ಇತ್ತೀಚಿನ ಸುದ್ದಿ
ನಿರ್ಗಮಿತ ರಾಷ್ಟ್ರಪತಿ ಕೋವಿಂದ್‌ಗೆ ಪ್ರಧಾನಿ ಅವಮಾನ ಮಾಡಿದ್ರಾ?: ಎಎಪಿ ಆರೋಪಕ್ಕೆ ವಿಡಿಯೋ ಸಹಿತ ಬಿಜೆಪಿ ತಿರುಗೇಟು
25/07/2022, 10:10
ಹೊಸದಿಲ್ಲಿ(reporterkarnataka.com): ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವಮಾನ ಮಾಡಿದರು ಎಂಬ ಎಎಪಿ ಆರೋಪಕ್ಕೆ ಬಿಜೆಪಿ ಅಸಲಿ ವಿಡಿಯೋ ಸಹಿತ ತಿರುಗೇಟು ನೀಡಿದೆ. ಈ ನಡುವೆ ಎಎಪಿ ನಾಯಕರು ಪೇಚಿಗೆ ಸಿಲುಕಿದ್ದಾರೆ.
ಕೋವಿಂದ್‌ಗೆ ಆವರ ಬೀಳ್ಕೂಡುಗೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ವಿಡಿಯೋವನ್ನು ಆಮ್ ಆದ್ಮಿ ಪಾರ್ಟಿ ನಾಯಕ ಸಂಜಯ್ ಸಿಂಗ್ ಪೋಸ್ಟ್ ಮಾಡಿದ ಬೆನ್ನಲ್ಲೇ ಬಿಜೆಪಿ ಮತ್ತೊಂದು ವಿಡಿಯೋ ಬಹಿರಂಗ ಮಾಡಿ ಎಎಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.
ಸಿಎಂ ಅರವಿಂದ್ ಕೇಜ್ರಿವಾಲ್, ಮನೀಶ್ ಸೋಸಿಡಿಯಾ ರೀತಿ ಸಂಜಯ್ ಸಿಂಗ್ ಕೂಡ ಸುಳ್ಳನ್ನೇ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಅಸಲಿ ವಿಡಿಯೋ ಇಲ್ಲಿದೆ. ಈ ವಿಡಿಯೋ ನೋಡಿ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ಬೀಳ್ಕೂಡುಗೆ ಸಮಾರಂಭಕ್ಕೆ ಸಂಸತ್ ಭವನಕ್ಕೆ ಬಂದ ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಎಲ್ಲರಿಗೂ ನಮಸ್ಕಾರ ಮಾಡುತ್ತಾ ಬಂದಿದ್ದಾರೆ. ಈ ವೇಳೆ ಪ್ರಧಾನಿ ಮೋದಿಗೆ ನಮಸ್ಕಾರ ಮಾಡಿದರೂ ಮೋದಿ ಮಾತ್ರ ರಾಮ್‌ನಾಥ್ ಕೋವಿಂದ್‌ರತ್ತ ನೋಡದೆ ನಿರ್ಲಕ್ಷಿಸುತ್ತಿರುವ ದೃಶ್ಯವನ್ನು ಆಮ್ ಆದ್ಮಿ ಪಾರ್ಟಿ ಪೋಸ್ಟ್ ಮಾಡಿದೆ. ಅಲ್ಲದೆ ಇಂತಹ ಅವಮಾನ ಸಲ್ಲದು, ಕ್ಷಮಿಸಿ ಸರ್, ಈ ವ್ಯಕ್ತಿಗಳು ಹೀಗೆ. ನಿಮ್ಮ ಅವಧಿ ಮುಗಿದಿದೆ. ಇನ್ನು ನಿಮ್ಮ ಮುಖ ನೋಡುವುದಿಲ್ಲ ಎಂದು ಅಪ್ ನ ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋಗೆ ಆಮ್ ಆದ್ಮಿ ಸೇರಿದಂತೆ ಹಲವು ವಿಪಕ್ಷಗಳ ನಾಯಕರು ಕಮೆಂಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಹಲವರು ಈ ವಿಡಿಯೋವನ್ನು ಹಂಚಿಕೊಂಡು, ಪ್ರಧಾನಿ ಮೋದಿ ನಡೆ ಕುರಿತು ಪ್ರಶ್ನಿಸಿದ್ದಾರೆ.
ಆದರೆ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಆಮ್ ಆದ್ಮಿ ಪಾರ್ಟಿ ಅಸಲಿಯತ್ತನ್ನು ಬಹಿರಂಗ ಪಡಿಸಿದೆ. ಎಡಿಟ್ ವಿಡಿಯೋ ಬದಲು ಪೂರ್ಣ ವಿಡಿಯೋವನ್ನು ಹಾಕಿ, ಇಲ್ಲಿದೆ ಸತ್ಯ ಎಂದಿದೆ.
ಅಮಿತ್ ಮಾಳವಿಯಾ ಹಾಕಿರುವ ವಿಡಿಯೋದಲ್ಲಿ ರಾಮನಾಥ್ ಕೋವಿಂದ್ ಎಲ್ಲರಿಗೂ ನಮಸ್ಕಾರ ಮಾಡುತ್ತಾ ಬರುವ ವಿಡಿಯೋವಿದೆ. ಈ ವೇಳೆ ಮೋದಿಗೂ ಕೋವಿಂದ್ ನಮಸ್ಕಾರ ಮಾಡಿದ್ದಾರೆ. ಇತ್ತ ಮೋದಿ ಕೂಡ ನಮಸ್ಕಾರ ಮಾಡಿ ಗೌರವ ಸಲ್ಲಿಸಿದ್ದಾರೆ. ಮೋದಿ ಬಳಿಕ ಕೋವಿಂದ್, ಪಿಯೂಷ್ ಗೊಯೆಲ್ ಹಾಗೂ ಮೋದಿ ಹಿಂಭಾಗದಲ್ಲಿದ್ದ ಸಂಸದರಿಗೆ ನಮಸ್ಕಾರ ಮಾಡಿದ್ದಾರೆ. ಇಲ್ಲಿ ಯಾರೂ ಕೂಡ ಕೋವಿಂದ್‌ಗೆ ಅವಮಾನ ಮಾಡಿಲ್ಲ. ಅದರಲ್ಲೂ ಆಮ್ ಆದ್ಮಿ ವಿಡಿಯೋ ತುಣುಕು ಹಾಕಿ ಆರೋಪ ಮಾಡಿ ಇದೀಗ ಪೇಚಿಗೆ ಸಿಲುಕಿದೆ.