ಇತ್ತೀಚಿನ ಸುದ್ದಿ
ನಂಜನಗೂಡು: ಟಿವಿಎಸ್ ಕಂಪನಿ ವತಿಯಿಂದ ಸಾಂಪ್ರದಾಯಿಕ ಹಳ್ಳಿ ಹಬ್ಬ ಆಚರಣೆ
02/02/2025, 16:50
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಟಿವಿಎಸ್ ಕಂಪನಿಯ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ ಮತ್ತು ಸುಂದರಂ ಕ್ಲೇಟಾನ್ ನ ಸಾಮಾಜಿಕ ಅಂಗ ಸಂಸ್ಥೆ ಹಾಗೂ ನಂಜನಗೂಡು ತಾಲೂಕು ಹೆಚ್ ಕೊಂಗಳ್ಳಿ ಗ್ರಾಮಸ್ಥರ ಸಹಯೋಗದೊಂದಿಗೆ ಹಳ್ಳಿ ಹಬ್ಬ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಕೊಂಗಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹೆಗ್ಗಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತರಾಜ್ ಸೇರಿದಂತೆ ಮತ್ತಿತರ ಗಣ್ಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತರಾಜ್ ಹಾಗೂ ಸಂಜೀವಿನಿ ಸಂಘದ ಮುಖ್ಯಸ್ಥರಾದ ಜಯಲಕ್ಷ್ಮಿ ಮಾತನಾಡಿ
ಹಿಂದಿನ ನಮ್ಮ ಪೂರ್ವಜರು ಆಚರಿಸಿಕೊಂಡು ಬರುತ್ತಿದ್ದ ಗ್ರಾಮೀಣ ಸೊಗಡಿನ ಹಲವಾರು ಸಾಂಸ್ಕೃತಿಕ ಕಲೆ, ಸಂಸ್ಕೃತಿ, ಉಡುಗೆ, ತೊಡುಗೆ, ಆಹಾರ ಸೇರಿದಂತೆ ಹಲವಾರು ಸಾಂಪ್ರದಾಯಿಕ ಹಬ್ಬಗಳು ನಶಿಸಿ ಹೋಗುತ್ತಿವೆ ಹಾಗಾಗಿ ಅದನ್ನು ಹಳ್ಳಿಗಳಲ್ಲಿ ಉಳಿಸಿ ಬೆಳೆಸಿ ಮತ್ತೆ ಮರುಕಳಿಸುವಂತೆ ಟಿವಿಎಸ್ ಕಂಪನಿಯವರು ಗ್ರಾಮಸ್ಥರ ಸಹಯೋಗದೊಂದಿಗೆ ಹಳ್ಳಿಗಳಲ್ಲಿ ಇಂತಹ ಆಚರಣೆ ಆಚರಿಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಳ್ಳಿ ಸೊಗಡಿನ ಭತ್ತ, ರಾಗಿ, ಜೋಳ ಸೇರಿದಂತೆ ವಿವಿಧ ಧಾನ್ಯಗಳ ರಾಶಿ ಪೂಜೆ, ಗೋಪೂಜೆ, ಭತ್ತ ಕುಟ್ಟುವುದು, ರಾಗಿ ಬೀಸುವುದು, ಸೋಬಾನೆ ಪದ, ರಂಗೋಲಿ ಸ್ಪರ್ಧೆ ಸೇರಿದಂತೆ ಮಕ್ಕಳು ಹಾಗೂ ಮಹಿಳೆಯರಿಗೆ ಸಾಂಸ್ಕೃತಿಕ ಹಾಗು ಆಟೋಟ ಸ್ಪರ್ಧೆಗಳನ್ನು ನಡೆಸಿ ಹಳ್ಳಿ ಹಬ್ಬಗಳಿಗೆ ಮರುಜೀವ ನೀಡುವ ಕೆಲಸ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ಕಳಸ ಹೊತ್ತ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಸೋಬಾನೆ ಪದ ಆಡುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಲಾಯಿತು.
ಒಟ್ಟಾರೆ ಈ ಕಾರ್ಯಕ್ರಮವು ಹಿಂದಿನ ಹಳ್ಳಿ ಸೊಗಡಿನ ಸಾಂಪ್ರದಾಯಿಕವನ್ನು ನೆನಪಿಸುವಂತಿತ್ತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಸವರಾಜು, ಮುಖಂಡರಾದ ಕೆಎಲ್ ಬಸವರಾಜು, ಕೆ ಸಿ ನಾಗಪ್ಪ, ಜಿಲ್ಲಾ ಸಂಯೋಜಕ ಚನ್ನಪ್ಪ ನಾಯಕ,ಶಿವಬಸಪ್ಪ, ದೇವಣ್ಣ, ರಾಜಶೇಖರ್, ಸವಿತಾ ಕುಮಾರಿ, ಮಹದೇವಮ್ಮ ಸೇರಿದಂತೆ ಗ್ರಾಮದ ಯಜಮಾನರುಗಳು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.