ಇತ್ತೀಚಿನ ಸುದ್ದಿ
ನಂಜನಗೂಡು; ರೋಟರಿ ಶಾಲೆಯಿಂದ ಸಾರ್ವಜನಿಕ ಪಾರ್ಕ್ ನಲ್ಲಿ ಅಕ್ರಮ ಶೌಚಾಲಯ ಕಟ್ಟಡ ನಿರ್ಮಾಣ: ಸಾರ್ವಜನಿಕರ ಆರೋಪ
09/03/2025, 16:53

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ಪಟ್ಟಣದ ಹಾಲೋಜಿ ರಾವ್ ಬಡಾವಣೆಗೆ ಸೇರಿದ ಪಾರ್ಕ್ ನಲ್ಲಿ ಪಕ್ಕದ ರೋಟರಿ ಶಾಲೆಯವರು ಅತಿಕ್ರಮ ಪ್ರವೇಶ ಮಾಡಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ ಎಂದು ಬಡಾವಣೆಯ ಶ್ರೀ ನಂಜುಂಡೇಶ್ವರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಬಡಾವಣೆಯ ನಿವಾಸಿಗಳು ಆರೋಪಿಸಿ ಕೂಡಲೇ ಇದನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ
ಇಂದು ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ರೋಟರಿ ಶಾಲಾ ಪಕ್ಕದಲ್ಲಿ ಇದ್ದ ಪಾರ್ಕನ್ನು ನಮ್ಮ ಸಂಸ್ಥೆ ವತಿಯಿಂದ ಅಭಿವೃದ್ಧಿಪಡಿಸುವುದಾಗಿ ಹೇಳಿ ಯಾವುದೇ ಅಭಿವೃದ್ಧಿ ಮಾಡದೆ ಪಾರ್ಕ್ ನಲ್ಲಿ ಅಕ್ರಮ ಕಟ್ಟಡ ಹಾಗೂ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ಶೌಚಾಲಯ ನಿರ್ಮಾಣ ಮಾಡಿದ್ದರೂ ಅದರ ನಿರ್ವಹಣೆ ಇಲ್ಲದೆ ಬೀಗ ಜಡಿ ದಿರುವುದರಿಂದ ಶಾಲಾ ಮಕ್ಕಳು ಪಾರ್ಕ್ ನಲ್ಲಿ ಬಯಲು ಶೌಚ ಮಾಡುತ್ತಿದ್ದಾರೆ ಅಲ್ಲದೆ ಶಾಲಾ ಕಸ ಹಾಗೂ ತ್ಯಾಜ್ಯ ವಸ್ತುಗಳನ್ನು ಸಹ ಪಾರ್ಕ್ ನಲ್ಲಿ ತಂದು ಹಾಕುತ್ತಿರುವುದರಿಂದ ಇಡೀ ಪಾರ್ಕ್ ಗಬ್ಬೆದ್ದು ನಾರುತಿದ್ದು ಇದರಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಬೀತಿ ಎದುರಾಗಿದೆ ಎಂದು ಆರೋಪಿಸಿದರು
ಈ ಸಂಬಂಧ ಶಾಲಾ ಆಡಳಿತ ಮಂಡಳಿ ಹಾಗೂ ನಗರಸಭೆ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿದ್ದರು ಕ್ಯಾರೆ ಎನ್ನದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ನೂತನ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರ ಗಮನಕ್ಕೂ ತಂದಿದ್ದು ಅವರೂ ಕೂಡ ಈ ಸಮಸ್ಯೆ ಬಗೆಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಆದರೂ ಶಾಸಕರ ಮಾತಿಗೂ ಕಿಮ್ಮತ್ ಇಲ್ಲದಂತೆ ಶಾಲಾ ಆಡಳಿತ ಮಂಡಳಿ ಹಾಗೂ ನಗರಸಭೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ತಿಳಿಸಿದರು
ಕೂಡಲೇ ಇನ್ನೊಂದು ವಾರದೊಳಗೆ ಇದನ್ನು ತೆರವುಗೊಳಿಸಿ , ನಮ್ಮ ಸಮಸ್ಯೆ ಬಗೆಹರಿಸದೆ ಇದ್ದಲ್ಲಿ ಸಂಬಂಧ ಪಟ್ಟ ರೋಟರಿ ಶಾಲೆ ಹಾಗೂ ನಗರಸಭೆ ಮುಂಭಾಗ ನಮ್ಮ ಸಂಘದ ಹಾಗೂ ಬಡಾವಣೆಯ ನಿವಾಸಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಾವೇ ತೆರೆವುಗೊಳಿಸುವುದಾಗಿ ಎಚ್ಚರಿಕೆ ನೀಡಿದರು
ಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷರಾದ ಷಣ್ಮುಗ ಸ್ವಾಮಿ ಅಧ್ಯಕ್ಷರಾದ ವಿಜಯಕುಮಾರ್ ಪದಾಧಿಕಾರಿಗಳಾದ ಬಸವರಾಜು, ಬಸವಲಿಂಗ ಶೆಟ್ಟಿ , ಕುಮಾರ್,ಮಂಜುನಾಥ್,ಶಕುಂತಲಾ ಹಾಗೂ ಕೋಮಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು