ಇತ್ತೀಚಿನ ಸುದ್ದಿ
ಪಾಕ್ ಬೆಂಬಲಿತ ಭಯೋತ್ಪಾದನೆ: ಅಮೆರಿಕ ತೆರಳಲಿರುವ ಸರ್ವಪಕ್ಷ ನಿಯೋಗದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಕ್ಯಾಪ್ಟನ್ ಬ್ರಿಜೇಶ್ ಚೌಟ
18/05/2025, 22:02

ನವದೆಹಲಿ(reporterkarnataka.com): ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಹಾಗೂ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕಾಂಗ್ರೆಸ್ ಸಂಸದ ಡಾ. ಶಶಿ ತರೂರ್ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕಕ್ಕೆ ತೆರಳಲಿದ್ದು, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ, ಆಪರೇಶನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಭಾರತದ ಸಂದೇಶವನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಚುರಪಡಿಸಲು ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 32 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟಕ್ಕೆ ಭೇಟಿ ನೀಡಲು ಏಳು ಸರ್ವಪಕ್ಷ ನಿಯೋಗಗಳನ್ನು ರಚಿಸಿದ್ದು, ಈ ಭೇಟಿಯು ಪ್ರಮುಖ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿದೆ. ಪ್ರತಿ ತಂಡವು ನೀತಿ ಮತ್ತು ರಾಜತಾಂತ್ರಿಕ ಪರಿಣತಿಯನ್ನು ಹೊಂದಿರುವ ಸಂಸದರಿಗೆ ಬೆಂಬಲ ನೀಡಲು ನಿವೃತ್ತ ರಾಜತಾಂತ್ರಿಕರನ್ನು ಕೂಡ ಒಳಗೊಂಡಿದೆ. ಈ ನಿಯೋಗಗಳು ಭಯೋತ್ಪಾದನೆಯ ಕುರಿತು ಭಾರತದ ದೃಢ ಮತ್ತು ಏಕೀಕೃತ ನಿಲುವನ್ನು ವಿವರಿಸುವ ಮತ್ತು ಗಡಿಯಾಚೆಗಿನ ದಾಳಿಗಳಿಗೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಪುನರುಚ್ಚರಿಸುವ ಗುರಿಯನ್ನು ಹೊಂದಿವೆ.
ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸಂಸದ ಸೂರ್ಯ ರವರು,
> “ಅಮೆರಿಕಕ್ಕೆ ತೆರಳಲಿರುವ ಭಾರತೀಯ ನಿಯೋಗದಲ್ಲಿ ಡಾ. ಶಶಿ ತರೂರ್ ಅವರೊಂದಿಗೆ ನಾನೂ ಕೂಡ ಭಾಗವಹಿಸಲಿದ್ದು, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತದ ಸಂದೇಶವನ್ನು ಜಗತ್ತಿಗೆ ಕೊಂಡೊಯ್ಯುವ ಮತ್ತು ಆಪರೇಶನ್ ಸಿಂದೂರ ಯಶಸ್ವಿ ಕಾರ್ಯಾಚರಣೆಯ ಮಹತ್ವದ ಕುರಿತಾಗಿ ಭಾರತದ ನಿಲುವನ್ನು ವ್ಯಕ್ತಪಡಿಸಲು ಈ ಜವಾಬ್ದಾರಿಯನ್ನು ನೀಡಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ, ಗೃಹ ಸಚಿವ ಶ್ರೀ ಅಮಿತ್ ಶಾ, ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಕಿರಣ್ ರಿಜಿಜು ಅವರಿಗೆ ನಾನು ಧನ್ಯವಾದಗಳು “ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
“ಆಪರೇಷನ್ ಸಿಂಧೂರ್ ಮೂಲಕ ಭಾರತವು, ಪಾಕಿಸ್ತಾನ-ಬೆಂಬಲಿತ ಭಯೋತ್ಪಾದನೆಗೆ ತಕ್ಕ ಪ್ರತಿಕ್ರಿಯೆಯನ್ನು ನೀಡಿದ್ದು.ಅಮಾಯಕರ ಮೇಲಿನ ದಾಳಿಗೆ ಪಾಕಿಸ್ತಾನವು ಅಪಾರ ಬೆಲೆ ತೆತ್ತಿದೆ. ಈ ಕಾರ್ಯಾಚರಣೆಯ ಮೂಲಕ ಭಯೋತ್ಪಾದನೆಗೆ ಭಾರತದ ಶೂನ್ಯ ಸಹಿಷ್ಣುತೆಯನ್ನು ಪ್ರಚುರಪಡಿಸುವ ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದ ಪ್ರಜಾಫ್ರಭುತ್ವ ಗಟ್ಟಿಯಾಗಿ ನಿಲ್ಲಲಿದೆ ಎಂಬ ಸಂದೇಶವನ್ನು ಜಾಗತಿಕವಾಗಿ ನೀಡುವ ಉದ್ದೇಶ ಹೊಂದಿದೆ “ ಎಂದು ಸಂಸದ ಸೂರ್ಯ ವಿವರಿಸಿದರು.
ಭಯೋತ್ಪಾದನೆಯ ವಿರುದ್ಧ ಜಾಗತಿಕ ಅಭಿಪ್ರಾಯವನ್ನು ರೂಪಿಸುವ ಮತ್ತು ಜಾಗತಿಕ ವೇದಿಕೆಗಳಲ್ಲಿ ಭಯೋತ್ಪಾದನೆ ಬಗ್ಗೆ ಭಾರತದ ರಾಜತಾಂತ್ರಿಕ ನಿಲುವು ವ್ಯಕ್ತಪಡಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಜಾಗತಿಕ ಸಂವಹನ ಕಾರ್ಯ ಆರಂಭಿಸಿದ್ದು, ಈ ನಿಯೋಗಗಳ ಭೇಟಿಯು ಮೇ 23 ರಿಂದ ಪ್ರಾರಂಭವಾಗಿ ಜೂನ್ 6 ರವರೆಗೆ ನಡೆಯಲಿದೆ.
ಈ ಜಾಗತಿಕ ಸಂವಹನ ಕಾರ್ಯದಲ್ಲಿ ಕರ್ನಾಟಕದಿಂದ ತೇಜಸ್ವೀ ಸೂರ್ಯ ಅವರೊಂದಿಗೆ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಸ್ಪೇನ್, ಗ್ರೀಸ್ ಗೆ ತೆರಳುವ ಮತ್ತೊಂದು ನಿಯೋಗದ ಭಾಗವಾಗಿದ್ದಾರೆ.