ಇತ್ತೀಚಿನ ಸುದ್ದಿ
ನವದೆಹಲಿಯಲ್ಲಿ ಬಿಹೆಚ್ಇಎಲ್ ಡೇ: ಪುರಸ್ಕಾರ ಪ್ರದಾನ ಮಾಡಿದ ಸಚಿವ ಎಚ್.ಡಿ.ಕುಮಾರಸ್ವಾಮಿ
07/01/2025, 20:48
ನವದೆಹಲಿ(reporterkarnataka.com): ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ (BHEL) ಕಂಪನಿಯ ‘ಉತ್ಕರ್ಷ ದಿವಸ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಕಳೆದ ಸಾಲಿನಲ್ಲಿ ಕಂಪನಿಯ ಅಭಿವೃಧಿಗೆ ಕೊಡುಗೆ ನೀಡಿರುವ ಸಿಬ್ಬಂದಿಗೆ ‘ಉತ್ಕೃಷ್ಟತಾ ಪುರಸ್ಕಾರ’ (ಶ್ರೇಷ್ಠತಾ ಪುರಸ್ಕಾರ) ಸೇರಿ ವಿವಿಧ ಪುರಸ್ಕಾರಗಳನ್ನು ನೀಡಿ ಗೌರವಿಸಿದರು.
ನವದೆಹಲಿಯ ನೋಯಿಡಾದಲ್ಲಿರುವ ಬಿಎಚ್ಇಎಲ್ ಟೌನ್ ಶಿಪ್ ನಲ್ಲಿ ನಡೆದ ಬಿಎಚ್ಇಎಲ್ ಡೇ ಹಾಗೂ ಉತ್ಕೃಷ್ಟತಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು; ದೇಶದ ವಿವಿಧ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಘಟಕಗಳ ಉತ್ತಮ ಸಾಧನೆಯನ್ನು ಗುರುತಿಸಿ ಗೌರವಿಸಿದರು.
2019-20ನೇ ಸಾಲಿನ ಉತ್ಕೃಷ್ಟತಾ ಪುರಸ್ಕಾರಕ್ಕೆ ಪಾತ್ರವಾಗಿರುವ ಬೆಂಗಳೂರಿನ ಬಿಹೆಚ್ಇಎಲ್ ಎಲೆಕ್ಟ್ರಾನಿಕ್ ವಿಭಾಗದ ಮುಕೇಶ್ ಕುಮಾರ್, 2020-21ನೇ ಸಾಲಿನ ಉತ್ಕೃಷ್ಟತಾ ಪುರಸ್ಕಾರಕ್ಕೆ ಪಾತ್ರರಾಗಿರುವ ಇದೇ ಬೆಂಗಳೂರು ಘಟಕದ ತೌಸಿಫ್ ಅವರಿಗೆ ಸಚಿವರು ಪುರಸ್ಕಾರ ಪ್ರದಾನ ಮಾಡಿ ಗೌರವಿಸಿದರು.
ಅಲ್ಲದೆ; 2021-22ನೇ ಸಾಲಿನ ಪ್ರತಿಬದ್ಧತಾ ಪುರಸ್ಕಾರಕ್ಕೆ ಪಾತ್ರರಾಗಿರುವ ಬೆಂಗಳೂರಿನ ಬಿಎಚ್ಇಎಲ್ ಎಲೆಕ್ಟ್ರಾನಿಕ್ ವಿಭಾಗದ ರಾಖಿ ಎಲ್. ಮೋಹನ್ ಅವರಿಗೆ, 2022-23ನೇ ಸಾಲಿನ ಅನುಸಂಧಾನ ಪುರಸ್ಕಾರಕ್ಕೆ ಪಾತ್ರವಾಗಿರುವ ಬೆಂಗಳೂರಿನ ಬಿಹೆಚ್ಇಎಲ್ ಎಲೆಕ್ಟ್ರಾನಿಕ್ ವಿಭಾಗದ ಧ್ಯಾನ್ ಜ್ಯೋತಿ ಸೈಕಿಯಾ ಹಾಗೂ 2023-24ನೇ ಸಾಲಿನಲ್ಲಿ ಉತ್ಪಾದಕ ಪುರಸ್ಕಾರಕ್ಕೆ ಪಾತ್ರರಾಗಿರುವ ಇದೇ ಘಟಕದ ಆರ್.ಅನೂಪ್ ಕುಮಾರ್ ಅವರಿಗೆ ಸಚಿವರು ಪುರಸ್ಕಾರ ಪ್ರದಾನ ಮಾಡಿದರು.
ಇದಲ್ಲದೆ; ವಿವಿಧ ರಾಜ್ಯಗಳ ಕಂಪನಿಗಳ ಘಟಕಗಳ ಮುಖ್ಯಸ್ಥರು, ಸಿಬ್ಬಂದಿ ಸೇರಿ ಅನೇಕರು ಹಲವಾರು ಪುರಸ್ಕಾರಗಳಿಗೆ ಪಾತ್ರರಾದರು.
*ಬಿಹೆಚ್ಇಎಲ್’ಗೆ ಎಲ್ಲಾ ಸಹಕಾರ:*
ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ (BHEL) ಕಂಪನಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಕಂಪನಿಯ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದೆ. ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ ದೇಶೀಯ, ವಿದೇಶಿ ಮಟ್ಟದಲ್ಲಿ ಅಪಾರ ಮಟ್ಟದ ಬೇಡಿಕೆಗಳನ್ನು ಗಳಿಸುತ್ತಿರುವ ಕಂಪನಿ ದಕ್ಷತೆ, ಕ್ಷಮತೆಗೆ ಹೆಸರಾಗಿದೆ. ಈ ಹಿನ್ನೆಲೆಯಲ್ಲಿ ಸಚಿವಾಲಯದ ವತಿಯಿಂದ ಕಂಪನಿಗೆ ಸರ್ವ ಸಹಕಾರ ಕೊಡಲಾಗುವುದು ಎಂದು ಸಚಿವ ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು 2047ಕ್ಕೆ ವಿಕಸಿತ ಭಾರತ ಕನಸು ಹೊಂದಿದ್ದು, ಅದರ ಸಾಕಾರಕ್ಕಾಗಿ ನಾವು ಹಗಲಿರುಳು ಕ್ಕೆಲಸ ಮಾಡುತ್ತಿದ್ದೇವೆ. ನಮ್ಮ ಪ್ರಯತ್ನದಲ್ಲಿ ಬಿಎಚ್ಇಎಲ್ ಪಾತ್ರ ದೊಡ್ಡದು ಎಂದು ಸಚಿವರು ಹೇಳಿದರು.
ಇಂಧನ ಕ್ಷೇತ್ರದ ಜತೆಗೆ ರಕ್ಷಣೆ, ಬಾಹ್ಯಾಕಾಶ ಕ್ಷೇತ್ರಗಳಿಗೆ ಬಿಹೆಚ್ಇಎಲ್ ನಿರ್ಣಾಯಕ ಕೊಡುಗೆ ಕೊಟ್ಟಿದೆ. ದೇಶೀಯ ಆರ್ಥಿಕವಾಗಿ ರಾಷ್ಟ್ರಕ್ಕೆ ಅತಿಹೆಚ್ಚು ಕೊಡುಗೆ ನೀಡುತ್ತಿದೆ ಎನ್ನುವುದು ಹೆಮ್ಮೆಯ ವಿಷಯ. ಮೆಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ್ ಭಾರತ ಪರಿಕಲ್ಪನೆಗಳ ಅಡಿಯಲ್ಲಿ ಸಮರ್ಥವಾಗಿ ಬಿಹೆಚ್ಇಎಲ್ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಕಳೆದ ವರ್ಷ ನಾನು ಬೆಂಗಳೂರಿನ ಬಿಹೆಚ್ಇಎಲ್ ಘಟಕದ ವಿದ್ಯುನ್ಮಾನ ಘಟಕಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಕಣ್ಣಾರೆ ಕಂಡಿದ್ದೇನೆ. ಈ ದಿನ ಎರಡು ವರ್ಷಗಳ ಉತ್ಕೃಷ್ಟತಾ ಪುರಸ್ಕಾರ ಸೇರಿ ಇತರೆ ಪುರಸ್ಕಾರಗಳನ್ನು ಆ ಘಟಕ ಪಡೆದುಕೊಂಡಿದೆ. ಇತರೆ ಭಾಗಗಳ ಘಟಕಗಳೂ ಸಾಧನೆಯಲ್ಲಿ ಹಿಂದೆ ಬಿದ್ದಿಲ್ಲ. ಕಂಪನಿಯ ಭವಿಷ್ಯ ಉಜ್ವಲವಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬೃಹತ್ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಕಮರನ್ ರಿಜ್ವಿ, ಬಿಹೆಚ್ಇಎಲ್ ಅಧ್ಯಕ್ಷ – ವ್ಯವಸ್ಥಾಪಕ ನಿರ್ದೇಶಕ ಕೆ.ಸದಾಶಿವ ಮೂರ್ತಿ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು, ಕಂಪನಿಯ ನಿರ್ದೇಶಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.