ಇತ್ತೀಚಿನ ಸುದ್ದಿ
ನಂಜನಗೂಡು: ಜನಸ್ನೇಹಿ ಶಿಕ್ಷಕರಿಗೆ ಗ್ರಾಮಸ್ಥರ ಹೃದಯಸ್ಪರ್ಶಿ ಬೀಳ್ಕೊಡುಗೆ
28/02/2026, 22:00
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಿವೃತ್ತಿ ಹೊಂದಿದ ಜನಸ್ನೇಹಿ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು ಅಪರೂಪದಲ್ಲಿ ಅಪರೂಪವೆಂಬಂತೆ ಅದ್ದೂರಿ ಹಾಗೂ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದು ವಿಶೇಷವಾಗಿತ್ತು.
ಗ್ರಾಮದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಿವೃತ್ತ ಶಿಕ್ಷಕರನ್ನು ಅಲ್ಲಿಂದ ಗ್ರಾಮದ ಸುತ್ತ ಪುಷ್ಪಾರ್ಚನೆ ಮೂಲಕ ಮೆರವಣಿಗೆ ನಡೆಸಿ ಶಾಲಾ ಆವರಣಕ್ಕೆ ಕರೆತರಲಾಯಿತು. ನಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹೇಶ್ ಸೇರಿದಂತೆ ವೇದಿಕೆ ಮೇಲಿನ ಗಣ್ಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.
ಬಳಿಕ ಅವರು ಮಾತನಾಡಿ ಜನಪ್ರಿಯ ಶಿಕ್ಷಕ ವೃತ್ತಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ವೃತ್ತಿಯಲ್ಲಿ ನಿವೃತ್ತಿಯಾಗುವುದು ಅಷ್ಟು ಸುಲಭದ ಕೆಲಸವಲ್ಲ ಇಂತಹ ಜನ ಸಂಪಾದನೆಯೇ ಅವರ ವೃತ್ತಿ ಗೌರವದ ಘನತೆ ಹೆಚ್ಚಿಸಿದ್ದು ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಪಣ್ಣ, ಸಹ ಶಿಕ್ಷಕ ಶಕೀಲ್ ಅಹಮದ್ ಮಾತನಾಡಿ, 30 ವರ್ಷ ಸರ್ಕಾರಿ ಸೇವೆ ಮಾಡಿ ಜನಪ್ರಿಯತೆಗಳಿಸಿದ ಕುಮಾರಸ್ವಾಮಿಯವರು ಶಿಕ್ಷಣ ಇಲಾಖೆಯಲ್ಲಿ ಶಿಸ್ತು, ಸಂಯಮ, ಪರೋಪಕಾರ ಸೇರಿದಂತೆ ಮಾನವೀಯತೆಯಿಂದ ಎಲ್ಲಾ ಶಾಲೆಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುವುದಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡು ಜನಪ್ರಿಯತೆ ಗಳಿಸಿರುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ಅವರ ಕಾರ್ಯವೈಕರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಕೇಂದ್ರ ಬಿಂದು ನಿವೃತ್ತ ಶಿಕ್ಷಕ ಕುಮಾರಸ್ವಾಮಿ ಮಾತನಾಡಿ, 30 ವರ್ಷ ಶಿಕ್ಷಕನಾಗಿ ಕೆಲಸ ಮಾಡಿರುವುದು ನನಗೆ ತೃಪ್ತಿ ತಂದಿದೆ ನನ್ನ ಸರ್ವಿಸ್ ನಲ್ಲಿ ನನಗೆ ಸಹಕರಿಸಿದ ಇಲಾಖೆ ಅಧಿಕಾರಿಗಳು, ಸಹೋದ್ಯೋಗಿ ಶಿಕ್ಷಕರು, ವಿದ್ಯಾರ್ಥಿಗಳು ಮುಖ್ಯವಾಗಿ ಗ್ರಾಮಸ್ಥರು ಹಾಗೂ ಸಮಾಜದ ಬಂಧುಗಳಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ ಸಂತೋಷದಿಂದ ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದು ವೃತ್ತಿ ಜೀವನದ ಅನುಭವಗಳನ್ನು ತಿಳಿಸಿದರು.
ಕಾರ್ಯಕ್ರಮಕ್ಕೆ ವಿವಿಧ ಶಾಲೆಗಳಿಂದ ಸಹೋದ್ಯೋಗಿ ಶಿಕ್ಷಕ ಶಿಕ್ಷಕಿಯರು, ಗ್ರಾಮಸ್ಥರು, ವಿದ್ಯಾರ್ಥಿಗಳು, ರಾಜಕೀಯ ಮುಖಂಡರು, ಸಮಾಜದ ಬಂಧುಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ತಮ್ಮ ನೆಚ್ಚಿನ ಶಿಕ್ಷಕರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.
ತಮ್ಮ ನೆಚ್ಚಿನ ಶಿಕ್ಷಕರಿಗೆ ವಿದ್ಯಾರ್ಥಿಗಳು, ಗ್ರಾಮಸ್ಥರು, ಸಹೋದ್ಯೋಗಿ ಶಿಕ್ಷಕರು, ಸಮಾಜದ ಬಂಧುಗಳು, ಹಿತೈಷಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸರಥಿ ಸಾಲಿನಲ್ಲಿ ಬಂದು ಮಾಲಾರ್ಪಣೆ ಮಾಡಿ ಶಾಲುಹೊದಿಸಿ, ಪೇಟ ತೊಡಿಸಿ ನೆನಪಿನ ಕಾಣಿಕೆಗಳನ್ನು ನೀಡಿ ತಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಬಂದ ಎಲ್ಲರಿಗೂ ಸಿಹಿ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟಾರೆ ಈ ಬೀಳ್ಕೊಡುಗೆ ಸಮಾರಂಭ ಒಂದು ರೀತಿ ಮದುವೆಯ ಸಂಭ್ರಮದಂತಿತ್ತು.


ಗ್ರಾಮಸ್ಥರು ನಡೆಸಿಕೊಟ್ಟ ಈ ಬಿಳ್ಕೊಡುಗೆ ಸಮಾರಂಭ ನಿಜಕ್ಕೂ ಶಿಕ್ಷಕರ ಘನತೆಯನ್ನು ಹೆಚ್ಚಿಸಿದ್ದು ಇಂತಹ ಅದ್ದೂರಿ ಹಾಗೂ ಹೃದಯಸ್ಪರ್ಶಿ ಕಾರ್ಯಕ್ರಮ ನಡೆದಿರುವುದು ತಾಲೂಕಿನಲ್ಲಿ ಇದೆ ಪ್ರಥಮ ಎನ್ನಲಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸದಾನಂದ, ನಗರಸಭೆ ಮಾಜಿ ಅಧ್ಯಕ್ಷ ಮಹಾದೇವಸ್ವಾಮಿ, ಗಾಯತ್ರಿ ಕುಮಾರಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹೇಶ್, ನಿವೃತ್ತ ಮುಖ್ಯ ಶಿಕ್ಷಕರಾದ ಗೋಪಾಲಕೃಷ್ಣ, ಗೋವಿಂದರಾಜ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಪುಟ್ಟಸ್ವಾಮಿ, ಮುಖ್ಯ ಶಿಕ್ಷಕಿ ಮೀನಾಕ್ಷಿ, ಸಹಶಿಕ್ಷಕ ಶಕೀಲ್ ಅಹಮದ್, ಎಸ್ ಡಿ ಎಮ್ ಸಿ ಅಧ್ಯಕ್ಷ ರೇವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.












