ಇತ್ತೀಚಿನ ಸುದ್ದಿ
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಫ್ಲೈಯಿಂಗ್ ಸ್ಕ್ವಾಡ್ ನಿಂದ ಮಂಗಳೂರಿನಲ್ಲಿ ತೀವ್ರ ಕಾರ್ಯಾಚರಣೆ
02/04/2023, 11:10
ಮಂಗಳೂರು(reporterkarnataka.com): ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ತೀವ್ರಗೊಂಡಿದ್ದು, ನಗ, ನಗದು ಸಾಗಾಟ ಹಾಗೂ ವಾಹನಗಳ ಮೇಲೆ ರಾಜಕೀಯ ಪಕ್ಷಗಳ ಪ್ರಚಾರದ ಪೋಸ್ಟರ್ ಗಳ ಪ್ರದರ್ಶನದ ಮೇಲೆ ತೀವ್ರ ನಿಗಾ ಇಡಲಾಗಿದೆ.
ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಚುನಾವಣೆ ನೀತಿ ಸಂಹಿತೆ ಕುರಿತಂತೆ ರಚಿಸಲಾದ ಫ್ಲೈಯಿಂಗ್ ಸ್ಕ್ವಾಡ್ ತೀವ್ರ ತರಹದ ಕಾರ್ಯಾಚರಣೆಗೆ ಇಳಿದಿದೆ. ಇದರೊಂದಿಗೆ ಪೊಲೀಸ್ ಇಲಾಖೆ, ಆದಾಯ ತೆರಿಗೆ ಇಲಾಖೆ, ವೀಡಿಯೊ ವೀವಿಂಗ್ ತಂಡ ಕೂಡ ಕಾರ್ಯಪ್ರವೃತ್ತವಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ನ ಅಧಿಕಾರಿ ಭರತ್ ಕುಮಾರ್ ನೇತೃತ್ವದಲ್ಲಿ ತೀವ್ರ ಕಾರ್ಯಾಚರಣೆ ನಡೆದಿದೆ.
ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಿಲ್ಲೆಯ ಮಾಲ್‍ಗಳು, ಮದುವೆ ಮಂಟಪಗಳು, ಸಭಾಭವನಗಳು, ಚಲನ ಮಂದಿರಗಳ ಮಾಲೀಕರು ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಈಗಾಗಲೇ ಸೂಚನೆ ನೀಡಿದ್ದಾರೆ.
ಎಲ್ಲ ಮಾಲ್‍ಗಳು, ಸಭಾಭವನಗಳು, ಮದುವೆ ಮಂಟಪಗಳು, ಚಲನಚಿತ್ರ ಮಂದಿರಗಳ ಮಾಲೀಕರೊಂದಿಗೆ ಅವರು ಈಗಾಗಲೇ ಸಭೆ
ನಡೆಸಿದ್ದಾರೆ. ಮಾಲ್‍ಗಳು, ಮದುವೆ ಮಂಟಪಗಳು, ಸಭಾಭವನಗಳು, ಚಲನಚಿತ್ರ ಮಂದಿರಗಳು ಇತ್ಯಾದಿಗಳ ಮಾಲೀಕರೊಂದಿಗೆ ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳ ಸಂಪರ್ಕ ಇದ್ದಲ್ಲಿ ಅವರು ಈ ವೇದಿಕೆಗಳನ್ನು ಬಳಸಿಕೊಂಡು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಲು ಅವಕಾಶ ನೀಡಬಾರದು, ಒಂದು ವೇಳೆ ಉಲ್ಲಂಘನೆ ಕಂಡು ಬಂದಲ್ಲಿ ಆಯಾ ಪ್ರದೇಶದ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರುವುದು ಈ ಮಾಲೀಕರ ಕರ್ತವ್ಯವಾಗಿದೆ, ಒಂದು ವೇಳೆ ಮದುವೆ ಮಂಟಪಗಳು, ಸಭಾಭವನಗಳು ಮಾಲ್ ಗಳಲ್ಲಿ ರಾಜಕೀಯ ಪಕ್ಷಗಳು, ಸಭೆ ಸಮಾರಂಭ ಮಾಡಬೇಕಾದಲ್ಲಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳ ಮೂಲಕ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಗೆ ಏಕಗವಾಕ್ಷಿ ಪದ್ದತಿ ಮೂಲಕ ಅನುಮತಿ ಪಡೆದು ಕಾರ್ಯಕ್ರಮ ಏರ್ಪಡಿಸಬೇಕು, ಕೆಲವೊಮ್ಮೆ ಅರಿವಿಲ್ಲದೆ ಆದಲ್ಲಿ ಅಥವಾ ಅಧಿಕೃತ ಕಾರ್ಯಕ್ರಮ ಹಮ್ಮಿಕೊಂಡು ಅಲ್ಲಿ ಮತದಾರರಿಗೆ ಆಮಿಷವೊಡ್ಡಿದ್ದಲ್ಲೀ, ಅಥವಾ ಅಲ್ಲಿ ಅಕ್ರಮ ಹಣ, ಮದ್ಯ, ಕುಕ್ಕರ್, ಸೀರೆ, ಡ್ರಗ್ಸ್, ಇತ್ಯಾದಿ ಉಡುಗೊರೆಗಳನ್ನು ಶೇಖರಣೆ ಮಾಡಲು ಅವಕಾಶವವಿಲ್ಲ, ಇದು ಕಂಡು ಬಂದಲ್ಲಿ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ರಾಜಕೀಯ ಪಕ್ಷಗಳ ಮುಖಂಡರು, ಪಕ್ಷದವರು ಹಾಗೂ ಅಭ್ಯರ್ಥಿ ಸಭೆ ಸಮಾರಂಭ ಮಾಡಬೇಕು ಎಂದಾದಲ್ಲಿ ಚುನಾವಣಾಧಿಕಾರಿಯ ಅನುಮತಿ ಪಡೆಯಬೇಕು, ಸಮಾರಂಭದ ಚಟುವಟಿಕೆಗಳನ್ನು ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ವಿವಿಂಗ್ ತಂಡದವರು ಚಿತ್ರೀಕರಿಸಿಕೊಳ್ಳುವರು, ನೀತಿ ಸಮಿತಿ ಉಲ್ಲಂಘನೆ ಆದರೆ ಪ್ರಕರಣ ದಾಖಲಿಸಲಾಗುವುದು ಎಂದರು.
ಯಾವುದೇ ರೀತಿಯ ಧಾರ್ಮಿಕ ಸಮಾರಂಭಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಅದನ್ನು ರಾಜಕೀಯ ಪಕ್ಷಗಳು ವೇದಿಕೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ, ಯಾವುದೇ ಧರ್ಮ, ಜಾತಿಯ ಬಗ್ಗೆ ಅವಹೇಳನ ಮಾಡುವಂತಿಲ್ಲ, ಮುಖ್ಯವಾಗಿ ಬ್ಯಾನರ್, ಬಂಟಿಂಗ್ಸ್, ಕಟೌಟ್‍ಗಳನ್ನ ಹಾಕಲು ಅವಕಾಶವಿರುವುದಿಲ್ಲ, ನಿಮ್ಮ ಮನೆಯವರೇ ಅಭ್ಯರ್ಥಿಯಾಗಿದ್ದರೂ ಕೂಡ ಅನುಮತಿ ಇಲ್ಲದೆ ಹಾಕಲು ಅವಕಾಶವಿರುವುದಿಲ್ಲ, ಈ ಹಿಂದೆಯೇ ಪೂರ್ವ ನಿಗದಿಯಾಗಿದ್ದ ಮದುವೆಗೆ ಯಾವುದೇ ರೀತಿಯ ನಿಬರ್ಂಧ ಇರುವುದಿಲ್ಲ ಎಂದು ಹೇಳಿದ್ದಾರೆ.