ಇತ್ತೀಚಿನ ಸುದ್ದಿ
ನೀಟ್ ಪರೀಕ್ಷೆಯಲ್ಲಿ ಒಳ ಉಡುಪು ಕಳಚಲು ಸೂಚಿಸಿದ ವಿವಾದ: ಸ್ವತಂತ್ರ ತನಿಖೆಗೆ ಎನ್ ಸಿ ಡಬ್ಲ್ಯೂಆದೇಶ
19/07/2022, 23:07
ಸಾಂದರ್ಭಿಕ ಚಿತ್ರ
ತಿರುವನಂತಪುರ(reporterkarnataka.com): ಕೇರಳದಲ್ಲಿ ನೀಟ್ ಪರೀಕ್ಷೆಗೂ ಮುನ್ನ ವಿದ್ಯಾರ್ಥಿನಿಯರ ತಪಾಸಣೆ ವೇಳೆಯಲ್ಲಿ ಒಳ ಉಡುಪು ಕಳಚುವಂತೆ ಸೂಚಿಸಲಾಗಿತ್ತು ಎಂಬ ವರದಿ ಹೊಸ ವಿಚಾರವನ್ನೇ ಸೃಷ್ಟಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸ್ವತಂತ್ರ ತನಿಖೆ ನಡೆಸುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ಮುಖ್ಯಸ್ಥರಿಗೆ ಪತ್ರ ಬರೆದಿದೆ.
ಇದು ಅತಿರೇಕದ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದ್ದು, ವಿದ್ಯಾರ್ಥಿನಿಯರು ಮಾಡಿರುವ ಆರೋಪದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಕಾಲಮಿತಿಯೊಳಗೆ ತನಿಖೆ ನಡೆಸಿ, ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಕೇರಳ ಪೊಲೀಸ್ ಮಹಾನಿರ್ದೇಶಕರಿಗೂ ಆಯೋಗ ಪತ್ರ ಬರೆದಿದ್ದು, ನ್ಯಾಯಯುತವಾಗಿ ತನಿಖೆ ನಡೆಯಬೇಕು ಮತ್ತು ಒಂದು ವೇಳೆ ಆರೋಪ ಸತ್ಯವೆಂದು ಕಂಡು ಬಂದಲ್ಲಿ ಸಂಬಂಧಿಸಿದ ಕಾನೂನಿನಡಿ ಎಫ್ ಐಆರ್ ದಾಖಲಿಸಬೇಕು. ಮೂರು ದಿನಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ಎನ್ ಸಿ ಡಬ್ಲ್ಯೂ ಹೇಳಿದೆ.