವವನ್ನು ಪ್ರತಿ ವರ್ಷ ತುಂಬೂ ಪ್ರೀತಿಯಿಂದ ಆಚರಿಸುತ್ತಾ ಬಂದಿದ್ದಾರೆ. ಅಷ್ಟೆ ಅಲ್ಲದೆ, ಇಲ್ಲಿರುವ ಕನ್ನಡೇತರರು ಕನ್ನಡ ಭಾಷೆ ಕಲಿಯುವ ಮೂಲಕ ಕನ್ನಡಕ್ಕೆ ಗೌರವ ಸಮರ್ಪಣೆ ಮಾಡುತ್ತಾ ಬಂದಿದ್ದಾರೆ. ಮಕರಂದ ಸಂಸ್ಥೆ ಸಹಯೋಗದಲ್ಲಿ ಇಲ್ಲಿ, ಪ್ರತಿನಿತ್ಯ ಕನ್ನಡ ಕಲಿಕೆ ನಡೆಯುತ್ತಿದೆ.
ಇನ್ನು, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಪಾರ್ಟ್‌ಮೆಂಟ್ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮ ಜರುಗಿದವು.












