ಇತ್ತೀಚಿನ ಸುದ್ದಿ
ನಿಗದಿತ ಅವಧಿಯೊಳಗೆ ಎಲ್ಲ ಜಿಲ್ಲೆಗಳಲ್ಲಿ ಇಂದಿರಾ ಕ್ಯಾಂಟೀನ್: ಬೆಳಗಾವಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಬೈರತಿ ಸುರೇಶ್
08/10/2023, 11:53
ಬೆಳಗಾವಿ(reporterkarnataka.com): ಸರ್ಕಾರದ ನಿರ್ದೇಶನದಂತೆ ವಿಭಾಗ ಮಟ್ಟದಲ್ಲಿ ಬರುವ ಎಲ್ಲ ಜಿಲ್ಲೆಗಳಲ್ಲಿ ನಿಗದಿತ ಅವಧಿಯೊಳಗೆ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು. ಕುಡಿಯುವ ನೀರು ಪೂರೈಕೆ, ಬೋರ್ವೆಲ್ ಗಳ ದುರಸ್ಥಿ, ಪೈಪ್ ಲೈನ್ ಅಳವಡಿಕೆ ಸೇರಿದಂತೆ ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ಅವರು ತಿಳಿಸಿದರು.
ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಬೆಳಗಾವಿ ವಿಭಾಗದ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಪ್ರಾಯೋಜಿತ ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳ ಸಮನ್ವಯದೊಂದಿಗೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರದ ಯೋಜನೆಗಳ ಅನುಷ್ಟಾನಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್ ಗಳ ನಿರ್ಲಕ್ಷ್ಯ ತೋರಿದಂತೆ ಸೂಚನೆ:
ಬೆಳಗಾವಿಯ ವಿಭಾಗದಲ್ಲಿನ ಬಾಗಲಕೋಟೆ, ಜಮಖಂಡಿ, ಮುಧೋಳ ತಾಲ್ಲೂಕಿನ ಹೊಸ ಇಂದಿರಾ ಕ್ಯಾಂಟೀನ್ ಪ್ರಾರಂಭಕ್ಕೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ನಿಗದಿತ ಅವಧಿಯೊಳಗೆ ಟೆಂಡರ್ ಕರೆದು ಕ್ಯಾಂಟೀನ್ ಪ್ರಾರಂಭಿಸಬೇಕು.
ಬಡವರಿಗೆ ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಅವಶ್ಯವಿರುವ ಸ್ಥಳಗಳಲ್ಲಿ ತಕ್ಷಣ ಕ್ಯಾಂಟೀನ್ ಪ್ರಾರಂಭಿಸಬೇಕು. ಈ ಕುರಿತು ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂದು ಬಿ.ಎಸ್.ಸುರೇಶ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕ್ಯಾಂಟೀನ್ ಪ್ರಾರಂಭಕ್ಕೆ ಸ್ಥಳ ಗುರುತಿಸಿ: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 9 ಇಂದಿರಾ ಕ್ಯಾಂಟೀನ್ ಗಳಿವೆ. ಇನ್ನು ಹೊಸದಾಗಿ ಒಟ್ಟು 28 ಇಂದಿರಾ ಕ್ಯಾಂಟೀನ್ ಗಳ ಪ್ರಾರಂಭಕ್ಕೆ ಸ್ಥಳ ಗುರುತಿಸಲಾಗಿದೆ ಎಂದು ನಗರಾಭಿವೃದ್ಧಿ ಕೋಶದಿಂದ ಯೋಜನಾ ನಿರ್ದೇಶಕರಾದ ಮಲ್ಲಿಕಾರ್ಜುನ ಕಲಾದಗಿ ಅವರು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಎಸ್.ಸುರೇಶ್ ಅವರು
ಗೋಕಾಕ್ ತಾಲೂಕಿನಲ್ಲಿ ಈಗಾಗಲೇ ಒಂದು ಕ್ಯಾಂಟೀನ್ ಇದೆ. ಸರ್ಕಾರದ ಮಾರ್ಗಸೂಚಿಯ ಅನ್ವಯ 25 ಸಾವಿರ ಜನಸಂಖ್ಯೆಯಿರುವ ಸ್ಥಳಗಳಲ್ಲಿ 1 ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು. ಗೋಕಾಕ್ ವ್ಯಾಪ್ತಿಯಲ್ಲಿ 79 ಸಾವಿರ ಜನಸಂಖ್ಯೆಯಿರುವ ಸ್ಥಳಗಳಿವೆ ಕೂಡಲೇ ಅಂತಹ ಸ್ಥಳಗಳನ್ನು ಪರಿಶೀಲಿಸಿ ಕ್ಯಾಂಟೀನ್ ಪ್ರಾರಂಭಕ್ಕೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜೆಗೆರಿಸಿದ ಪಟ್ಟಣ ಪಂಚಾಯಿತಿಗಳಲ್ಲಿ ಜನಸಂಖ್ಯಾ ಅನುಗುಣವಾಗಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು. ಕ್ಯಾಂಟೀನ್ ಗಳ ಪ್ರಾರಂಭಕ್ಕೆ ಅಧಿಕಾರಿಗಳ ಇಚ್ಛಾಶಕ್ತಿ ತುಂಬಾ ಮುಖ್ಯ ಹಾಗಾಗಿ ಯಾವುದೇ ಅಧಿಕಾರಿಗಳು ವಿಳಂಬ ತೋರಬಾರದು ಎಂದು ಸೂಚಿಸಿದರು.
ನಿರ್ಲಕ್ಷಿಸಿದರೆ ನೋಟಿಸ್ ಜಾರಿ:
ಧಾರವಾಡ ವ್ಯಾಪ್ತಿಯಲ್ಲಿ ಈಗಾಗಲೇ 8 ಹಳೆಯ ಕ್ಯಾಂಟೀನ್ ಗಳಿವೆ 20 ಹೊಸ ಕ್ಯಾಂಟೀನ್ ಪ್ರಾರಂಭಕ್ಕೆ ಸ್ಥಳ ಗುರುತಿಸಿ, ಟೆಂಡರ್ ಆಹ್ವಾನಿಸಲಾಗುವುದು. ಅದೇ ರೀತಿಯಲ್ಲಿ ಹಾವೇರಿಯಲ್ಲಿ 3 ಇಂದಿರಾ ಕ್ಯಾಂಟೀನ್ ಗಳಿವೆ ಮತ್ತು 7 ಹೊಸ ಕ್ಯಾಂಟೀನ್ ಪ್ರಾರಂಭಕ್ಕೆ ಸ್ಥಳ ಗುರುತಿಸಿ ಸದ್ಯದಲ್ಲೇ ಟೆಂಡರ್ ಕರೆದು ಪ್ರಾರಂಭಕ್ಕೆ ಸೂಚಿಸಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ವಿವರಿಸಿದರು.
ಇಂದಿರಾ ಕ್ಯಾಂಟೀನ್ ಗಳ ಪ್ರಾರಂಭಕ್ಕೆ ಸರ್ಕಾರದ ಹೊಸ ನಿರ್ದೇಶನದಂತೆ ಯಾರು ಕ್ರಮ ವಹಿಸಿಲ್ಲ ಅಂತಹ ಅಧಿಕಾರಿಗಳ ವಿರುದ್ಧ ಕೂಡಲೇ ನೋಟಿಸ್ ಜಾರಿ ಮಾಡುವಂತೆ ಸಚಿವ ಬಿ.ಎಸ್ ಸುರೇಶ್ ಅವರು ಸೂಚಿಸಿದರು.
ಕುಡಿಯುವ ನೀರು ಸರಬರಾಜು: ನಗರಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಯಾವುದೇ ರೀತಿಯ ತೊಂದರೆ ಆಗಬಾರದು. ಅಗತ್ಯ ಸ್ಥಳಗಳಲ್ಲಿ ಬೋರ್ವೆಲ್ ವ್ಯವಸ್ಥೆ ಕಲ್ಪಿಸಬೇಕು. ಅನುದಾನಗಳ ಕೊರತೆಯಾದಲ್ಲಿ ತಕ್ಷಣವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.
ಬೆಳಗಾವಿಯ 38 ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ರೀತಿಯ ನೀರಿನ ತೊಂದರೆ ಆಗಿಲ್ಲ. ಮಾರ್ಚ್ ವರೆಗೂ ನದಿಗಳಲ್ಲಿ ನೀರಿನ ಲಭ್ಯತೆಯಿದೆ. ಅಗತ್ಯ ಸ್ಥಳಗಳಲ್ಲಿ ನೀರಿನ ಕೊರತೆ ಕಂಡುಬಂದಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗುವುದು. ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 786 ಬೋರ್ವೆಲ್ ಗಳಿವೆ. ನಗರದಲ್ಲಿ ಸಮರ್ಪಕ ಕುಡಿಯುವ ನೀರಿನ ಪೂರೈಕೆಯಾಗುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬೆಳಗಾವಿಯ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಹಿಡಕಲ್ ಜಲಾಶಯದಿಂದ ನಗರದವೆರೆಗೆ ಹೊಸ ಪೈಪ್ ಲೈನ್ ಅಳವಡಿಸಲು ಆದೇಶವಿದ್ದು, ಅರಣ್ಯ ಇಲಾಖೆಯಿಂದ ಎನ್.ಓ.ಸಿ ನೀಡದೆ ತಡೆ ಹಿಡಿಯಲಾಗಿದೆ. ಅರಣ್ಯ ಇಲಾಖೆ ಸಚಿವರಾದ ಈಶ್ವರ ಖಂಡ್ರೆಯವರ ಜೊತೆ ಚರ್ಚಿಸಿ ಈಗಾಗಲೇ ಇರುವ ಪೈಪ್ ಲೈನ್ ಬದಿಯಲ್ಲಿ ಹೊಸ ಪೈಪ್ ಲೈನ್ ಅಳವಡಿಸಲು ಕೂಡಲೇ ಎನ್.ಓ.ಸಿ ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ಬೆಳಗಾವಿ ಜಿಲ್ಲೆಯ ಖಾಯಂ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಮನೆ ಹಂಚಿಕೆಗೆ ಕಟ್ಟಡ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಎಲ್ಲ ಜಿಲ್ಲೆಗಳ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರ ಖಾಯಂಗೊಳಿಸಬೇಕಾದ ಅರ್ಹರನ್ನು ಕೂಡಲೇ ಖಾಯಂಗೊಳಿಸಲು ಕ್ರಮ ವಹಿಸಬೇಕು. ಯಾವುದಾದರೂ ತಕರಾರು ಪ್ರಕರಣಗಳಿದ್ದಲ್ಲಿ, ತಕ್ಷಣ ಅಂತಹವುಗಳನ್ನು ಇತ್ಯರ್ಥಪಡಿಸಬೇಕು ಎಂದು ತಿಳಿಸಿದರು.
ತೆರಿಗೆ ಪಾವತಿಗೆ ಕ್ರಮ ವಹಿಸಿ:
ಅಭಿವೃದ್ಧಿ, ಯೋಜನೆಗಳ ಅನುಷ್ಠಾನದ ಜೊತೆಗೆ
ನಗರ ಸ್ಥಳೀಯ ಆಸ್ತಿ ತೆರಿಗೆ , ವಸೂಲಾತಿ ನೀರಿನ ತೆರಿಗೆ ವಸೂಲಾತಿ, ಅಂಗಡಿ ಮಳಿಗೆ ಬಾಡಿಗೆ ವ್ಯಾಪರದ ಪರವಾನಿಗೆ ಲೈಸನ್ಸ್, ಸೇರಿದಂತೆ ಎಲ್ಲಾ ಕೆಲಸಗಳನ್ನು
ತ್ವರಿತಗತಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ನಗರಾಭಿವೃದ್ದಿ ಇಲಾಖೆ ಬಿ.ಎಸ್. ಸುರೇಶ ಅವರು ಸಲಹೆ ನೀಡಿದರು.
ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕ ಗಣೇಶ್ ಹುಕ್ಕೇರಿ, ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಶಾಸಕ ಮಹೇಶ್ ತಮ್ಮಣ್ಣವರ, ಬೆಳಗಾವಿ ಉತ್ತರ ವಿಧಾನಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ಪೌರಾಡಳಿತ ನಿರ್ದೇಶಕರಾದ ಎನ್. ಮಂಜುಶ್ರೀ, ಕೆ.ಯುಐ.ಡಿ.ಎಫ್.ಸಿ ವ್ಯವಸ್ಥಾಪಕ ನಿರ್ದೇಶಕ ಬಿ. ಶರತ್, ಬೆಳಗಾವಿ ವಿಭಾಗದ ಜಿಲ್ಲಾಧಿಕಾರಿಗಳು, ಪಾಲಿಕೆ ಪಾಲಿಕೆ ಆಯುಕ್ತರು, ಜಿಲ್ಲಾ ಮಟ್ಟದ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.