6:33 PM Saturday3 - May 2025
ಬ್ರೇಕಿಂಗ್ ನ್ಯೂಸ್
ತನಿಖೆಯ ಮುನ್ನವೇ ಫಾಝಿಲ್ ಕುಟುಂಬಕ್ಕೆ ಕ್ಲೀನ್ ಚಿಟ್; ಸ್ಪೀಕರ್ ಖಾದರ್ ತಕ್ಷಣ ರಾಜೀನಾಮೆ… Chikkamagaluru | ಪೆಹಲ್ಗಾಮ್ ದಾಳಿ: ಆಲ್ದೂರು ಪಟ್ಟಣ ಬಂದ್; ವ್ಯಾಪಾರ-ವಹಿವಾಟು ಸ್ತಬ್ದ; ವಾರದ… Kerala | ಪ್ರಧಾನಿ ಮೋದಿ – ಕೇರಳ ಸಿಎಂ ಪಿಣರಾಯಿ ವಿಜಯನ್ ಒಂದೇ… Karnataka High Court | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಗೆ ಅಶ್ಲೀಲ ಪದ… ಅಲ್ಲಪಟ್ಟಣದಿಂದ ಮೆಲ್ಲ ಮೆಲ್ಲನೇ ಬಂದೆ…ರಾಮೇಶ್ವರಾ…ಅನ್ನದಾನೇಶ್ವರಾ: ಮನೆ ದೇವರ ಲಾವಣಿ ಹಾಡಿದ ಸಿಎಂ ಸಿದ್ದರಾಮಯ್ಯ Chikkamagaluru | ಜಯಪುರ ಅತ್ತಿಕುಡಿಗೆ ರಸ್ತೆ ಬದಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ Mangaluru | ಹುಟ್ಟೂರು ಬಂಟ್ವಾಳದತ್ತ ಸುಹಾಸ್ ಶೆಟ್ಟಿ ಪಾರ್ಥಿವ ಶರೀರ ಮೆರವಣಿಗೆ: ಬಿಗಿ… ಸುಹಾಸ್ ಶೆಟ್ಟಿ ಕೊಲೆ: ದ.ಕ. ಬಂದ್ ಗೆ ವಿಎಚ್ ಪಿ, ಭಜರಂಗದಳ ಕರೆ Breaking : ಬಜಪೆ : ಮಾರಕಾಯುಧಗಳಿಂದ ಹೊಡೆದು ಯುವಕನ ಕೊಲೆ ಕಾಂಗ್ರೆಸ್ ಪಕ್ಷದ ಜಾತಿ ಗಣತಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದು ಖರ್ಗೆ, ರಾಹುಲ್…

ಇತ್ತೀಚಿನ ಸುದ್ದಿ

New Delhi | ಬೆಲೆಯೇರಿಕೆಯಿಂದ ಕಾಂಗ್ರೆಸ್ ತನ್ನ ಆಡಳಿತದ ವಿರುದ್ಧ ತಾನೇ ಬೀದಿಗಿಳಿದಂತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

01/05/2025, 12:14

* ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ನಡೆಸಲಿರೋ ಪ್ರತಿಭಟನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೌಂಟರ್‌

* 48 ಅಗತ್ಯ ವಸ್ತುಗಳ ಬೆಲೆ ಏರಿಸಿ ಇತಿಹಾಸ ನಿರ್ಮಿಸಿಕೊಂಡವರು ಯಾರು?

* ಕಸ-ಕುಡಿಯುವ ನೀರಿನಿಂದ ಹಿಡಿದು ಪ್ರತಿಯೊಂದಕ್ಕೂ ಜನರ ಜೇಬಿಗೆ ಕತ್ತರಿ

* ರೈತರಿಗಾಗಿ ಎನ್ನುತ್ತ ಮೂರು ಬಾರಿ ಹಾಲಿನ ದರ ಹೆಚ್ಚಳ; ರೈತರಿಗೆ ಕೊಟ್ಟದ್ದು ಖಾಲಿ ಚೊಂಬು

ನವದೆಹಲಿ(reporterkarnataka.com): “ಕೇಂದ್ರ ಸರ್ಕಾರದ ಬೆಲೆ ಏರಿಕೆ” ವಿರುದ್ಧ ಎನ್ನುತ್ತ ಕಾಂಗ್ರೆಸ್‌ ಪಕ್ಷ ಗುರುವಾರ ಹುಬ್ಬಳ್ಳಿಯಲ್ಲಿ ಪ್ರತಿಭಟನೆಗೆ ಮುಂದಾಗಿದೆ. ಆದರೆ, ಇದು ಕೇಂದ್ರದ ವಿರುದ್ಧ ಎನ್ನುವುದಕ್ಕಿಂತ ರಾಜ್ಯದಲ್ಲಿ ಬೆಲೆ ಏರಿಕೆಯ ಇತಿಹಾಸವನ್ನೇ ನಿರ್ಮಿಸಿದ ತಮ್ಮ ಸರ್ಕಾರದ ವಿರುದ್ಧ ತಾವೇ ಬೀದಿಗೆ ಇಳಿದಂತಿದೆ! ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಕಸ ವಿಲೇವಾರಿ, ಕುಡಿಯುವ ನೀರಿನಿಂದ ಹಿಡಿದು ಬರೋಬ್ಬರಿ 48 ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌, “ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಪ್ರತಿಭಟನೆ” ಎನ್ನುವುದೇ ಒಂದು ಹಾಸ್ಯಾಸ್ಪದ. ಈ ಪ್ರತಿಭಟನೆ ಕಾಂಗ್ರೆಸ್ಸೇ ನಗೆಪಾಟಿಲು ಎಂದು ಸಚಿವ ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆಯಲ್ಲೇ ಮಿಂದೇಳುತ್ತಿರುವ ಕಾಂಗ್ರೆಸ್‌ ಅದ್ಯಾವ ಪುರುಷಾರ್ಥಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆಗೆ ಇಳಿಯುತ್ತಿದೆ? ರಾಜ್ಯದ ಆರ್ಥಿಕ ದುರಾವಸ್ಥೆಯನ್ನು ಜನರಿಂದ ಮರೆಮಾಚಲೇ? 48 ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ ತನ್ನ ವಿರುದ್ಧವೇ? ಡಿಸೇಲ್ ಬೆಲೆ ₹ 2 ಹೆಚ್ಚಳ ಮಾಡಿದ್ದಕ್ಕೆ ಪ್ರತಿಭಟನೆಯೇ? ಆರ್ಥಿಕ ಸದೃಢತೆಯ ರಾಜ್ಯವನ್ನು 5.5 ಲಕ್ಷ ಕೋಟಿ ಸಾಲದ ಹೊರೆಗೆ ತಳ್ಳಿದ ಪ್ರತೀಕವೇ? ಗುತ್ತಿಗೆದಾರರು 60 ಪರ್ಸೆಂಟ್‌ ಕಾಂಗ್ರೆಸ್‌ ಸರ್ಕಾರ ಎನ್ನುತ್ತಿರುವುದಕ್ಕೆ? ತಾನು ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿರುವುದಕ್ಕೇ? ಅಥವಾ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿ, ಅಭಿವೃದ್ಧಿಯನ್ನು ಕಡೆಗಣಿಸಿ ರಾಜ್ಯವನ್ನು ಅಧೋಗತಿಗೆ ತಳ್ಳಿದ ಪ್ರತೀಕವಾಗಿ ಈ ಪ್ರತಿಭಟನೆಯೇ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.

*ಬೆಲೆ ಏರಿಕೆಯಲ್ಲೇ ಮಿಂದೆದ್ದ ತಮ್ಮದೇ ಸರ್ಕಾರದ ವಿರುದ್ಧವೇ?:*
ರಾಜ್ಯದಲ್ಲಿ ತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನಿಂದ ಹಿಡಿದು 48 ಅಗತ್ಯತೆಗಳ ಬೆಲೆ ಏರಿಕೆ ಇತಿಹಾಸ ಸೃಷ್ಟಿಸಿರುವ ತಮ್ಮ ಸರ್ಕಾರದ ವಿರುದ್ಧವೇ ಬೀದಿಗಿಳಿದಿದ್ದೀರಲ್ಲ. ನಿಜಕ್ಕೂ ಇದು ನಗೆಪಾಟಿಲು ಮತ್ತು ನಾಚಿಕೆಗೇಡು ಎಂದು ಕಾಂಗ್ರೆಸ್‌ ನಾಯಕರಿಗೆ ಚಾಟಿ ಬೀಸಿದ ಸಚಿವರು, ಯಾವ ಪುರುಷಾರ್ಥಕ್ಕಾಗಿ ಈ ಪ್ರತಿಭಟನೆ? ಎಂದು ಕಿಡಿ ಕಾರಿದ್ದಾರೆ.

*ಗ್ರಾಹಕರ ಜೇಬಿಗೆ ಕತ್ತರಿ; ರೈತರ ಕೈಗೆ ಖಾಲಿ ಚೊಂಬು:*
ರಾಜ್ಯಾದ್ಯಂತ 48 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಸಾಮಾನ್ಯರನ್ನು ಕಬ್ಬಿನಂತೆ ಹಿಂಡುತ್ತಿರುವುದು ತಮ್ಮದೇ ಕಾಂಗ್ರೆಸ್ ಸರ್ಕಾರ. ಹೀಗಿರುವಾಗ ಈ ಪ್ರತಿಭಟನೆ ಯಾರ ವಿರುದ್ಧ? ಅಧಿಕಾರಕ್ಕೆ ಬಂದ 20 ತಿಂಗಳಲ್ಲಿ ಸತತ ಮೂರು ಬಾರಿ ಹಾಲಿನ ದರ ₹9 ಏರಿಕೆ ಮಾಡಿದ್ದೀರಿ. ಮೊದಲು ₹2, ಎರಡನೇ ಬಾರಿ ₹3 , ಮೂರನೇ ಬಾರಿ ₹4 ಹೆಚ್ಚಿಸಿದಿರಿ. ಪ್ರತಿ ಬಾರಿಯೂ ರೈತರಿಗಾಗಿ ಎಂದಿರಿ ಆದರೆ, ನಿಜವಾಗಿ ನೀವು ರೈತರಿಗೆ ಕೊಟ್ಟದ್ದು ಖಾಲಿ ಚೊಂಬು ಎಂದು ವಾಗ್ದಾಳಿ ನಡೆಸಿದ್ದಾರೆ ಸಚಿವರು.
ಇನ್ನು, ಪೆಟ್ರೋಲ್‌-ಡಿಸೇಲ್ ಬೆಲೆ ₹ 2 ಹೆಚ್ಚಳ ಮಾಡಿದ್ದೀರಿ. ಬಸ್ ಪ್ರಯಾಣ ದರವನ್ನೂ ಶೇ.20ರಷ್ಟು ಅಧಿಕಗೊಳಿಸಿ ಜನರಿಗೆ ದುಬಾರಿಯಾಗಿರುವುದು ತಮ್ಮದೇ ಕಾಂಗ್ರೆಸ್ ಸರ್ಕಾರ. ₹ 10 ಇದ್ದ ಪಹಣಿ ಶುಲ್ಕವನ್ನು ಒಮ್ಮೆಲೇ ₹25ಗೆ ಏರಿಕೆ ಮಾಡಿ ರೈತ ವಿರೋಧಿ ನಡೆ ಅನುಸರಿದ್ದು ತಾವು. ರಾಜಧಾನಿಯಲ್ಲಿ ಕುಡಿಯುವ ನೀರಿನ ದರ ಬರೋಬ್ಬರಿ ₹ 200ರವರೆಗೆ ಹೆಚ್ಚಳ ಮಾಡಿದ್ದು ತಮ್ಮದೇ ಜೋಡೆತ್ತು ಬ್ರ್ಯಾಂಡ್‌ ಸರ್ಕಾರ. ವಿದ್ಯುತ್ ಪ್ರತಿ ಯುನಿಟ್ 36 ಪೈಸೆ ಹೆಚ್ಚಿಸಿ ಜನರಿಗೆ ಕರೆಂಟ್ ಶಾಕ್ ಕೊಟ್ಟದ್ದು ತಮ್ಮ ಸರ್ಕಾರ. ₹ 20 ಇದ್ದ ಬಾಂಡ್ ಪೇಪರ್ ₹ 100ಗೆ ಏರಿಕೆ; ಮುದ್ರಾಂಕ ಶುಲ್ಕ ₹ 500ಕ್ಕೆ ಹೆಚ್ಚಳ. ಮನೆಯ ಕಸಕ್ಕೆ ₹400 ರವರೆಗೆ ಶುಲ್ಕ ಹೆಚ್ಚಿಸಿ, 4 ಸಾವಿರ ಚದರಡಿ ಮನೆಗೆ ಮಾಸಿಕ ₹400ರಂತೆ ವಾರ್ಷಿಕ ₹4,800 ಶುಲ್ಕ ಹೆಚ್ಚಳ, ಲಿಫ್ಟ್‌, ಜನರೇಟರ್‌ ಪರಿಶೀಲನೆ ಮತ್ತು ರಿನಿವಲ್‌ಗೆ ₹800 ಇದ್ದ ದರವನ್ನು ಇದೀಗ ₹ 5,000-₹8,000 ವರೆಗೆ ಹೆಚ್ಚಳ ಮಾಡುತ್ತ ರಾಜ್ಯದಲ್ಲಿ ಬೆಲೆ ಏರಿಕೆಯಿಂದ ₹75ರಿಂದ 80 ಸಾವಿರ ಕೋಟಿ ಕರ ವಸೂಲಿ ಮಾಡುತ್ತಿರುವ ತಮ್ಮದೇ ಜನ-ಕರ ಸರ್ಕಾರದ ವಿರುದ್ಧವೇ? ಪ್ರತಿಭಟನೆ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ ಸಚಿವ ಜೋಶಿ.

*ಸಂವಿಧಾನದ ದುರ್ಬಳಕೆ; ಕಾಂಗ್ರೆಸ್‌ನ ಜನವಿರೋಧಿ ನೀತಿ*
ಭಾರತದ ಇತಿಹಾಸದಲ್ಲಿ ಸಂವಿಧಾನದ ವಿಧಿ 356 ಅನ್ನು 125ಕ್ಕೂ ಹೆಚ್ಚು ಬಾರಿ ದುರುಪಯೋಗಿಸಿಕೊಂಡಿದೆ ಕಾಂಗ್ರೆಸ್ ಪಕ್ಷ. ಇಂದಿರಾ ಗಾಂಧಿಯವರ ಕಾಲದಲ್ಲಿ 1966 ರಿಂದ 1977 ರವರೆಗೆ ಸುಮಾರು 50 ಬಾರಿ ಈ ವಿಧಿಯನ್ನು ಬಳಸಿದ್ದಾರೆ. ಬಹುತೇಕ ಬೇರೆ ಪಕ್ಷದ ರಾಜ್ಯ ಸರ್ಕಾರಗಳನ್ನು ಕೆಡವಿದ್ದಾರೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್‌ ಅವರಿಗೆ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲಿಸಿ ಅವಮಾನ ಮಾಡಿದೆ. ನಾರಾಯಣ ಎಸ್.ಕಜೋರ್ಲ್ಕರ್ ಗೆ 1970ರಲ್ಲಿ ಬಾಬಾ ಸಾಹೇಬರನ್ನು ಅವಮಾನಿಸಲೆಂದೇ ಪದ್ಮಭೂಷಣ ಪ್ರಶಸ್ತಿ ಕೊಟ್ಟ ಕಾಂಗ್ರೆಸ್‌, ಬಾಬಾ ಸಾಹೇಬರನ್ನು ಭಾರತ ರತ್ನ ಪುರಸ್ಕಾರಕ್ಕೆ ಪರಿಗಣಿಸಲೇ ಇಲ್ಲ. ಇನ್ನು ವಿದೇಶಿ ನೆಲದಲ್ಲಿ ಭಾರತದ ವಿರುದ್ಧ ಮಾತನಾಡುವ ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ ಅಗೌರವ ತೋರುತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ ಜೋಶಿ.
ಒಂದು ಸಮುದಾಯದ ಓಲೈಕೆಗಾಗಿ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದಿದ್ದು ತಮ್ಮದೇ ಪಕ್ಷದ ಉಪ ಮುಖ್ಯಮಂತ್ರಿಗಳು. ಸಾಲದ್ದಕ್ಕೆ ಧಮ್ಕಿ ರಾಜಕಾರಣ ಬೇರೆ. ಏನೆನ್ನಬೇಕು ನಿಮ್ಮೀ ಪ್ರವೃತ್ತಿಗೆ? ಪಾಕಿಸ್ತಾನದ ವಿರುದ್ಧ ಯುದ್ಧದ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರು ಪಾಕಿಸ್ತಾನ ಮಾತನಾಡುವ ರೀತಿಯಲ್ಲೇ ಮಾತನಾಡುತ್ತಾರೆ ಎಂದು ಪ್ರಲ್ಹಾದ ಜೋಶಿ ಹರಿ ಹಾಯ್ದಿದ್ದಾರೆ.

* ಹಗರಣಗಳ ಪಟ್ಟಿಯಲ್ಲೇ ರಾರಾಜಿಸುತ್ತಿದೆ ಕಾಂಗ್ರೆಸ್‌ ಸರ್ಕಾರ:*
ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಲೇ ವಾಲ್ಮಿಕಿ ಅಭಿವೃದ್ದಿ ನಿಗಮದ ಹಗರಣ, SC/ST ಯೋಜನೆಗಳಿಗೆ ಮೀಸಲಾದ ₹ 8,094 ದುರ್ಬಳಕೆ, ಮೂಡ ಹಗರಣ, ಟೆಂಡರ್ ಮಾಫಿಯಾ ಶೇ.60ರಷ್ಟು ಕಮಿಷನ್, ಸ್ಮಾರ್ಟ್​ ಮೀಟರ್ ಹಗರಣ, ಪಿಎಸ್​ಐ ನೇಮಕಾತಿ ಹಗರಣ, ಮೂಡಾ ಹಗರಣ, ಯೋಜನೆಗಳ ಅನುದಾನ ಬಿಡುಗಡೆಯಲ್ಲಿ ಹಗರಣ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳ ವಸ್ತುಗಳ ಖರೀದಿಯಲ್ಲಿ ಅಕ್ರಮ, ಔಷಧ ಖರೀದಿಯಲ್ಲಿ ಗೋಲ್ಮಾಲ್-ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರದಲ್ಲಿ ಖರೀದಿ ಹೀಗೆ ಒಂದೇ ಎರಡೇ ಹಗರಣಗಳ ಪಟ್ಟಿಯಲ್ಲೇ ರಾರಾಜಿಸುತ್ತಿದೆ ಕಾಂಗ್ರೆಸ್‌ ಸರ್ಕಾರ. ಭ್ರಷ್ಟಾಚಾರದಿಂದ ರಾಜ್ಯದ ಖಜಾನೆ ಖಾಲಿ ಆದರೂ ಯಾವ ತನಿಖೆಯೂ ಆಗಿಲ್ಲ. ಹೀಗಿರುವಾಗ ಯಾವುದರ ವಿರುದ್ಧ ಪ್ರತಿಭಟನೆ? ಎಂದು ಜೋಶಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಆರ್ಥಿಕ ಸದೃಢವಾಗಿದ್ದ ರಾಜ್ಯವನ್ನು ದುರಾವಸ್ಥೆಗೆ ತಲುಪಿಸಿದೆ ಕಾಂಗ್ರೆಸ್‌ ಆಡಳಿತ. ಈಗ ಜನರ ದಿಕ್ಕುತಪ್ಪಿಸಲು ಈ ಪ್ರತಿಭಟನೆಯ ಡ್ರಾಮ ಮಾಡುತ್ತಿದೆ. ರಾಜ್ಯದ ಸಾಲ ₹5.5 ಲಕ್ಷ ಕೋಟಿ ಮೀರಿದೆ̤ ಇದನ್ನು ತೀರಿಸಲು ನಿಮ್ಮ ಬಳಿ ಯಾವ ಯೋಜನೆಯಿದೆ? 2025ರ ಬಜೆಟ್‌ನಲ್ಲಿ ₹4 ಲಕ್ಷ ಕೋಟಿ ಸಾಲದ ಯೋಜನೆ ತೋರಿಸುತ್ತದೆ. ರಾಜ್ಯದ ಆದಾಯದ ಬಹುಪಾಲು ಶೇ.60ರಷ್ಟು ಸಾಲಕ್ಕೆ ಹೋಗುತ್ತದೆ. ಇನ್ನು ಅಭಿವೃದ್ಧಿಯ ಮಾತೆಲ್ಲಿ? ಇದು ಆರ್ಥಿಕ ದಿವಾಳಿತನದ ಸಂಕೇತವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

*ಕಾನೂನು ಸುವ್ಯವಸ್ಥೆ ವೈಫಲ್ಯವೇ ಸಾಧನೆಯೇ?*
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ, ಠಾಣೆ ಮೇಲೆ ದಾಳಿ. ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಕೇಸ್ ವಾಪಸ್‌ ಪಡೆಯಲು ಸಚಿವ ಸಂಪುಟದ ನಿರ್ಧಾರ ಇದೆಲ್ಲ ಮತಾಂಧತೆಯ ಪ್ರದರ್ಶನ ಮತ್ತು ತಮ್ಮ ತುಷ್ಟೀಕರಣ ನೀತಿಯನ್ನು ತೋರಿಸುತ್ತದೆ. ರಾಜ್ಯದಲ್ಲಿ ಸೈಬರ್ ಅಪರಾಧಗಳು 2023ರಿಂದ ಶೇ.30ರಷ್ಟು ಹೆಚ್ಚಾಗಿದೆ. ದರೋಡೆ, ಕಳ್ಳತನದ ಪ್ರಕರಣ, ರೌಡೀಸಂ ಸಹ ಹೆಚ್ಚಾಗಿದೆ‌ ಆದರೂ‌ ಸರ್ಕಾರದ ಮೌನವೇಕೆ? ಎಂದು ಕಿಡಿ ಕಾರಿದ್ದಾರೆ.

*ಅಧಿಕಾರಿಗಳ ಮನೋಬಲ ಕುಗ್ಗಿಸುತ್ತಿದ್ದೀರಿ:*
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಪಕ್ಷದ ಮುಖಂಡರ ವರ್ತನೆಯಿಂದಾಗಿ ರಾಜ್ಯದ ಅಧಿಕಾರಿಗಳ ಮನೋಬಲ ಕುಗ್ಗುತ್ತಿದೆ. ಬೆಳಗಾವಿಯಲ್ಲಿ ವೇದಿಕೆ ಮೇಲೆಯೇ ಎಎಸ್‌ಪಿಗೆ ಹೊಡೆಯಲು ಮುಂದಾಗಿ, ಅಧಿಕಾರಿಗಳ ಮೇಲೆ‌ ದರ್ಪ ತೋರಿದ್ದೀರಿ. ನಿಮ್ಮೀ ನಡೆಗೆ ಸರ್ಕಾರಿ‌ ನೌಕರರು, ಅಧಿಕಾರಿಗಳಲ್ಲಿ ನೈತಿಕತೆ ಕುಗ್ಗಿ ಹೋಗಿದೆ. ಇದನ್ನು ಮರೆಮಾಚಲು ಈ ಪ್ರತಿಭಟನೆಯೇ? ಎಂದು ಸಚಿವ ಪ್ರಲ್ಹಾದ ಜೋಶಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು