ಇತ್ತೀಚಿನ ಸುದ್ದಿ
ನೀತಿ ಸಂಹಿತೆ ಉಲ್ಲಂಘನೆಗೆ ಆಸ್ಪದ ನೀಡಬೇಡಿ: ಮಾಲ್, ಹಾಲ್ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚನೆ
02/04/2023, 10:29
ಮಂಗಳೂರು(reporter Karnataka.com): ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಿಲ್ಲೆಯ ಮಾಲ್ಗಳು, ಮದುವೆ ಮಂಟಪಗಳು, ಸಭಾಭವನಗಳು, ಚಲನ ಮಂದಿರಗಳ ಮಾಲೀಕರು ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಕರೆ ನೀಡಿದರು.
ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಎಲ್ಲಾ ಮಾಲ್ಗಳು, ಸಭಾಭವನಗಳು, ಮದುವೆ ಮಂಟಪಗಳು, ಚಲನಚಿತ್ರ ಮಂದಿರಗಳ ಮಾಲೀಕರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಲ್ಗಳು, ಮದುವೆ ಮಂಟಪಗಳು, ಸಭಾಭವನಗಳು, ಚಲನಚಿತ್ರ ಮಂದಿರಗಳು ಇತ್ಯಾದಿಗಳ ಮಾಲೀಕರೊಂದಿಗೆ ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳ ಸಂಪರ್ಕ ಇದ್ದಲ್ಲಿ ಅವರು ಈ ವೇದಿಕೆಗಳನ್ನು ಬಳಸಿಕೊಂಡು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಲು ಅವಕಾಶ ನೀಡಬಾರದು, ಒಂದು ವೇಳೆ ಉಲ್ಲಂಘನೆ ಕಂಡು ಬಂದಲ್ಲಿ ಆಯಾ ಪ್ರದೇಶದ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರುವುದು ಈ ಮಾಲೀಕರ ಕರ್ತವ್ಯವಾಗಿದೆ, ಒಂದು ವೇಳೆ ಮದುವೆ ಮಂಟಪಗಳು, ಸಭಾಭವನಗಳು ಮಾಲ್ಗಳಲ್ಲಿ ರಾಜಕೀಯ ಪಕ್ಷಗಳು, ಸಭೆ ಸಮಾರಂಭ ಮಾಡಬೇಕಾದಲ್ಲಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳ ಮೂಲಕ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಗೆ ಏಕಗವಾಕ್ಷಿ ಪದ್ದತಿ ಮೂಲಕ ಅನುಮತಿ ಪಡೆದು ಕಾರ್ಯಕ್ರಮ ಏರ್ಪಡಿಸಬೇಕು, ಕೆಲವೊಮ್ಮೆ ಅರಿವಿಲ್ಲದೆ ಆದಲ್ಲಿ ಅಥವಾ ಅಧಿಕೃತ ಕಾರ್ಯಕ್ರಮ ಹಮ್ಮಿಕೊಂಡು ಅಲ್ಲಿ ಮತದಾರರಿಗೆ ಆಮಿಷವೊಡ್ಡಿದ್ದಲ್ಲೀ, ಅಥವಾ ಅಲ್ಲಿ ಅಕ್ರಮ ಹಣ, ಮದ್ಯ, ಕುಕ್ಕರ್, ಸೀರೆ, ಡ್ರಗ್ಸ್, ಇತ್ಯಾದಿ ಉಡುಗೊರೆಗಳನ್ನು ಶೇಖರಣೆ ಮಾಡಲು ಅವಕಾಶವವಿಲ್ಲ, ಇದು ಕಂಡು ಬಂದಲ್ಲಿ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಂದು ವೇಳೆ ರಾಜಕೀಯ ಪಕ್ಷಗಳ ಮುಖಂಡರು, ಪಕ್ಷದವರು ಹಾಗೂ ಅಭ್ಯರ್ಥಿ ಸಭೆ ಸಮಾರಂಭ ಮಾಡಬೇಕು ಎಂದಾದಲ್ಲಿ ಚುನಾವಣಾಧಿಕಾರಿಯ ಅನುಮತಿ ಪಡೆಯಬೇಕು, ಸಮಾರಂಭದ ಚಟುವಟಿಕೆಗಳನ್ನು ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ವಿವಿಂಗ್ ತಂಡದವರು ಚಿತ್ರೀಕರಿಸಿಕೊಳ್ಳುವರು, ನೀತಿ ಸಮಿತಿ ಉಲ್ಲಂಘನೆ ಆದರೆ ಪ್ರಕರಣ ದಾಖಲಿಸಲಾಗುವುದು ಎಂದರು.
ಯಾವುದೇ ರೀತಿಯ ಧಾರ್ಮಿಕ ಸಮಾರಂಭಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಅದನ್ನು ರಾಜಕೀಯ ಪಕ್ಷಗಳು ವೇದಿಕೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ, ಯಾವುದೇ ಧರ್ಮ, ಜಾತಿಯ ಬಗ್ಗೆ ಅವಹೇಳನ ಮಾಡುವಂತಿಲ್ಲ, ಮುಖ್ಯವಾಗಿ ಬ್ಯಾನರ್, ಬಂಟಿಂಗ್ಸ್, ಕಟೌಟ್ಗಳನ್ನ ಹಾಕಲು ಅವಕಾಶವಿರುವುದಿಲ್ಲ, ನಿಮ್ಮ ಮನೆಯವರೇ ಅಭ್ಯರ್ಥಿಯಾಗಿದ್ದರೂ ಕೂಡ ಅನುಮತಿ ಇಲ್ಲದೆ ಹಾಕಲು ಅವಕಾಶವಿರುವುದಿಲ್ಲ, ಈ ಹಿಂದೆಯೇ ಪೂರ್ವ ನಿಗದಿಯಾಗಿದ್ದ ಮದುವೆಗೆ ಯಾವುದೇ ರೀತಿಯ ನಿಬರ್ಂಧ ಇರುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಚುನಾವಣಾ ಆಯೋಗ ಹೊರಡಿಸಿರುವ ನೀತಿ ಸಂಹಿತೆಯನ್ನು ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಪಾಲಿಸಬೇಕು, ಮತದಾನಕ್ಕೆ 48 ಗಂಟೆಗಳು ಇರುವಾಗ ಯಾವುದೇ ಮದುವೆ ಮಂಟಪಗಳು, ಸಭಾಭವನದಲ್ಲಿ ಹೊರ ಜಿಲ್ಲೆಯವರು ಇರುವಂತಿಲ್ಲ, ಧಾರ್ಮಿಕ ಸ್ಥಳವನ್ನು ಪ್ರಚಾರಕ್ಕೆ ಬಳಸುವಂತಿಲ್ಲ, ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶವಿದೆ, ಜಾಹೀರಾತು ಪ್ರಕಟಿಸಲು ಜಿಲ್ಲಾ ಮಾಧ್ಯಮ ಪ್ರಾಮಾಣಿಕರಣ ಹಾಗೂ ದೃಢೀಕರಣ ಸಮಿತಿಯಿಂದ ಅನುಮತಿ ಪಡೆದು ಪ್ರಕಟಿಸಬೇಕು ಎಂದು ಹೇಳಿದರು.
ನಗರ ಪೆÇಲೀಸ್ ಆಯುಕ್ತ ಕುಲ್ದೀಪ್ ಜೈನ್ ಮಾತನಾಡಿ ಮಾದರಿ ನೀತಿ ಸಂಹಿತೆ ಜಾರಿಗೊಂಡ ನಂತರದಲ್ಲಿ ಅದು ಉಲ್ಲಂಘನೆ ಆಗದ ಬಗೆ ಎಚ್ಚರ ವಹಿಸಬೇಕು ನಿಯಮಗಳನ್ನು ಮೀರಿ ವರ್ತಿಸಿದ್ದಲ್ಲಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಜಿಲ್ಲೆಯ ವಿವಿಧ ಮಾಲ್ಗಳು, ಮದುವೆ ಮಂಟಪಗಳ, ಚಲನಚಿತ್ರ ಮಂದಿರಗಳ, ಸಭಾಭವನಗಳ ಮಾಲೀಕರು ಸಭೆಯಲ್ಲಿದ್ದರು.