ಇತ್ತೀಚಿನ ಸುದ್ದಿ
ನೀರಿದ್ದ ರಸ್ತೆಯಲ್ಲಿ ಸ್ಕೂಟಿ ಸ್ಕಿಡ್: ನೆಲಕ್ಕೆ ಬಿದ್ದ ಯುವತಿ ವಿದ್ಯುತ್ ಕಂಬ ಹಿಡೆದಾಗ ಕರೆಂಟ್ ಶಾಕ್ ಹೊಡೆದು ಸಾವು
06/09/2022, 18:44
ಬೆಂಗಳೂರು(reporterkarnataka.com): ಬಿಬಿಎಂಪಿ ಹಾಗೂ ಬೆಸ್ಕಾಂ ನಿರ್ಲಕ್ಷ್ಯದಿಂದ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸಾವು ಸಂಭವಿಸಿದೆ. ಸ್ಕೂಟರ್ ಸ್ಕಿಡ್ ಆಗಿ ಬಿದ್ದ ಯುವತಿ ಸಾವನ್ನಪ್ಪಿದ್ದಾರೆ. ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ಈ ದುರ್ಘಟನೆ ನಡೆದಿದೆ.
ನೀರು ನಿಂತ ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದಿದೆ. ಸ್ಕೂಟಿ ರೈಡ್ ಮಾಡುತ್ತಿದ್ದ ಯುವತಿ ಮೇಲೆಳಲು ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬವನ್ನು ಆಶ್ರಯಿಸಿದಾಗ ವಿದ್ಯುತ್ ಹರಿದು ಯುವತಿ ಸಾವನ್ನಪ್ಪಿದ್ದಾರೆ. ಮೃತಪಟ್ಟ ಯುವತಿಯನ್ನು ಅಖಿಲಾ (23) ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ 9 ಗಂಟೆ ಸಮಯದಲ್ಲಿ ವೈಟ್ ಫೀಲ್ಡ್ -ಮಾರತಹಳ್ಳಿ ಮುಖ್ಯರಸ್ತೆಯ ಸಿದ್ದಾಪುರದಲ್ಲಿ ಘಟನೆ ನಡೆದಿದೆ. ಭಾರಿ ಮಳೆಯ ಕಾರಣ ರಸ್ತೆಯಲ್ಲಿ ನೀರು ನಿಂತಿತ್ತು.
ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಖಿಲಾ, ಸ್ಕೂಟಿಯಲ್ಲಿ ಮನೆಗೆ ಮರಳುತ್ತಿದ್ದರು. ನೀರು ನಿಂತ ರಸ್ತೆಯಲ್ಲಿ ಸ್ಕೂಟಿ ಸ್ಕಿಡ್ ಆಗಿ ಬಿದ್ದಿದೆ.
ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬ ಹಿಡಿದಿದ್ದು, ಮೈಮೇಲೆ ವಿದ್ಯುತ್ ಹರಿದಿದೆ ಎಂದು ತಿಳಿದುಬಂದಿದೆ.
ವಿದ್ಯುತ್ ಕಂಬಗಳ ನಿರ್ವಹಣೆ ಸರಿಯಾಗಿ ಇಲ್ಲದೇ ಇರುವುದೇ ದುರ್ಘಟನೆಗೆ ಕಾರಣ ಎಂದು ಕುಟುಂಬಸ್ಥರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ವೈಟ್ ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.














