ಇತ್ತೀಚಿನ ಸುದ್ದಿ
ಪಚ್ಚನಾಡಿಯ ಅಚ್ಚುಕೋಡಿ: ಇಲ್ಲಿ ಸಮಸ್ಯೆಗಳದ್ದೇ ರಾಡಿ; ಬೀದಿಗಿಳಿದ ಸ್ಥಳೀಯ ನಿವಾಸಿಗಳು; ಏನು ಮಾಡುತ್ತಿದ್ದಾರೆ ಲೋಕಲ್ ಕಾರ್ಪೊರೇಟರ್ ?
12/06/2023, 21:24
ಅನುಷ್ ಪಂಡಿತ್ ಮಂಗಳೂರು
ಸಹನಾ ವಿಟ್ಲ ಮಂಗಳೂರು
info.reporterkarnataka@gmail.com
ನಗರದ ಪಚ್ಚನಾಡಿ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಡಂಪಿಂಗ್ ಯಾರ್ಡ್ ಮತ್ತು ತ್ಯಾಜ್ಯ ಸುನಾಮಿಗೆ ಕೊಚ್ಚಿ ಹೋದ ಮಂದಾರ ಎಂಬ ಸುಂದರ ಪ್ರದೇಶ. ಆದರೆ ಇಲ್ಲಿ ಅಷ್ಟೇ ಅಲ್ಲ, ಇನ್ನೂ ಹತ್ತಾರು ಮೂಲಭೂತ ಸಮಸ್ಯೆಗಳಿಂದ ಇಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ.
ಮಹಾನಗರ ಪಾಲಿಕೆಯ 60 ವಾರ್ಡ್ ಗಳ ಪೈಕಿ ಅತ್ಯಂತ ಹೆಚ್ಚು ಸಮಸ್ಯೆಗಳನ್ನು ಒಡಲಿನಲ್ಲಿ ಇಟ್ಟುಕೊಂಡ ವಾರ್ಡ್ ಗಳಲ್ಲಿ ಪಚ್ಚನಾಡಿ ವಾರ್ಡ್ ಕೂಡ ಒಂದು. ಈ ಪಚ್ಚನಾಡಿ ಗ್ರಾಮದ ಅಚ್ಚುಕೋಡಿ ಭಾಗದ ಜನರು ಇದೀಗ ತಮ್ಮ ಮೂಲಭೂತ ಸೌಕರ್ಯಕ್ಕಾಗಿ ಒದ್ದಾಡುತ್ತಿದ್ದಾರೆ. ತಮ್ಮ ಹಕ್ಕಿಗಾಗಿ ಬೀದಿಗೆ ಇಳಿದು ಜನಪ್ರತಿನಿಧಿಗಳು ಹಾಗೂ ನಗರಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟಿಸುವ
ಅನಿವಾರ್ಯತೆ ಇವರಿಗೆ ಎದುರಾಗಿದೆ.
ಇಲ್ಲಿ ಹಲವು ವರ್ಷದಿಂದ ಸರಿಯಾಗಿ ರಸ್ತೆ ವ್ಯವಸ್ಥೆ ಇಲ್ಲ. ಇದೀಗ ಇದ್ದ ಕಿರಿದಾದ ರಸ್ತೆ ಮಧ್ಯೆ ಹೊಂಡ ತೆಗೆದು ತಿಂಗಳು ಅನೇಕ ಕಳೆದರೂ ಹೊಂಡ ಮುಚ್ಚಿಲ್ಲ. ಡ್ರೈನೇಜ್ ನೀರು ಸೋರಿಕೆಯಾಗಿ ಬಾವಿ ಹಾಗೂ ಬೋರ್ ವೆಲ್ ಸೇರಿದ ಪರಿಣಾಮ ಕುಡಿಯಲು ಯೋಗ್ಯವಲ್ಲದ ನೀರು ಕುಡಿದು ಜನ ಸಾಂಕ್ರಾಮಿಕ ರೋಗದ ಭಯದಲ್ಲಿ ಜೀವನ ನಡೆಸುವಂತಾಗಿದೆ. ಮೊದಲು ಇದ್ದ ದೊಡ್ಡದಾದ ದಾರಿದೀಪವನ್ನು ತೆಗೆದು ಈಗ ಸಣ್ಣ ದಾರಿದೀಪವನ್ನು ಅಳವಡಿಸಿದರ ಪರಿಣಾಮ ಸಮರ್ಪಕ ಬೆಳಕು ಇಲ್ಲದೆ ಪರಿಸರದಲ್ಲಿ ಇರುವ ಹಾವುಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇಷ್ಟೊಂದು ಮೂಲಭೂತ ಸೌಕರ್ಯದ ಕೊರತೆಯನ್ನು ಅಥವಾ ಸಮಸ್ಯೆಯನ್ನು ಸ್ಥಳೀಯ ಕಾರ್ಪೊರೇಟರ್ ಸಂಗೀತ ನಾಯಕ್ ಅವರಿಗೆ ಫೋನ್ ಮೂಲಕ ತಿಳಿಸಿದರೆ ಸೌಜನ್ಯಕ್ಕಾದರೂ ಒಮ್ಮೆಯೂ ಭೇಟಿ ಕೊಡದೆ ಅದರ ಬದಲು ಅವರ ಗಂಡನನ್ನು ಕಳಿಸಿ ಕೊಡುತ್ತಾರೆ. ಅವರ ಗಂಡ ರವೀಂದ್ರ ನಾಯಕ್ ಅವರು ಸಮಸ್ಯೆಗಳಿಗೆ ಸ್ಪಂದನೆ ನೀಡದೆ, ಜನರೊಂದಿಗೆ ಅಸಂಬದ್ಧವಾಗಿ ವರ್ತಿಸುತ್ತಾರೆ. ನಗರ ಪಾಲಿಕೆಯ ಅಧಿಕಾರಿಗಳನ್ನು ಫೋನ್ ಮೂಲಕ ಒಂದು ಬಾರಿ ಸಂಪರ್ಕಿಸಿದರೆ, ಮತ್ತೆ ಅವರ ಫೋನ್ ಸಂಪರ್ಕಕ್ಕೆ ಸಿಗುವುದೇ ಇಲ್ಲ ಎಂದು ಸ್ಥಳೀಯರು ತಮ್ಮ ಅಲಳನ್ನು ತೋಡಿಕೊಳ್ಳುತ್ತಾರೆ. ಪಾಲಿಕೆ ಆಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳುವುದು ಅಗತ್ಯ.