ಇತ್ತೀಚಿನ ಸುದ್ದಿ
ಬೆಡ್ತಿ ವರದಾ ನದಿ ಜೋಡಣೆಗೆ ಪಕ್ಷಾತೀತ ಹೋರಾಟ ಅಗತ್ಯ: ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
10/08/2025, 23:48

ಹಾವೇರಿ(reporterkarnataka.com): ಬೆಡ್ತಿ ವರದಾ ನದಿ ಜೋಡಣೆಗೆ ಜನ ಶಕ್ತಿ ಪ್ರಕಟ ಆಗಿದ್ದು, ಜನ ಶಕ್ತಿಯ ಮುಂದೆ ಯಾವುದೂ ದೊಡ್ಡದಿಲ್ಲ. ಹಳ್ಳ ಹಳ್ಳ ಸೇರಿ ನದಿಯಾದಂತೆ ರೈತರ ಹಳ್ಳ ದೊಡ್ಡ ನದಿಯಾಗಿ ಹರಿಯುತ್ತದೆ. ಈ ಯೋಜನೆಗಾಗಿ ಪಕ್ಷಾತೀತ ಹೋರಾಟ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯ ಶ್ರೀ ಹುಕ್ಕೇರಿಮಠದ ಆವರಣದಲ್ಲಿ ಏರ್ಪಡಿಸಿದ ವರದಾ ಹಾಗೂ ಬೇಡ್ತಿ ನದಿಗಳ ಜೋಡಣೆ ಕಾಮಗಾರಿಯ ಕುರಿತಾದ ಮಹತ್ವದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನೀರು ಭಗವಂತ ಕೊಟ್ಟಿರುವ ದೊಡ್ಡ ವರ. ನೀರಿನ ಮಹತ್ವ ಏನಿದೆ ಎಂದರೆ ನೀರಿಗೆ ಸಾವಿಲ್ಲ. ನೀರು ಬೇರೆ ಬೇರೆ ರೂಪ ತಾಳಿದರೂ ಮತ್ತೂ ಈ ಪರಿಸರದಲ್ಲಿ ಇರುತ್ತದೆ. ನಾವು ಶಾಲೆಯಲ್ಲಿ ಇದ್ದಾಗ ವಾಟರ್ ಸೈಕಲ್ ಅಂತ ಹೇಳುತ್ತಿದ್ದರು. ನೀರು ಆವಿಯಾಗಿ ಮೋಡವಾಗಿ ಮಳೆಯಾಗಿ ಮತ್ತೆ ಹಳ್ಳ, ನದಿಯಾಗಿ ಹರಿಯತ್ತದೆ. ಮನುಷ್ಯ ಪ್ರಾಣಿಗಳಿಗೆ ಬದುಕಿನ ದಾಹ ತೀರಿಸಲು ನೀರು ಬೇಕು. ನಮ್ಮ ಬದುಕಿಗೆ ಉದ್ಯೋಗಕ್ಕೆ, ಬೇರೆ ವಸ್ತುಗಳ ತಯಾರಿಕೆಗೆ ನೀರು ಬೇಕು.
ಒಂದೊಂದು ನದಿಗಳು ಒಂದೊಂದು ಸಂಸ್ಕೃತಿ ಉದಯಕ್ಕೆ ಕಾರಣವಾಗಿದೆ. ನೀರು ಔಷಧಿಯೂ ಹೌದು ಎಂದು ಅವರು ನುಡಿದರು.
*ನೀರು ಎಲ್ಲರಿಗೂ ಸೇರಿದ್ದು:*
ನಾನು ದಾವೋಸ್ ಗೆ ಹೋದಾಗ ದಾವೋಸ್ ಸಮಾವೇಶದಲ್ಲಿ ವಿಶ್ವಬ್ಯಾಂಕ್ ಅಧ್ಯಕ್ಷರು, 117 ದೇಶಗಳ ಪ್ರಧಾನಿಗಳು ಇದ್ದರು, ಅದರಲ್ಲಿ ನನಗೆ ಮಾತನಾಡಲು ಹತ್ತು ನಿಮಿಷ ಸಮಯ ಕೊಟ್ಟಿದ್ದರು. ನೀರು ಯಾರಿಗೆ ಸೇರಿದ್ದು, ಒಬ್ಬ ವ್ಯಕ್ತಿಗೆ ಸೇರಿದ್ದಾ, ಸಮಾಜಕ್ಕೆ ಸೇರಿದ್ದಾ, ಒಂದು ದೇಶಕ್ಕೆ ಸೆರಿದ್ದಾ ಎನ್ನುವ ಬಗ್ಗೆ ಮಾತನಾಡಿದ್ದೆ. ನೀರಿನ ನಿರ್ವಹಣೆಗೆ ಬಹಳ ಸ್ಪಷ್ಟತೆ ಇರಬೇಕು. ನೀರು ಎಲ್ಲರಿಗೂ ಸೇರಿದ್ದು ನೀರಿನ ಸಮಸ್ಯೆ ಲೋಕಲ್ ನಿಂದ ಗ್ಲೋಬಲ್ ವರೆಗೂ ಇದೆ.
ಕೆರೆಗಳು ಮತ್ತು ಹಳ್ಳಗಳ ನಡುವೆ ನದಿ ದೊಡ್ಡ ಸಂಪರ್ಕ. ನದಿಗಳ ನಿರ್ವಹಣೆಯಿಂದ ನೀರಿನ ಬಳಕೆ ಮಾಡಿಕೊಳ್ಳಬೇಕು. ಹಲವಾರು ನದಿಗಳು ಸಮುದ್ರವನ್ನೇ ಸೇರುವುದಿಲ್ಲ ಹಲವಾರು ನದಿಗಳು ಬತ್ತಿ ಹೋಗುತ್ತಿವೆ. ಅದಕ್ಕಾಗಿ ಬೇಸಿಗೆಯಲ್ಲಿ ತುಂಗಭದ್ರಾ ಭಾಗದಲ್ಲಿ ಹಾವೇರಿ, ಗದಗ, ಶಿರಹಟ್ಟಿ ರಾಣೆಬೆನ್ನೂರು ನಗರಗಳಿಗೆ ನಿರಿನ ಸಮಸ್ಯೆ ಇದೆ. ಎರಡನೇ ಬೆಳೆಗೆ ನೀರು ಸಿಗುತ್ತಿಲ್ಲ ಎಂದರು.
ಕರ್ನಾಟಕದ ಮಟ್ಟಿಗೆ ನಿಸರ್ಗ ನಮಗೆ ಕನಿಕರ ತೋರಿದೆ. ಬಹುತೇಕ ನದಿಗಳು ಪಶ್ಚಿಮ ಘಟ್ಟದಲ್ಲಿ ಹುಟ್ಟುತ್ತವೆ. ಕೃಷ್ಣಾ, ತುಂಗ ಭದ್ರಾ ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಜೆ ಹರಿಯುತ್ತವೆ. ಕಾಳಿ, ನೇತ್ರಾವತಿ ನದಿಗಳು ಪಶ್ಚಿಮದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುತ್ತವೆ. ಮಾನವನಿಗೆ ಒಂದು ಸವಾಲಿದೆ. ಕೆಲವೊಮ್ಮೆ ನಾವು ಆಡುವ ಮಾತು ಸಮಸ್ಯೆಗೆ ಪರಿಹಾರ ಆಗಬೇಕೆ ಹೊರತು ಸಮಸ್ಯೆ ಹುಟ್ಟುಹಾಕಬಾರದು. ಪಶ್ಚಿಮದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ನದಿಗಳ ಬಳಕೆ ಮಾಡಿಕೊಳ್ಳುವುದು ದೊಡ್ಡ ಸವಾಲಿದೆ. ಇಲ್ಲಿ ಪರಿಸರ, ಅರಣ್ಯ, ಜೀವ ವೈವಿಧ್ಯಕ್ಕೆ ಸಮಸ್ಯೆ ಆಗುತ್ತದೆ. ಸುಮಾರು ನೂರು ಎಕರೆ ಮುಳುಗಡೆ ಆಗುತ್ತದೆ ಎಂದರೆ ಅದಕ್ಕೆ ವಿರೋಧ ವ್ಯಕ್ತವಾಗಿ ಸುಪ್ರಿಂ ಕೋರ್ಟ್ವಗೆ ಹೋಗುತ್ತದೆ. ಮಹಾದಾಯಿ ವಿಚಾರದಲ್ಲಿ ಕೇವಲ ಗೋವಾದವರು ವಿರೋಧಿಸಲಿಲ್ಲ ನಮ್ಮ ಕರ್ನಾಟಕದ ಪರಿಸರ ವಾದಿಗಳು ವಿರೋಧಿಸಿದ್ದರು ಎಂದು ನುಡಿದರು.
*ಕೇಂದ್ರದಿಂದ ಸಕಾರಾತ್ಮಕ ಭರವಸೆ:*
ಬೆಡ್ತಿ ನದಿ ದೊಡ್ಡ ಪ್ರಮಾಣದಲ್ಲಿ ನೀರು ಉತ್ಪಾದನೆ ಮಾಡುವ ನದಿ. ನದಿಜೋಡಣೆ ಯೋಜನೆ ವಾದ ಸುಮಾರು ವರ್ಷಗಳಿಂದ ಇದೆ. ನದಿ ಜೋಡಣೆ ವಿಚಾರವನ್ನು ರಾಷ್ಟ್ರೀಯ ವಿಚಾರವಾಗಿ ಮಾಡಿದವರು ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ನದಿ ಜೋಡಣೆ ವಿಚಾರಗಳು ಬೇರೆ ಕಡೆಯೂ ಇದೆ. ವಿಂದ್ಯ ಪರ್ವತದ ಕೆಳಗಡೆ ಇರುವ ಯೋಜನೆಗಳಿಗೆ ಬಹಳ ದೊಡ್ಡ ಪ್ರಮಾಣದ ಚಾಲೆಂಜ್ ಇದೆ. ನದಿ ಜೋಡಣೆಯಿಂದ ಒಂದು ಪ್ರವಾಹ ನಿಯಂತ್ರಿಸುವುದು ಮತ್ತು ಎಲ್ಲಿ ನೀರಿಲ್ಲವೋ ಅಲ್ಲಿ ನೀರು ಬಳಕೆ ಮಾಡಿಕೊಳ್ಳುವುದು. ವರದಾ ಬೆಡ್ತಿ ನದಿ ಜೋಡಣೆ ಮೊದಲನೇ ಪ್ರಾಸ್ಪೆಕ್ಟಿವ್ ಯೋಜನೆಯಲ್ಲಿ ಇದೆ. 2005 ರಲ್ಲಿ ಅದಕ್ಕೆ ಮಂಜುನಾಥ ಕೊನ್ನೂರು ಕಾರಜೋಳ ಸಾಹೇಬರು ಜಾರಿ ಮಾಡಲು ಮುಂದಾದಾಗ ಬಹಳ ವಿರೋಧ ವ್ಯಕ್ತವಾಯಿತು. ಇದಕ್ಕೆ ಪರಿಸರದ ಸಮಸ್ಯೆ ಏನಿದೆ ಅಂತ ನಾನು ಜಲ ಸಂಪನ್ಮೂಲ ಸಚಿವ ಆಗಿದ್ದಾಗ ಪರಿಶಿಲಿಸಿ 2017 ರಲ್ಲಿ ಕೆಲವು ಬದಲಾವಣೆ ಮಾಡಲಾಯಿತು. 2022 ರಲ್ಲಿ ಮತ್ತೊಂದು ಬದಲಾವಣೆ ಮಾಡಲಾಯಿತು. ಎರಡು ಪ್ರಸ್ತಾವಣೆಗಳಿವೆ ಒಂದು ವರದಾ ಬೆಡ್ತಿ, ಇನ್ನೊಂದು ಬೆಡ್ತಿ ಧರ್ಮಾ ವರದಾ ಲಿಂಕ್ ಯೋಜನೆ. ಇನ್ನೂ ಡಿಪಿಆರ್ ಅಗಿಲ್ಲ. ಫ್ರೀ ಫಿಜಿಬಲ್ ರಿಪೋರ್ಟ್ ಇದೆ. ಬೆಂಗಳೂರಿನಲ್ಲಿ ಇದನ್ನು ಒಪ್ಪಿಗೆ ಕೊಟ್ಟಿದ್ದಾರೆ. ನಾನು ಕೇಂದ್ರ ನೀರಾವರಿ ಸಚಿವ ಸಿ.ಆರ್. ಪಾಟಿಲರು, ರಾಜ್ಯ ಸಚಿವ ವಿ ಸೋಮಣ್ಣ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಅವರಿಂದ ಒಂದು ವಾರದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಬರುವ ಭರವಸೆ ಇದೆ ಎಂದರು
*ರೈತರಿಗೆ ನೀರಾವರಿ ಜ್ಞಾನ ಅಗತ್ಯ;*
ಡಿಪಿಆರ್ ಆದ ಮೇಲೆ ಎಷ್ಟು ನೀರು ಬಳಕೆ ಮಾಡಿಕೊಳ್ಳಬೇಕು ಹೀರೆಹಳ್ಳ, ಬೆಡ್ತಿ, ಶಾಲ್ಮಲಾ ಹಳ್ಳ ಇವೆ. ವರದಾ ನದಿಯಲ್ಲಿ ಎಷ್ಟು ನೀರು ಸಿಗುತ್ತದೆ ಅದು ನಮಗೆ ಬಳಕೆಗೆ ಬರುತ್ತದೆ. ಅದು ಹಾವೇರಿ ಜಿಲ್ಲೆಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ.
ಅದರ ಜೊತೆಗೆ ಈ ನೀರನ್ನು ಎಲ್ಲಿ ಸಂಗ್ರಹ ಮಾಡುತ್ತೇವೆ ಎನ್ನುವುದು ಮುಖ್ಯ ಫಲವತ್ತಾದ ಭೂಮಿ ಮುಳುಗದಂತೆ ನೋಡಬೇಕು. ಪ್ರತಿಯೊಂದು ಹಂತದಲ್ಲಿ ನಾವು ಜಾಗೃತರಾಗಿ ಕೆಲಸ ಮಾಡಬೇಕು. ಈ ಯೋಜನೆಯ ಪ್ರತಿ ಹಂತದಲ್ಲಿ ಏನು ನಡೆಯುತ್ತದೆ ಎನ್ನುವುದು ಗೊತ್ತಾದಾಗ ನಾವು ಏನು ಮಾಡಬೇಕು ಎನ್ನುವುದು ತಿಳಿಯುತ್ತದೆ.
ಬದಲಾದ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ತೊಂದರೆ ಯಾಗುವುದಿಲ್ಲ ಅಂತ ಅವರಿಗೆ ಮನವರಿಕೆ ಮಾಡಬೇಕು. ಪ್ರಾಮಾಣಿಕತೆ ಇದ್ದರೆ ಎಲ್ಲ ಸಮಸ್ಯೆಗೂ ಪರಿಹಾರ ಇದೆ. ಸುಮಾರು 26 ಟಿಎಂಸಿ ನೀರುನ್ನು ನಾವು ಯಾವ ರೀತಿ ಪಡೆದುಕೊಳ್ಳಬೇಕು ಎನ್ನುವುದನ್ನು ಚಿಂತನೆ ಮಾಡಬೇಕು. ಇದು ಒಂದೇ ದಿನದಲ್ಲಿ ಅಗುವುದಿಲ್ಲ. ಸುದೀರ್ಘ ಪ್ರಕ್ರಿಯೆ ಇದೆ. ಅದಕ್ಕಾಗಿ ನಾವು ಸಿದ್ದರಾಗಬೇಕು.
ನಮ್ಮ ಜಿಲ್ಲೆಗೆ ನೀರು ಬೇಕು ಎನ್ನುವುದುಕ್ಕೆ ನಾವು ರಾಜಕಾರಣ ಮಾಡಬೇಕು. ಆದರೆ, ಪಕ್ಷಾತೀತವಾಗಿ ನಾವು ಹೋರಾಟ ಮಾಡಬೇಕು.
ಆಲಮಟ್ಟಿ ಎತ್ತರ ಹೆಚ್ಚಳ ಮಾಡಲು ಮಹಾರಾಷ್ಟ್ರದ ಎಲ್ಲ ಪಕ್ಷದ ಸದಸ್ಯರು ಒಟ್ಟಾಗಿ ವಿರೋಧಿಸಿದ್ದಾರೆ. ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಎಲ್ಲ ಪಕ್ಷದ ಮುಖಂಡರು ಒಟ್ಟಾಗಿ ಬರುತ್ತಾರೆ. ನಮ್ಮ ರೈತರಿಗೆ ಕುಡಿಯುವ ನೀರು ಸಿಗುವಂತೆ ಮಾಡಲು ಎಲ್ಲರೂ ಸೇರಿ ಕೆಲಸ ಮಾಡಬೇಕು. ಅದಕ್ಕಾಗಿ ಎಲ್ಲಾ ಶಾಸಕರು, ರೈತ ಸಂಘದ ಸದಸ್ಯರು, ಸ್ವಾಮೀಜಿಗಳ ಆಶೀರ್ವಾದದಿಂದ ಒಂದು ಸಮಿತಿ ಮಾಡಿ ಮುಂದಿನ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು.
*ಸಕಾರಾತ್ಮಕ ರಾಜಕಾರಣ ಆರಂಭ:*
ನೀರಾವರಿಯ ಮೇನ್ ಕ್ಯಾನಾಲ್ ಮಾಡುವಾಗ ಜವುಳ ಆಗುತ್ತೆ ಎತ್ತರ ಆಗುತ್ತೆ ಅನ್ನುವ ಸಮಸ್ಯೆ ಇರುತ್ತದೆ. 2.15 ಲಕ್ಷ ಎಕರೆ ಜಮೀನು ಸವಳು ಜವಳು ಇದೆ. ಅದರಲ್ಲಿ 1.25 ಲಕ್ಷ ಎಕರೆ ಸವಳು ಜವಳು ತೆರೆವು ಮಾಡುವ ಕೆಲಸ ಮಾಡಿದ್ದೆ ಇದರಿಂದ 20 ಟಿಎಂಸಿ ನೀರು ಉಳಿಸಿದ್ದೇವೆ. ನೀರಿನ ನಿರ್ವಹಣೆಯೂ ಬಹಳ ಮುಖ್ಯ. ಅತ್ಯಂತ ಪ್ರಮಾಣಿಕವಾಗಿ ಸದುದ್ದೇಶದಿಂದ ಈ ಪ್ರಯತ್ನ ಆರಂಭಿಸಿದ್ದೇನೆ. ಇದರ ಬಗ್ಗೆ ಚರ್ಚೆಯಾಗಬೇಕು. ಜನರಿಗೆ ಗೊತ್ತಾಗಬೇಕು. ಸರ್ಕಾರಿ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವೂ ಒಂದೇ. ಮಹಾರಾಷ್ಟ್ರ ಹಾಗೂ ತಮಿಳು ನಾಡಿನ ರೈತರಿಗೆ ಇರುವ ರೀತಿ ನಮ್ಮ ರಾಜ್ಯದ ರೈತರಿಗೆ ನೀರಾವರಿ ಬಗ್ಗೆ ಮಾರ್ಗದರ್ಶನ ಬೇಕು. ಜ್ಞಾನ ಬರಬೇಕು. ಇದಕ್ಕೆ ಅಡತಡೆಗಳು ಬಂದೆ ಬರುತ್ತವೆ. ಅವುಗಳನ್ನು ದಾಟಿ ಗುರಿ ಮುಟ್ಟಬೇಕು. ಜನ ಶಕ್ತಿಯ ಮುಂದೆ ಯಾವುದೂ ದೊಡ್ಡದಿಲ್ಲ. ಜನ ಶಕ್ತಿ ಪ್ರಕಟ ಆಗಿದೆ. ಅದು ಇಲ್ಲಿಂದ ಪ್ರಾರಂಭವಾಗಿದೆ. ಹಳ್ಳ ಹಳ್ಳ ಸೇರಿ ನದಿ, ಬೆಡ್ತಿ ಹಳ್ಳ ಸೇರಿ ತುಂಗಭದ್ರಾ ದೊಡ್ಡ ನದಿಯಾಗಿ ಹರಿದಂತೆ ನಮ್ಮ ರೈತರ ಹಳ್ಳ ದೊಡ್ಡ ನದಿಯಾಗಿ ಹರಿಯುತ್ತದೆ. ಮಂಜುನಾಥ ಕೊನ್ನೂರು ಅವರಿಗೆ ಬೆಡ್ತಿ ವರದಾ ಹೋರಾಟದಲ್ಲಿ ಅವರ ಬಹಳ ಪಾತ್ರ ಇದೆ. ಅವರಿಗೆ ರಾಜಕೀಯವಾಗಿ ತೊಂದರೆಯಾಗಿದೆ. ಅವರ ನಿಲುವು ಹೋರಾಟಕ್ಕೆ ದೇವರು ವರ ಕೊಡುತ್ತಾನೆ. ನಮ್ಮ ವಿಚಾರ ಬೇರೆ ಇದ್ದರೂ ಉದ್ದೇಶ ಗುರಿ ಒಂದೆ ಅದನ್ನು ನಾವೆಲ್ಲ ಸೇರಿ ಸಾಧಿಸಿಸೋಣ. ಹಾವೇರಿ ಜಿಲ್ಲೆಯಲ್ಲಿ ಸಕಾರಾತ್ಮಕ ರಾಜಕಾರಣ ಆರಂಭವಾಗುತ್ತದೆ. ಬೆಡ್ತಿ ವರದಾ ಜೋಡಣೆ ಆಗಲೇಬೇಕು ಎಂದು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿ ಮಠ, ಹಾವೇರಿ, ಶ್ರೀ ಮ.ನಿ.ಪ್ರ ಬಸವ ಶಾಂತಲಿಂಗ ಮಹಾಸ್ವಾಮಿಗಳು, ಹೊಸಮಠ, ಹಾವೇರಿ, ಶ್ರೀ ಮ.ನಿ.ಪ್ರ ಶಿವಬಸವ ಮಹಾಸ್ವಾಮಿಗಳು, ವಿರಕ್ತಮಠ, ಅಕ್ಕಿಆಲೂರ, ಶ್ರೀ ಮ.ನಿ.ಪ್ರ ಕುಮಾರ ಮಹಾಸ್ವಾಮಿಗಳು, ಅಡವಿ ಸ್ವಾಮಿಮಠ, ಸವಣೂರ ಶ್ರೀಗಳವರು ಸಾನಿಧ್ಯ ವಹಿಸಿದ್ದರು. ಮಾಜಿ ಸಂಸದರಾದ ಮಂಜುನಾಥ ಕುನ್ನೂರು, ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನ, ಅರುಣಕುಮಾರ ಪೂಜಾರ, ಡಿ.ಎಂ ಸಾಲಿ, ರೈತ ಸಂಘದ ಮುಖಂಡರುಗಳಾದ ಎ.ಎಸ್ ಬಳ್ಳಾರಿ, ರಾಮಣ್ಣ ಕೆಂಚೆಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಮಾಳಗಿ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಾತೇನಹಳ್ಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.