ಇತ್ತೀಚಿನ ಸುದ್ದಿ
ನಾರಾಯಣಗುರು ವಸತಿ ಶಿಕ್ಷಣ ಸಂಸ್ಥೆಯಲ್ಲಿ ತಾತ್ಕಾಲಿಕ ವ್ಯವಸ್ಥೆಯಲ್ಲಿ ಸ್ಥಳದ ಕೊರತೆ: ಸಿಮೆಂಟ್ ಬ್ಲಾಕ್‌ನ ಶೆಡ್‌ನೊಳಗಡೆ ಟರ್ಪಾಲ್ ಹಾಕಿ ಮಕ್ಕಳಿಗೆ ಶಿಕ್ಷಣ
21/06/2024, 10:08
ಯಾದವ ಕುಲಾಲ್ ಅಗ್ರಬೈಲು ಬಿ.ಸಿ.ರೋಡ್
info.reporterkarnataka@gmal.com
ಒಂದು ಗ್ರಾಮದಲ್ಲಿ ಒಂದು ಸರಕಾರಿ ಪದವಿಪೂರ್ವ ಕಾಲೇಜು ಕಳೆರಡು ವರ್ಷಗಳಿಂದ ಅನಾಥವಾಗಿದ್ದರೆ, ಬಾಡಿಗೆ ನೆಲೆಯಲ್ಲಿ ಆರಂಭ ಮಾಡಿರುವ ವಸತಿ ಶಾಲೆಯು ಸಿಮೆಂಟ್ ಬ್ಲಾಕ್‌ನಿಂದ ನಿರ್ಮಾಣ ಮಾಡಿದ ಶೆಡ್‌ನಂತಿರುವ ಕೋಣೆಯೊಳಗೆ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಿಲಾತಬೆಟ್ಟು ಗ್ರಾಮದ ನೈನಾಡಿನಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಪದವಿಪೂರ್ವ ಕಾಲೇಜಿನ ಸುಸಜ್ಜಿತ ಕಟ್ಟಡ ಅನಾಥವಾಗಿದ್ದರೆ, ಮೆರಿಟ್ ಆಧಾರದಲ್ಲಿ ನೇಮಕಾತಿ ಆದ ವಿದ್ಯಾರ್ಥಿಳಿಗೋಸ್ಕರ ಇರುವ ಹಿಂದುಳಿದ ವರ್ಗಗಳ ಇಲಾಖೆ ಮೂಲಕ ನಿರ್ವಹಣೆಯಲ್ಲಿರುವ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ವ್ಯವಸ್ಥಿತ ಕಟ್ಟಡವೇ ಇಲ್ಲ.
ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಹಾಗೂ ಉತ್ತರ ಕನ್ನಡ ಜಿಲ್ಲೆಗೊಂದು ಶ್ರೀ ನಾರಾಯಣ ಗುರು ವಸತಿ ಶಾಲೆ ಆರಂಭಿಸುವ ಯೋಜನೆ ಮಾಡಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲೆ ವಸತಿ ಶಾಲೆಯು 15 ಎಕರೆ ವಿಸ್ತೀರ್ಣದಲ್ಲಿ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಎಂಬಲ್ಲಿ 18 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಕಾಮಗಾರಿ ಕಾರ್ಯ ಭರದಿಂದ ನಡೆಯುತ್ತಿದೆ. ನೂತನ ಕಟ್ಟಡ ಆಗುವವರೆಗೆ ಮಕ್ಕಳಿಗೆ ಪುಂಜಾಲಕಟ್ಟೆ ಬಳಿಯಲ್ಲಿಯೇ ಬಾಡಿಗೆ ಕಟ್ಟಡದಲ್ಲಿ ವಸತಿ ಹಾಗೂ ತರಗತಿ ಕಳೆದ ಎರಡು ವರ್ಷದಿಂದ ನಡೆಯುತ್ತಿದೆ.
*ಹೇಗಿದೆ ಬಾಡಿಗೆ ವಸತಿ ಶಾಲೆ? :* ಪುಂಜಾಲಕಟ್ಟೆ ಪೆಟ್ರೋಲ್ ಬಂಕ್‌ನ ಬದಿಯಲ್ಲಿ ಹಾದು ಹೋದ ರಸ್ತೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಬಾಡಿಗೆಗೆ ವಸತಿ ಶಾಲೆ ನಡೆಯುತ್ತಿದ್ದರೂ ಸ್ಥಳದ ಅಭಾವ ಕಾಡುತ್ತಿದೆ. ವರ್ಷಕ್ಕೆ ಇಪ್ಪತ್ತೈದು ಹುಡುಗರು ಮತ್ತು ಇಪ್ಪತ್ತೈದು ಹುಡುಗಿಯರು ಸೇರ್ಪಡೆಯಾಗುತ್ತಿದ್ದರೂ ಅವರ ವಾಸ್ತವ್ಯಕ್ಕೆ ಶಟರ್ ಬಾಗಿಲುಗಳಿರುವ ಕೋಣೆ, ಅದೇ ಕಟ್ಟಡದ ಮಹಡಿಯ ಮೇಲಿರುವ ಕೋಣೆ. ಆ ಕಟ್ಟಡದ ಪಕ್ಕದಲ್ಲೇ ಸಿಮೆಂಟ್ ಬ್ಲಾಕ್‌ನಿಂದ ನಿರ್ಮಾಣ ಮಾಡಿದ ಗೋಡೆಗೆ ಮೇಲ್ಚಾವಣಿಗೆ ಹಂಚು ಹಾಕಿರುವ ಎರಡು ಕೋಣೆಗಳಲ್ಲಿ ತರಗತಿಗಳು ನಡೆಯುತ್ತಿದೆ. ಮಳೆಗಾಲವಾದ್ದರಿಂದ ಇದಕ್ಕೆ ಪ್ಲಾಸ್ಟಿಕ್ ಟರ್ಪಾಲ್ ಮುಚ್ಚಿದ್ದು, ಶಾಲಾ ಕೊಠಡಿಯೊಳಗೆ ಬೆಳಕು ಹಾಗೂ ಗಾಳಿ ಹೋಗಲು ಸೀಮಿತ ಸ್ಥಳ ಇರುತ್ತದೆ. ವಸತಿ ಶಾಲೆಯ ಮಕ್ಕಳಿಗೆ ಎಲ್ಲಾ ರೀತಿಯ ಶಿಕ್ಷಣದ ಜೊತೆಗೆ ಕ್ರೀಡೆಗೂ ಸ್ಥಳದ ಕೊರತೆಯೂ ಕಾಣುತ್ತಿದೆ.
*ಶಾಶ್ವತ ವಸತಿ ಶಾಲೆ ಎಲ್ಲಿದೆ? :* ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿರುವ ಸುಮಾರು 15 ಎಕರೆ ನಿವೇಶನವನ್ನು ಏಕಲವ್ಯ ಶಾಲೆಗೆ ಮೀಸಲಿರಿಸಲಾಗಿದ್ದು, ಅದರ ಆರ್‌ಟಿಸಿ ಶಾಲೆಯ ಹೆಸರಿಗೆ ಮಂಜೂರಾಗಿತ್ತು. ಏಕಲವ್ಯ ಶಾಲೆಯ ಮಂಜೂರಾತಿ ಪ್ರಕ್ರಿಯೆ ವಿಳಂಬವಾದ ಕಾರಣ ಪ್ರಸ್ತುತ ಅದೇ ನಿವೇಶನವನ್ನು ಶ್ರೀ ನಾರಾಯಣ ಗುರು ವಸತಿ ಶಾಲೆಗೆ ಮಂಜೂರು ಮಾಡಿ ರೂ. 18 ಸಾವಿರ ಕೋಟಿ ಅನುದಾನದಲ್ಲಿ ಕಟ್ಟಡ ನಿರ್ಮಾಣ ನಡೆಯುತ್ತಾ ಇದೆ.
*ಹೊಸ ಕಟ್ಟಡ ಕಾಮಗಾರಿ ಆರಂಭ:* ನೂತನವಾಗಿ ಆರಂಭವಾಗಲಿರುವ ಶ್ರೀ ನಾರಾಯಣ ಗುರು ವಸತಿ ಶಾಲೆ ಕಟ್ಟಡ ಶಾಲಾ ಕೊಠಡಿ, ವಿದ್ಯಾರ್ಥಿಗಳಿಗೆ ಎರಡು ಪ್ರತ್ಯೇಕ ಹಾಸ್ಟೆಲ್, ಶಿಕ್ಷಕರಿಗೊಂದು ಹಾಸ್ಟೆಲ್ ಕಟ್ಟಡ ಮತ್ತು ಅಡುಗೆ ಕೋಣೆ ಕಟ್ಟಡ ಹೀಗೆ ಒಟ್ಟು ಐದು ಕಟ್ಟಡಗಳು ಬರಲಿದ್ದು, ಕಳೆದ ಆರು ತಿಂಗಳಲ್ಲಿ ಎರಡು ಕಟ್ಟಡದ ಪಿಲ್ಲರ್ ಭೂಮಿ ಅಡಿಯಿಂದ ಮೇಲ್ಭಾಗದ ತನಕ ಕೆಲಸ ನಡೆದಿದೆ. ಶಾಲಾ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆಗಾಲದಲ್ಲಿ ಗುಡ್ಡ ಪ್ರದೇಶದಿಂದ ಕಾಮಗಾರಿ ನಡೆಯುವ ಪ್ರದೇಶಕ್ಕೆ ನೀರು ಹರಿದು ಬರುತ್ತಿದ್ದು ಕಾಮಗಾರಿಯ ವೇಗಕ್ಕೆ ಅಡ್ಡಿಯಾಗುತ್ತಾ ಇದೆ. ಇನ್ನೆರಡು ಕಟ್ಟಡ ನಿರ್ಮಾಣದ ಕಾಮಗಾರಿ ಮಾಡಲು ನಿವೇಶನದಲ್ಲಿರುವ ಮರಗಳನ್ನು ತೆರವುಗೊಳಿಸದೆ ಇರುವುದರಿಂದ ಅದು ಬಾಕಿ ಇರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಿಗೆ 6ನೇ ತರಗತಿಯಿಂದ 10ನೇ ತರಗತಿ ತನಕ ಪ್ರತೀ ವರ್ಷ ಐವತ್ತು ಮಕ್ಕಳಿಗೆ ವಸತಿ ಸಹಿತ ಉಚಿತ ಶಿಕ್ಷಣ ನೀಡುವ ಯೋಜನೆ ನಾರಾಯಣಗುರು ವಸತಿ ಶಿಕ್ಷಣದ್ದಾಗಿದೆ.. ನೂತನ ಶಾಲಾ ಕಟ್ಟಡದ ಕಾಮಗಾರಿ ಆಗುವವೆರೆಗೆ ಬಾಡಿಗೆ ನೆಲೆಯಲ್ಲಿಯೂ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳನ್ನು ನೀಡುವುದು ಸರಕಾರದ ಜವಾಬ್ದಾರಿಯಾಗಿದ್ದು ಆದಷ್ಟು ಬೇಗ ಮಕ್ಕಳಿಗೆ ಎಲ್ಲಾ ವ್ಯವಸ್ಥೆಗಳು ಸಿಗುವಂತಾಗಲಿ.
ಪ್ರಸ್ತುತ ಶಾಲಾ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಹೊಸ ಕಟ್ಟಡಕ್ಕೆ ತೆರಳುವ ನಿರೀಕ್ಷೆಯಲ್ಲಿದ್ದೇವೆ. ಬಾಡಿಗೆ ಕಟ್ಟಡದಲ್ಲಿ ವಾಸ್ತವ್ಯಕ್ಕೆ ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕ ಆರ್‌ಸಿಸಿ ಕಟ್ಟಡ ಇದ್ದು, ತರಗತಿಯು ತಾತ್ಕಾಲಿಕ ಕೊಠಡಿಯಲ್ಲಿ ನಡೆಯುತ್ತಿದೆ. ಕಟ್ಟಡದ ಹಿಂದುಗಡೆ ಇನ್ನೊಂದು ಕೋಣೆಯ ಕಾಮಗಾರಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಅದರ ಉಪಯೋಗವೂ ಸಿಗಲಿದೆ ಎಂದು ನಾರಾಯಣ ಗುರು ವಸತಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಸಂತೋಷ್ ಹೇಳುತ್ತಾರೆ.
ಕಟ್ಟಡ ನಿರ್ಮಾಣ ಭರದಿಂದ ಸಾಗುತ್ತಿದೆ. ಮೊದಲು ಶಾಲಾ ಕೊಠಡಿಗಳಿರುವ ಕಟ್ಟಡವನ್ನು ಪೂರ್ತಿಗೊಳಿಸುತ್ತೇವೆ. ಇದರ ಸ್ಲ್ಯಾಬ್ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ. ಅದರ ಪಕ್ಕದಲ್ಲೇ ಎರಡು ಕಟ್ಟಡದ ಭೂಮಿಯಡಿಯಿಂದ ಪಿಲ್ಲರ್ ಕೆಲಸ ನಡೆದಿದೆ. ನಿವೇಶನದಲ್ಲಿ ಮರಗಳಿರುವುದರಿಂದ ಕೆಲಸ ಮಾಡಲು ಸ್ವಲ್ಪ ತಡವಾಯಿತು. ಮರ ತೆರವುಗೊಳಿಸುವ ಕೆಲಸಪೂರ್ತಿಯಾದ ಕೂಡಲೇ ಅದರ ಕಾಮಗಾರಿಯನ್ನೂ ಆರಂಭ ಮಾಡುತ್ತೇವೆ. ಗುಡ್ಡದ ಮೇಲಿಂದ ನಿರಂತರ ನೀರು ಬರುತ್ತಿರುವುದರಿಂದ ಪಿಲ್ಲರ್ ಪಾಯದ ಕಾಮಗಾರಿ ಮಾಡಲು ಈ ತನಕ ಕಷ್ಟವಾಗಿತ್ತು ಎಂದು
ಗುತ್ತಿಗೆ ಕಂಪೆನಿಯ ಸುಪರ್‌ವೈಸರ್ ನುಡಿಯುತ್ತಾರೆ.
ಪುಂಜಾಲಕಟ್ಟೆಯಲ್ಲಿ ಸುಂದರವಾದ ಕಟ್ಟಡಗಳೊಂದಿಗೆ ನಾರಾಯಣಗುರು ವಸತಿ ಶಾಲೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ವಿಶಾಲವಾದ ಜಾಗದಲ್ಲಿ ಸುಸಜ್ಜಿತವಾದ ಕಟ್ಟಡ ಮೂಡಿಬರಲಿದೆ. ತಾತ್ಕಾಲಿಕವಾಗಿ ಪುಂಜಾಲಕಟ್ಟೆ ಪರಿಸರದಲ್ಲೇ ಇರುವ ಕಟ್ಟಡದಲ್ಲಿ ಬಾಡಿಗೆಗೆ ಶಾಲೆ ಆರಂಭ ಮಾಡಿದ್ದೇವೆ ಎಂದು
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಂದಿಯಾ ನುಡಿಯುತ್ತಾರೆ.
ಪುಂಜಾಲಕಟ್ಟೆಯಲ್ಲಿ ನಾರಾಯಣ ಗುರು ವಸತಿ ಶಾಲೆ ಆರಂಭವಾಗಿದ್ದು, ಹೊಸ ಕಟ್ಟಡ ನಿರ್ಮಾಣ ಆಗುವವರೆಗೆ ತಾತ್ಕಾಲಿಕವಾಗಿ ನಮ್ಮ ಕಟ್ಟಡದಲ್ಲಿ ಶಾಲೆಯನ್ನು ಆರಂಭಿಸಿದ್ದೇವೆ. ವಸತಿಗೆ ಆರ್‌ಸಿಸಿ ಕಟ್ಟಡ ಇರುತ್ತದೆ. ಇನ್ನು ಬರುವ ವಿದ್ಯಾರ್ಥಿಗಳಿಗೆ ಇರುವ ಕಟ್ಟಡದ ಹಿಂದುಗಡೆ ಒಂದು ಕಟ್ಟಡವು ನಿರ್ಮಾಣವಾಗುತ್ತಿದ್ದು, ಕಾಮಗಾರಿ ಕೊನೆಯ ಹಂತದಲ್ಲಿರುತ್ತದೆ ಎಂದು ಬಾಡಿಗೆ ಕಟ್ಟಡ ಮಾಲಕರು ನುಡಿಯುತ್ತಾರೆ.