ಇತ್ತೀಚಿನ ಸುದ್ದಿ
ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ನಡೆಯಲಿ: ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹ
02/01/2026, 18:28
ಬೆಂಗಳೂರು(reporterkarnataka.com): ಮಾಜಿ ಸಚಿವರು ಮತ್ತು ಶಾಸಕರಾದ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಪ್ರಾಣಾಪಾಯ ಇದೆ. ಕೂಡಲೇ ಅವರಿಗೆ ಪೊಲೀಸ್ ರಕ್ಷಣೆ ಕೊಡಬೇಕು. ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ಮಾಡಬೇಕೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಅವರು ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಸಚಿವ ಮತ್ತು ಶಾಸಕ ಜನಾರ್ಧನ ರೆಡ್ಡಿ ಬೆಂಬಲಿಗರ ಮನೆಗೆ ಅಕ್ರಮವಾಗಿ ನುಗ್ಗಿದ ಕಾಂಗ್ರೆಸ್ಸಿನವರನ್ನು ಕೂಡಲೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಬಳ್ಳಾರಿ ಘಟನಾವಳಿ, ಒಂದು ಸಾವಿಗೆ ಶಾಸಕ ಭರತ್ ರೆಡ್ಡಿಯೇ ಕಾರಣ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಮಾಜಿ ಸಚಿವ ಮತ್ತು ಶಾಸಕ ಜನಾರ್ದನ ರೆಡ್ಡಿ ಮುಗಿಸಲು ಕಾಂಗ್ರೆಸ್ಸಿನವರು ತೀರ್ಮಾನಿಸಿದ್ದರು ಎಂದು ಆರೋಪಿಸಿದರು.

ಬಳ್ಳಾರಿಯಲ್ಲಿ ಕಾಂಗ್ರೆಸ್ಸಿನ ಗೂಂಡಾಗಳು ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮೇಲೆ ಗುಂಡಿನ ದಾಳಿ ಮಾಡಿರುವುದು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಹೊಸ ವರ್ಷಾಚರಣೆ ವೇಳೆ ಮುಖ್ಯಮಂತ್ರಿಗಳು ದುರ್ಘಟನೆ ನಡೆಯದಂತೆ ಪೊಲೀಸರು ನೋಡಲಿದ್ದಾರೆಂದು ಭರವಸೆಯ ಮಾತಾಡಿದ್ದಾರೆ. ಅವರು ಹೇಳಿದ ಒಂದೇ ದಿನಕ್ಕೆ ಬಳ್ಳಾರಿಯಲ್ಲಿ ಗುಂಡುಗಳ ದಾಳಿ (ಫೈರಿಂಗ್) ನಡೆದಿದೆ ಎಂದು ತಿಳಿಸಿದರು. ಇದು ರಾಜ್ಯದ ಕಾನೂನು- ಸುವ್ಯವಸ್ಥೆ ಕುಸಿತಕ್ಕೆ ಕೈಗನ್ನಡಿ ಎಂದರು.
ಒಂದೆಡೆ ಪೊಲೀಸರು ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಆಂಧ್ರ ಮಾದರಿಯ ರಕ್ತ ಚರಿತ್ರೆ ಕರ್ನಾಟಕಕ್ಕೂ ಕಾಲಿಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು. ರಾಜಕೀಯವಾಗಿ ಗುಂಡು ಹಾರಿಸುವ ಸಂಸ್ಕೃತಿ ಕರ್ನಾಟಕದಲ್ಲಿ ಇರಲಿಲ್ಲ; ಇವತ್ತು ಅದಕ್ಕೂ ನಾಂದಿ ಹಾಡಿದ್ದಾರೆ ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ಕಾಂಪೌಂಡ್ ಒಳಗೆ ಬಂದು ಫ್ಲೆಕ್ಸ್ ಹಾಕಿದ್ದಾರೆ. ಅದಾದ ಬಳಿಕ ಜನಾರ್ದನ ರೆಡ್ಡಿ ಮನೆಯವರು ದೂರು ನೀಡಿದ್ದಾರೆ. ಪೊಲೀಸರು ಬಂದು ತೆರವುಗೊಳಿಸಿದ್ದಾರೆ. ನಂತರ ಶಾಸಕ ಸತೀಶ್ ರೆಡ್ಡಿ ಬೆಂಬಲಿಗರು ಬಂದು ರಸ್ತೆ ಮೇಲೆ ಕಾಲ ಮೇಲೆ ಕಾಲು ಹಾಕಿ ಕುಳಿತು ಗೇಟ್ ನುಗ್ಗಿ ಫ್ಲೆಕ್ಸ್ ಕಟ್ಟಿಸಿದ್ದಾರೆ ಎಂದು ದೂರಿದರು. ಇದರಲ್ಲಿ ಜನಾರ್ದನ ರೆಡ್ಡಿ ತಪ್ಪೇನಿದೆ ಎಂದು ಕೇಳಿದರು.
ರಕ್ತ ಚರಿತ್ರೆಯಲ್ಲೇ 2026ರ ಪ್ರಾರಂಭವಾಗಿದೆ. ಆಂಧ್ರ ಮಾದರಿಗೆ ಹೋಗುವ ಸಂದೇಶವನ್ನು ಈ ದುರುಳ ಸರಕಾರವು ಕೊಟ್ಟಿದೆ ಎಂದು ಟೀಕಿಸಿದರು. ಈ ಘಟನೆ ಆದಾಗ ಜನಾರ್ದನ ರೆಡ್ಡಿ ಮನೆಯಲ್ಲಿ ಇರಲಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
*ಜೀವ ಬಲಿ ಪಡೆದ ಮೊದಲ ದಿನ- ಛಲವಾದಿ ನಾರಾಯಣಸ್ವಾಮಿ:*
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಜೀವ ಬಲಿ ಪಡೆದ ಹೊಸ ವರ್ಷದ ಮೊದಲ ದಿನವಾಗಿದೆ. ಗೂಂಡಾ ರಾಜ್ಯದ ಸಂದೇಶ ಇದೆಂದು ತಿಳಿಸಿದರು.
ಶಾಸಕ ಮತ್ತು ಅವರ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಬೇಕಿತ್ತು. ಆದರೆ, ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮೇಲೆ ದೂರು ದಾಖಲಿಸುವ ಪ್ರಯತ್ನ ನಡೆದಿದೆ. ಅವರು ಯಾವ ರೀತಿ ಇದರಲ್ಲಿ ಭಾಗಿ ಆಗಿದ್ದಾರೆ? ಗುಂಡು ಹಾರಿಸಿದ್ದು ಯಾರು? ಎಂದು ಕೇಳಿದರು.
ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದೇವೇಳೆ ಸತೀಶ್ ರೆಡ್ಡಿ ಇಷ್ಟೆಲ್ಲ ಗೂಂಡಾವರ್ತಿ ಮಾಡಿದ್ದು, ಅವರನ್ನು ಬಂಧಿಸಿದ್ದೀರಾ ಎಂದು ಪ್ರಶ್ನಿಸಿದರು. ಸರಕಾರ ಯಾಕೆ ಅವರನ್ನು ಬಂಧಿಸಿಲ್ಲ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ನಾಯಕರು ಮತ್ತು ಶಾಸಕರನ್ನು ಬಂಧಿಸಬೇಕೇ ಹೊರತು ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನಲ್ಲ ಎಂದು ತಿಳಿಸಿದರು.
ಎಲ್ಲ ಕುಚೇಷ್ಟೆಯ ಕಾರ್ಯ ಕಾಂಗ್ರೆಸ್ಸಿನವರಿಂದಲೇ ಹೊರತು ಇದು ನಮ್ಮ ಪಕ್ಷದ ಶಾಸಕರ ಕಡೆಯಿಂದ ಆಗಿಲ್ಲ. ಆದ್ದರಿಂದ ಈ ಗೂಂಡಾವರ್ತನೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.












