ಇತ್ತೀಚಿನ ಸುದ್ದಿ
ಪಣಂಬೂರು ಎನ್ ಎಂಪಿಟಿ ಸ್ಕೂಲ್ ಶಿಕ್ಷಕ ರಕ್ಷಕ ಸಂಘದ ಸಭೆ: ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ
23/07/2023, 22:41

ಮಂಗಳೂರು(reporterkarnataka.com):ಹೆತ್ತವರು ಮಗುವಿನಲ್ಲಿ ಹುದುಗಿರುವ ಪ್ರತಿಭೆ ಸಾಮರ್ಥ್ಯ ಗಳನ್ನು ಬೆಳೆಸಬೇಕೇ ಹೊರತು ಅವರ ಮೇಲೆ ಒತ್ತಡ ಹೇರಬಾರದು. ಸಕಾರಾತ್ಮಕ ಮಾತುಗಳನ್ನು ಆಡುವಂತೆ ಮಕ್ಕಳಲ್ಲಿ ಜಾಗೃತಿಯನ್ನು ತರಬೇಕು ಎಂದು ಮಾನಸಿಕ ಆರೋಗ್ಯ ತಜ್ಞೆ ಡಾ. ರಮೀಲಾ ಶೇಖರ್ ಹೇಳಿದರು.
ಅವರು, ಪಣಂಬೂರು ಎನ್ ಎಂಪಿಟಿ ಸ್ಕೂಲಿನ
ಶಿಕ್ಷಕ- ರಕ್ಷಕ ಸಂಘದ ಸಭೆಯಲ್ಲಿ ಮಾತನಾಡಿದರು.
ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಿ ಹೃದಯವಂತರಾಗಬೇಕು. ಪ್ರತಿ ಮಗುವು ತನ್ನ ಭಾವನೆಗಳನ್ನು ಹೆತ್ತವರೊಂದಿಗೆ ಹಂಚಿಕೊಳ್ಳಲು ಬಯಸುತ್ತದೆ. ಆದ್ದರಿಂದ ಪೋಷಕರು ಮಕ್ಕಳೊಂದಿಗೆ ಕಾಲ ಕಳೆಯಲು ಸಮಯ ಮೀಸಲಿಟ್ಟರೆ ಬಾಹ್ಯ ಪ್ರೀತಿ ಪ್ರೇಮಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು. ಹೆತ್ತವರು ಮತ್ತು ಶಿಕ್ಷಕರು ಮಕ್ಕಳನ್ನು ಪ್ರೀತಿಸಿ ಗುರುತಿಸಿ ತಾಳ್ಮೆಯಿಂದ ಪ್ರೋತ್ಸಾಹಿಸಿದರೆ ಮಕ್ಕಳ ಮನಸ್ಸು ಹೂವಿನಂತೆ ಅರಳುತ್ತದೆ ಎಂದು ಅವರು ನುಡಿದರು.
ಬದುಕಿನಲ್ಲಿ ಸಂಸ್ಕಾರಯುತ ಮೌಲ್ಯಗಳನ್ನು ಗೆಲುವಿನ ಹಾದಿಯಲ್ಲಿ ಸಾಗುವ ಛಲ ವಿದ್ಯಾರ್ಥಿಗಳಲ್ಲಿದ್ದರೆ ಯಶಸ್ಸು ಸಾಧಿಸಬಹುದು. ಪೋಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿ ಅವರನ್ನು ಯೋಗ್ಯ ವ್ಯಕ್ತಿಗಳನ್ನಾಗಿಸಬೇಕು ಎಂದು ಎನ್ ಎಂ ಪಿ ಟಿ ಶಿಕ್ಷಣ ಸೊಸೈಟಿಯ ಉಪಾಧ್ಯಕ್ಷ ಕೃಷ್ಣ ಬಾಪಿ ಆರ್.ಜೆ. ಹೇಳಿದರು.
ಎನ್ ಎಂ ಪಿ ಟಿ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ಶ್ರೀನಾಥ್ ಪಿ. , ಮುಖ್ಯ ಶಿಕ್ಷಕಿ ಪ್ರತಿಮಾ ಎಂ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಉಸ್ಮಾನ್ , ಕಾರ್ಯದರ್ಶಿ ಯೋಗೀಶ್ ಕಾಂಚನ್ , ಶಿಕ್ಷಕಿ ರೋಸ್ ಮೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್.ಎಸ್. ಎಲ್. ಸಿ. ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಉಸ್ಮಾನ್ ಯೋಗೀಶ್ ಕಾಂಚನ್ ವನಿತಾ ಇವರನ್ನು ಸನ್ಮಾನಿಸಲಾಯಿತು. ಯೋಗೀಶ್ ಕಾಂಚನ ಸ್ವಾಗತಿಸಿ ಮುಖ್ಯ ಶಿಕ್ಷಕಿ ಪ್ರತಿಮಾ ಎಮ್. ವರದಿ ಮಂಡಿಸಿದರು. ಅನಿತಾ ಕಾರ್ಯಕ್ರಮ ನಿರೂಪಿಸಿ ಸಿ. ಆರ್. ಭಾರತಿ ಧನ್ಯವಾದವಿತ್ತರು.