ಇತ್ತೀಚಿನ ಸುದ್ದಿ
ಶರಾವತಿ ನದಿಗೆ ಹೊಲೆ ಬಾಗಿಲಿನಲ್ಲಿ ನಿರ್ಮಿಸಿದ ನೂತನ ಸೇತುವೆ: ಕೇಂದ್ರ ಭೂ ಸಾರಿಗೆ ಸಚಿವ ಗಡ್ಕರಿ ಇಂದು ಉದ್ಘಾಟನೆ
13/07/2025, 23:01

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಶರಾವತಿ ನದಿಗೆ ಹೊಲೆ ಬಾಗಿಲಿನಲ್ಲಿ ಅಡ್ಡಲಾಗಿ ನಿರ್ಮಾಣ ಮಾಡಿರುವ ಸೇತುವೆಯ ಉದ್ಘಾಟನೆ ಜುಲೈ 14 ರಂದು ನಡೆಯಲಿದೆ.
ಕೇಂದ್ರದ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ನಡೆಸಲಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು 423 ಕೋಟಿ ರೂ. ವೆಚ್ಚದ ಎರಡು ಕಾಲು ಕಿಮೀ ಉದ್ದದ ಸೇತುವೆ ಅದಾಗಿದ್ದು ನಮ್ಮ ದೇಶದಲ್ಲೇ ಅತೀ ಉದ್ದದ ಟೆಕ್ನಾಲಜಿ ಬಳಸಿ ಮಾಡಿರುವ ಸೇತುವೆ ಆಗಿದೆ. ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಅದೊಂದು ಪ್ರವಾಸೋದ್ಯಮ ಕ್ಷೇತ್ರ ಆಗಬಹುದು ಎಂಬ ನಿರೀಕ್ಷೆ ಇದೆ ಎಂದರು.
ಅಂದು ಬೆಳಗ್ಗೆ 10:30 ಕ್ಕೆ ನಿತಿನ್ ಗಡ್ಕರಿ ಉದ್ಘಾಟನೆ ಮಾಡಲಿದ್ದಾರೆ. ನಂತರ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆ ನಂತರ ಮಧ್ಯಾಹ್ನ 12 ಗಂಟೆಗೆ ಸಾಗರದ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಈ ಸಭಾ ಕಾರ್ಯಕ್ರಮಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಾಗರ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಸೇರಿ ಹಲವರು ಭಾಗಿಯಾಗಲಿದ್ದಾರೆ ಎಂದರು.
ಇಲ್ಲಿಯವರೆಗೆ ಲಾಂಚ್ ಬಳಕೆ ಮಾಡುತ್ತಿದ್ದರು. ಅದರಲ್ಲೂ ಒಂದು ಬಾರಿ ಲಾಂಚ್ ಮುಳುಗಿ 22 ಮಂದಿ ಮೃತಪಟ್ಟಿದ್ದರು. ಪಶ್ಚಿಮ ಘಟ್ಟದಲ್ಲಿ ಹಲವಾರು ಡ್ಯಾಮ್ ಆಗಿವೆ. ಆದರೆ ಅಲ್ಲಿನ ಸಂತ್ರಸ್ತರಿಗೆ ಯಾವ ಸರ್ಕಾರವೂ ಆದ್ಯತೆ ಕೊಟ್ಟಿಲ್ಲ. ಈಗ ಸೇತುವೆ ಆಗುವುದರಿಂದ ಅಲ್ಲಿನ ಜನರ ಕನಸು ನನಸಾಗುವ ದಿನ ಎಂದರು.
ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ಆಗಿರುವುದು ನೋಡಿದರೆ ಪವಾಡ ಎನಿಸುತ್ತದೆ. ಶಿವಮೊಗ್ಗಕ್ಕೆ ಒಂದೋ ಎರಡೋ ರೈಲು ಇತ್ತು. ಈಗ ಜನವರಿಯಿಂದ ಎರಡು ವಂದೇ ಭಾರತ್ ರೈಲು ಓಡಾಡಲಿದೆ. ಹಾಗೆ ಹಲವಾರು ರೈಲುಗಳು ಶಿವಮೊಗ್ಗದಲ್ಲಿ ಓಡಾಡುತ್ತದೆ. ವಿಮಾನ ನಿಲ್ದಾಣ, ಜಿಲ್ಲೆಯಲ್ಲಿ ರಸ್ತೆಗಳು, ಸೇತುವೆಗಳು ಹೀಗೆ ಸಾಕಷ್ಟು ಕಾಮಗಾರಿಗಳು ಜಿಲ್ಲೆಯಲ್ಲಿ ಆಗಿದೆ. ಅಭಿವೃದ್ಧಿಯ ಮಹಾಪೂರವನ್ನೇ ನಾವು ಮಾಡಿಸಿದ್ದೇವೆ ಎಂದರು.
ಸಿಗಂದೂರು ಸೇತುವೆ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಸೇತುವೆ ಆಗಿದೆ ಎಂದು ಎಲ್ಲರೂ ಸಂತೋಷ ಪಡಬೇಕು. ಕಲ್ಪನೆ ಮಾಡಲು ಆಗದ ಸೇತುವೆ ನಿರ್ಮಾಣ ಆಗಿದೆ. ನಮ್ಮ ಪಕ್ಷದ ವತಿಯಿಂದ ಸಿಗಂದೂರು ಚೌಡೇಶ್ವರಿ ಸೇತುವೆ ಎಂಬ ಹೆಸರು ಇಡಲು ಸೂಚಿಸಿದ್ದೇವೆ. ಯಡಿಯೂರಪ್ಪನವರ ಹೆಸರು ಕೇಳಿ ಬಂದಿದೆ. ಆದರೆ ಸಿಗಂದೂರು ಚೌಡೇಶ್ವರಿ ಎಂಬ ಹೆಸರು ಸೂಕ್ತ ಎಂದರು.
ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸಂದೇಶ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಕುಕ್ಕೆ ಪ್ರಶಾಂತ್, ಸಂತೋಷ್ ದೇವಾಡಿಗ,ಕುರವಳ್ಳಿ ಪ್ರಮೋದ್ ಪೂಜಾರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.