ಇತ್ತೀಚಿನ ಸುದ್ದಿ
ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ
26/04/2024, 16:58
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡಿನಲ್ಲಿ ಮಧ್ಯಾಹ್ನ 4:00 ಹೊತ್ತಿಗೆ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತ ಹಾಗೂ ಬಿರುಸಿನ ಮತದಾನ ನಡೆದು ಸುಮಾರು ಶೇ. 65 ನಡೆದಿರುವುದಾಗಿ ತಿಳಿದು ಬಂದಿದೆ.
ಬೆಳಗ್ಗೆ ಮಂದಗತಿಯಲ್ಲಿ ಪ್ರಾರಂಭವಾದ ಮತದಾನ ಮಧ್ಯಾಹ್ನದ ವೇಳೆಗೆ ಚುರುಕುಗೊಂಡಿತು.
ನಂಜನಗೂಡು ನಗರವು ಸೇರಿದಂತೆ ಕ್ಷೇತ್ರದಾದ್ಯಂತ ಕೆಲವೇಡೆ ಮತದಾನ ಮಂದಗತಿಯಲ್ಲಿ ನಡೆದರೆ ಕೆಲವೇಡೆ ಬಿರುಸಿನ ಮತದಾನ ನಡೆಯಿತು. ಮತದಾನದಲ್ಲಿ ವಿಕಲಚೇತನರು, ವೃದ್ಧರಾದಿಯಾಗಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು.
ಇನ್ನು ತಮ್ಮ ತಮ್ಮ ಮತಗಟ್ಟೆಗಳ ಬಳಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಮುಖಂಡರುಗಳು ಟೇಬಲ್ ಶಾಮಿಯಾನ ಹಾಕಿ ಮತದಾನಕ್ಕೆ ಹೋಗುವ ಮತದಾರರನ್ನು ತಡೆದು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಕೊನೆಯದಾಗಿ ಮತಯಾಚನೆ ಮಾಡುತ್ತಿದ್ದರು.
ಕೆಲವೆಡೆ ಎರಡು ಪಕ್ಷಗಳ ಮುಖಂಡರು ತಮ್ಮ ತಮ್ಮ ಪಕ್ಷಗಳ ಹಾಗು ನಾಯಕರುಗಳ ಪರ ಜಯಕಾರದ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಇದೇ ಸಂದರ್ಭ ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿಯ ಹಿರಿಯ ಮುಖಂಡ ಎಸ್. ಮಹದೇವಯ್ಯ ನಂಜನಗೂಡಿನ ಸರ್ಕಾರಿ ಜೂನಿಯರ್ ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಳಿಕ ಅವರು ಮಾತನಾಡಿ ನನ್ನ ವೋಟು ನಂಜನಗೂಡಿನಲ್ಲಿ ಇದ್ದು ಈಗ ಕುಟುಂಬ ಸಮೇತರಾಗಿ ಮತ ಚಲಾಯಿಸಿ ಬಂದಿದ್ದೇನೆ ಅಲ್ಲದೆ ಪಟ್ಟಣದ ವಿವಿಧ ಮತಗಟ್ಟೆಗಳಿಗೆ ತೆರಳಿ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ನಮ್ಮ ಅಭ್ಯರ್ಥಿ ಬಾಲರಾಜ್ ಅವರಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಹಾಗೂ ಮತ ಚಲಾವಣೆಯಾಗಿದ್ದು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅಂತರದಿಂದ ಜಯಗಳಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಂಜನಗೂಡು ನಗರ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದರಾಜು ಮಾತನಾಡಿ ನಗರದ ಎಲ್ಲಾ ಬೂತ್ ಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತ ಚಲಾವಣೆಯಾಗಿದ್ದು ನಂಜನಗೂಡಿನಲ್ಲಿ ಬಿಜೆಪಿ ಹೆಚ್ಚು ಬಹುಮತ ಕೊಡುವುದಾಗಿ ತಿಳಿಸಿದರು.
ಚುನಾವಣಾ ವೇಳೆ ನಂಜನಗೂಡು ಪಟ್ಟಣದ ಗುರುಭವನ ಹಾಗೂ ತಾಲೂಕಿನ ಬಾಗೂರು ಮತ್ತು ಮಾದಾಪುರ ಗ್ರಾಮಗಳ ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟು ನಂತರ ಅವುಗಳನ್ನು ಬದಲಾಯಿಸಿ ಮತದಾನ ನಡೆಸಲಾಯಿತು. ಇದರಿಂದ ಅರ್ಧ ಗಂಟೆ ತಡವಾಗಿ ಮತದಾನ ಪ್ರಾರಂಭಗೊಂಡಿರುವುದಾಗಿ ತಿಳಿದು ಬಂದಿದೆ.