ಇತ್ತೀಚಿನ ಸುದ್ದಿ
ನೂತನ ಸ್ಪೀಕರ್ ‘ಸದನ ವೀರ’ ಯು.ಟಿ. ಖಾದರ್ ಗೆ ತವರಿನಲ್ಲಿ ಅಭಿನಂದನೆ: ಮಂಗ್ಳೂರಿಗರು ಫುಲ್ ಖುಷ್ ಖುಷ್
25/05/2023, 21:44

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ರಾಜ್ಯ ವಿಧಾನ ಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿರುವ ಯು.ಟಿ. ಖಾದರ್ ಅವರಿಗೆ ಗುರುವಾರ ಮಂಗಳೂರಿನ ಸರ್ಕೀಟ್ ಹೌಸ್ ನಲ್ಲಿ ಸಾರ್ವಜನಿಕ ಅಭಿನಂದನೆ ಸಲ್ಲಿಸಲಾಗಿದ್ದು, ಕರಾವಳಿಗೆ ದೊರೆತ ಈ ಗೌರವಕ್ಕೆ ಮಂಗಳೂರಿಗರು ಫುಲ್ ಖುಷಿಯಾಗಿದ್ದಾರೆ.
ಸಾಮಾಜಿಕ ಹಾಗೂ ಧಾರ್ಮಿಕ ಧುರೀಣ ಪದ್ಮರಾಜ್ ಆರ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸ್ಪೀಕರ್ ಸ್ಥಾನ ಕರಾವಳಿಗೆ ದೊರೆತ ಎರಡನೇ ಅವಕಾಶವಾಗಿದೆ. ಈ ಹಿಂದೆ ಬಂಟ್ವಾಳ ವೈಕುಂಠ ಬಾಳಿಗಾ ಅವರು ಸ್ಪೀಕರ್ ಸ್ಥಾನವನ್ನು ಅಲಂಕರಿಸಿದ್ದರು. ಸಾಂವಿಧಾನಿಕವಾಗಿ ಸ್ಪೀಕರ್ ಸ್ಥಾನ ರಾಜ್ಯದಲ್ಲೇ 2ನೇ ಅತ್ಯುನ್ನತ ಸ್ಥಾನವಾಗಿದೆ. ರಾಜ್ಯಪಾಲರನ್ನು ಬಿಟ್ಟರೆ ಎರಡನೇ ಸ್ಥಾನ ಸ್ಪೀಕರ್ ಅವರದ್ದಾಗಿದೆ. 3ನೇ ಸ್ಥಾನ ಡೆಪ್ಯುಟಿ ಸ್ಪೀಕರ್. 4ನೇ ಸ್ಥಾನ ರಾಜ್ಯದ ಮುಖ್ಯಮಂತ್ರಿಗೆ ಸಲ್ಲುತ್ತದೆ. ಸಾಂವಿಧಾನಿಕವಾಗಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಸ್ಥಾನಮಾನವಿಲ್ಲ. ಉಪ ಮುಖ್ಯಮಂತ್ರಿ ಅಥವಾ ಉಪ ಪ್ರಧಾನಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಂವಿಧಾನದಲ್ಲಿ ಅವಕಾಶ ಇರುವುದಿಲ್ಲ. ರಾಜಕೀಯ ಪಕ್ಷಗಳ ಅನುಕೂಲ ಸಿಂಧು ಸಿದ್ದಾಂತಕ್ಕಾಗಿ ಉಪ ಪ್ರಧಾನಿ, ಉಪ ಮುಖ್ಯಮಂತ್ರಿ ಸ್ಥಾನಗಳು ಸೃಷ್ಟಿಯಾಗಿವೆ.
ಇದೀಗ ಯು.ಟಿ. ಖಾದರ್ ಅವರು ರಾಜ್ಯದಲ್ಲೇ 2ನೇ ಅತ್ಯುನ್ನತ ಸ್ಥಾನವನ್ನು ಏರಿದ್ದಾರೆ. ರಾಜ್ಯದ ಎಲ್ಲ 32 ಸರಕಾರಿ ಇಲಾಖೆಗಳ ಬಗ್ಗೆ ನಿಗಾ ಇಡುವ ಅಧಿಕಾರ ಸ್ಪೀಕರ್ ಅವರಿಗಿದೆ. ಯಾವ ಇಲಾಖೆಯಲ್ಲಿ ಕೆಲಸವಾಗದಿದ್ದರೂ ಅದನ್ನು ಪ್ರಶ್ನಿಸುವ ಪರಮಾಧಿಕಾರ ಹೊಂದಿದ್ದಾರೆ. ವಿಧಾನಸಭೆಯಲ್ಲಿ ಸ್ಪೀಕರ್ ಅವರ ರೂಲಿಂಗ್ ಅಂತಿಮವಾದದ್ದು. ಅಂತಹ ಉನ್ನತ ಹುದ್ದೆ ದಕ್ಷಿಣ ಕನ್ನಡ ಜಿಲ್ಲೆಗೆ ಎರಡನೇ ಬಾರಿ ಪ್ರಾಪ್ತಿಯಾಗಿದೆ.
ಖಾದರ್ ಅವರು ಮಂಗಳೂರು(ಉಳ್ಳಾಲ) ಕ್ಷೇತ್ರವನ್ನು ಸತತ 5ನೇ ಬಾರಿಗೆ ಪ್ರತಿನಿಧಿಸುತ್ತಿದ್ದಾರೆ. ವಯಸ್ಸಿನಲ್ಲಿ ಕಿರಿಯವನಾದರೂ 5 ಬಾರಿ ಶಾಸಕನಾಗಿ ಅನುಭವದಲ್ಲಿ ಹಿರಿಯವರಾಗಿದ್ದಾರೆ. 2008ರಿಂದ 2013ರ ಅವಧಿಯ ವಿಧಾನಸಭೆಯಲ್ಲಿ ಅತ್ಯುತ್ತಮ ಕಾರ್ಯ ವೈಖರಿಗಾಗಿ ಸದನ ವೀರ ಹಾಗೂ ಶೈನಿಂಗ್ ಇಂಡಿಯಾ ಅವಾರ್ಡ್ ಖಾದರ್ ಗಳಿಸಿದ್ದರು. 2013ರ ಸಿದ್ದರಾಮಯ್ಯ ಸರಕಾರದಲ್ಲಿ ಆರೋಗ್ಯ ಸಚಿವರಾಗಿ 2016ರ ತನಕ ಕಾರ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ರಾಜ್ಯದಲ್ಲಿ ಗುಟ್ಕಾ ನಿಷೇಧ,ಬೈಕ್ಅಂಬ್ಯುಲೆನ್ಸ್,108, ಆರೋಗ್ಯಶ್ರೀ, ದಂತ ಭಾಗ್ಯ, ಸರಕಾರೀ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ, ಹರೀಶ್ ಸಾಂತ್ವನ ಯೋಜನೆ ಮುಂತಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು ಕೇಂದ್ರ ಸರಕಾರ ನೀಡುವ ಉತ್ತಮ ಆರೋಗ್ಯ ಸಚಿವ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿದ್ದರು.
ನಂತರ 2016 ರಿಂದ 2018ರ ತನಕ ಆಹಾರ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಬಡವರು ಪಡಿತರ ಚೀಟಿಗಾಗಿ ಸಲ್ಲಿಸಬೇಕಾಗಿದ್ದ 10ರಿಂದ 13 ದಾಖಲೆಗಳನ್ನು ಕಡಿತಗೊಳಿಸಿ ಕೇವಲ ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಿ ಮನೆ ಬಾಗಿಲಿಗೆ ರೇಷನ್ ಕಾರ್ಡ್ ತಲುಪಿಸುವ ಕ್ರಾಂತಿಕಾರಿ ಯೋಜನೆಗೆ ಚಾಲನೆ ನೀಡಿ ಇತಿಹಾಸ ಸೃಷ್ಟಿಸಿದರು. ಬಿಪಿಎಲ್ ಕಾರ್ಡು ಪಡೆಯಲು ನಿಗದಿಪಡಿಸಿದ್ದ ಆದಾಯ ಮಿತಿಯನ್ನು ಕಡಿತಗೊಳಿಸಿ ಬಿಪಿಎಲ್ ಕಾರ್ಡ್ ನಿಂದ ವಂಚಿತರಾಗಿದ್ದ ಲಕ್ಷಾಂತರ ಮಂದಿ ರೇಷನ್ ಕಾರ್ಡ್ ಪಡೆಯಲು ನೆರವಾದರು.
2018ರ ಮೈತ್ರಿ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮಂಗಳೂರು ಸ್ಮಾರ್ಟ್ ಸಿಟಿ ಸಹಿತ ಅನೇಕ ಯೋಜನೆಗಳನ್ನು ಪರಿಚಯಿಸಲು ಕಾರಣರಾದರು.
ಕರ್ನಾಟಕ ವಸತಿ ನಿಗಮದ ಅಧ್ಯಕ್ಷರಾಗಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿ, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ನ ಅಧ್ಯಕ್ಷರಾಗಿ, ಕರ್ನಾಟಕ ಕೊಳಗೇರಿ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
2021ರಲ್ಲಿ ಕರ್ನಾಟಕ ವಿಧಾನಸಭೆ ಪ್ರತಿಪಕ್ಷದ ಉಪ ನಾಯಕರಾಗಿ ಆಯ್ಕೆಯಾಗಿ 2023 ರ ವರೆಗೆ ಕಾರ್ಯ ನಿರ್ವಹಿಸಿ ಪ್ರತೀ ಹಂತದಲ್ಲೂ ಸರಕಾರದ ನ್ಯೂನತೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸೈ ಎನಿಸಿ ಕೊಂಡಿದ್ದರು.