3:19 PM Friday10 - January 2025
ಬ್ರೇಕಿಂಗ್ ನ್ಯೂಸ್
ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ: ಸರಕಾರಿ ನೌಕರರ ಸಂಘಕ್ಕೆ ಚುನಾವಣೆಗೆ ಸಿವಿಲ್ ಕೋರ್ಟ್… ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರಕಾರಿ ಬಸ್: ಪ್ರಯಾಣಿಕರಲ್ಲಿ ಆತಂಕ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ, ರಾಹುಲ್ ಗಾಂಧಿ ಕೊಟ್ಟಿದ್ದ ಭರವಸೆ ಸಾಕಾರ: ಸಚಿವ… ನಿಮ್ಹಾನ್ಸ್‌ನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಿ: ಮುಖ್ಯಮಂತ್ರಿ ಸೂಚನೆ ದೇಸಿ ತಿನಿಸಿನ ಬೇಡಿಕೆ ಹೆಚ್ಚಸಲು ಕ್ರಮ: ಸಚಿವ ಎನ್. ಚಲುವರಾಯಸ್ವಾಮಿ ನಂಜನಗೂಡು: ಶಿವಶರಣ ಒಕ್ಕಲಿಗರ ಮುದ್ದಣನವರ ಪ್ರಪ್ರಥಮ ಜಯಂತಿ ಆಚರಣೆ ಬಳ್ಳಾರಿ: ಎಲ್ಲ ರೈಲುಗಳ ಆರಂಭಕ್ಕಾಗಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಒಂದು ತಿಂಗಳ… ಎಂಎಸ್‌ ಐಎಲ್‌ ಟೂರ್‌ ಪ್ಯಾಕೇಜ್‌ ಗೆ ಸಚಿವ ಎಂ. ಬಿ. ಪಾಟೀಲ್ ಚಾಲನೆ ಜ.10-12: ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2025; ದೇಶ – ವಿದೇಶದ 2… ದೇಶದ ವೈವಿಧ್ಯತೆ, ಸೌಹಾರ್ದತೆ ಉಳಿಸಿಕೊಳ್ಳುವ ಮೂಲಕ ಆಂತರಿಕವಾಗಿ ಸಶಕ್ತವಾಗಬೇಕಿದೆ: ಧರ್ಮಸ್ಥಳದಲ್ಲಿ ಉಪ ರಾಷ್ಟ್ರಪತಿ…

ಇತ್ತೀಚಿನ ಸುದ್ದಿ

ಪಂಚಮಸಾಲಿ ಪ್ರತಿಭಟನೆ; ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಸರಕಾರ ಜವಾಬ್ದಾರಿ ನಿಬಾಯಿಸಿದೆ: ಗೃಹ ಸಚಿವ ಡಾ. ಪರಮೇಶ್ವರ್

13/12/2024, 08:18

ಬೆಳಗಾವಿ(reporterkarnataka.com): ಕಳೆದ ಡಿ. 10 ರಂದು ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಮೀಸಲಾತಿ ಸಂಬಂಧ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಜರುಗಿದ ಲಾಠಿ ಚಾರ್ಜ್ ನಂತಹ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಪಾಲನೆ ಉದ್ದೇಶದಿಂದ ಸರ್ಕಾರ ತನ್ನ ಜವಾಬ್ದಾರಿಯನ್ನು ಸರಿಯಾಗಿಯೇ ನಿಭಾಯಿಸಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನಸಭೆ ಸಭಾಂಗಣದಲ್ಲಿ ಗುರುವಾರದಂದು ಪಂಚಮಸಾಲಿ ಮೀಸಲಾತಿ ಪ್ರತಿಭಟನೆಯ ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಅವರು, ನಾನು ಕಳೆದ ಡಿ. 10ರಂದು ನಡೆದ ಘಟನೆಗೆ ಸೀಮಿತಗೊಳಿಸಿ ನನ್ನ ಹೇಳಿಕೆ ನೀಡುತ್ತಿದ್ದು, ಮೀಸಲಾತಿ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಡಿ. 9 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಬಗ್ಗೆ ಘೋಷಣೆಯಾದ ಬಳಿಕ ಜಯ ಮೃತ್ಯುಂಜಯ ಸ್ವಾಮೀಜಿಯವರು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕುರಿತಂತೆ ಬೆಳಗಾವಿಯಲ್ಲಿ 5 ಸಾವಿರ ಟ್ರ್ಯಾಕ್ಟರ್ ತಂದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕರೆ ಕೊಟ್ಟಿದ್ದರು. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕಾಗಿದ್ದು, ಆದರೆ 5 ಸಾವಿರ ಟ್ರಾö್ಯಕ್ಟರ್‌ಗಳನ್ನು ಬೆಳಗಾವಿಗೆ ತಂದರೆ ಏನಾಗುತ್ತದೆ ಎಂಬ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಬಳಿಕ ಟ್ರ್ಯಾಕ್ಟರ್‌ನಲ್ಲಿ ಬರಲು ಅವಕಾಶ ನಿರಾಕರಿಸಿ, ಟ್ರಾö್ಯಕ್ಸ್ ಅಥವಾ ಕ್ರೂಸರ್ ವಾಹನಗಳಲ್ಲಿ ಬಂದು, ಪ್ರತಿಭಟನೆ ಮಾಡಲು ಸ್ಥಳ ನಿಗದಿ ಮಾಡಿಕೊಟ್ಟಿದ್ದೆವು. ಅಲ್ಲದೆ ಸುವರ್ಣ ವಿಧಾನಸೌಧದ 500 ಮೀ. ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ವಿಧಿಸಿ, ನಿರ್ಬಂಧಿತ ಪ್ರದೇಶದ ಬಗ್ಗೆಯೂ ಆದೇಶ ಹೊರಡಿಸಲಾಗಿತ್ತು. ಪ್ರತಿಭಟನೆ ಸಂಬಂಧ ಧಾರವಾಡ ಹೈಕೋರ್ಟ್ ಕೂಡ ಶಾಂತಿಯುತ ಪ್ರತಿಭಟನೆಗೆ ಸ್ಥಳವನ್ನು ನಿಗದಿಪಡಿಸಿ, ಅವಕಾಶ ಕಲ್ಪಿಸಲು ಮತ್ತು ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು. ಸ್ವತಃ ಮುಖ್ಯಮಂತ್ರಿಗಳು ಕೂಡ, ಸಚಿವರುಗಳಾದ ಡಾ. ಮಹದೇವಪ್ಪ, ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವೆಂಕಟೇಶ್ ಅವರನ್ನು ಪ್ರತಿಭಟನಾ ಸ್ಥಳಕ್ಕೆ ತೆರಳಿ, ಸ್ವಾಮೀಜಿಗಳೂ ಸೇರಿದಂತೆ, ಕೆಲವು ಮುಖಂಡರುಗಳನ್ನು ಭೇಟಿಯಾಗಿ, ಮಾತುಕತೆಗೆ ಬರುವಂತೆ ಆಹ್ವಾನಿಸಲು ತಿಳಿಸಿದ್ದರು. ಆದರೆ, ಮುಖಂಡರುಗಳು ಸಚಿವರುಗಳ ಮಾತಿಗೆ ಸ್ಪಂದಿಸದೆ, ಮುಖ್ಯಮಂತ್ರಿಗಳೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು ಎಂದು ಆಗ್ರಹಿಸಿದರು. ಎಲ್ಲ ಪ್ರತಿಭಟನೆಗಳಿಗೂ ಮುಖ್ಯಮಂತ್ರಿಗಳೇ ಹೋಗಬೇಕು ಎಂದರೆ ಅದು ಸಾಧ್ಯವೆ? ಎಂದು ಡಾ. ಪರಮೇಶ್ವರ್ ಅವರು ಪ್ರಶ್ನಿಸಿದರು.
ಪ್ರತಿಭಟನಾಕಾರರನ್ನು ಸುವರ್ಣ ವಿಧಾನಸೌಧದೆಡೆಗೆ ನುಗ್ಗಲು ಪ್ರಚೋದಿಸಿದ ಕಾರಣ, ಪೊಲೀಸ್ ಬ್ಯಾರಿಕೇಡ್‌ಗಳನ್ನು ನೂಕಿ, ಸುವರ್ಣ ವಿಧಾನಸೌಧದೆಡೆಗೆ ಸುಮಾರು 10 ಸಾವಿರ ಜನರು ಏಕಕಾಲಕ್ಕೆ ನುಗ್ಗಲು ಯತ್ನಿಸಿದರು, ಅಲ್ಲದೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ಕಾರಣ 24 ಪೊಲೀಸರು ಗಾಯಗೊಂಡರು. ಈ ಬಗ್ಗೆ ಸೂಕ್ತ ವಿಡಿಯೋ ದಾಖಲೆಗಳು ಇವೆ. 10 ಸಾವಿರ ಜನ ಸುವರ್ಣ ವಿಧಾನಸೌಧದೆಡೆಗೆ ನುಗ್ಗಿದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂಬ ಕಾರಣಕ್ಕಾಗಿಯೇ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ, ಅದನ್ನು ತಡೆದಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ವಿರೋಧ ಪಕ್ಷದವರು ಕೂಡ ಪ್ರಶ್ನೆ ಮಾಡುತ್ತಾರೆ, ಅಲ್ಲವೇ ಎಂದ ಅವರು, ಜವಾಬ್ದಾರಿಯುತವಾದ ಸರ್ಕಾರ ನಮ್ಮದು. ಪ್ರತಿಭಟನೆ ಎಲ್ಲರ ಹಕ್ಕು, ಆದರೆ ಶಾಂತಿಯುತವಾಗಿ ಮಾಡಬೇಕು.ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ, ಯಾರೇ ಕಾನೂನು ಉಲ್ಲಂಘಿಸಲು ಅವಕಾಶ ಕೊಡುವುದಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಜವಾಬ್ದಾರಿಯುತವಾಗಿಯೇ ವರ್ತಿಸಿದ್ದಾರೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಅವರು ಸ್ಪಷ್ಟಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು