ಇತ್ತೀಚಿನ ಸುದ್ದಿ
ನಂಜನಗೂಡು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ: ಎಸ್ ಮಹದೇವಯ್ಯ ಆರೋಪ
06/02/2025, 14:45
![](https://reporterkarnataka.com/wp-content/uploads/2025/02/IMG-20250206-WA0016.jpg)
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡಿನ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಲಂಚ ಮತ್ತು ಭ್ರಷ್ಟಾಚಾರದ ಹಾವಳಿ ವಿಪರೀತವಾಗಿದ್ದು ರೈತರ ಹಾಗೂ ಬಡವರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಮಹದೇವಯ್ಯ ಆರೋಪಿಸಿದ್ದಾರೆ.
ಇಂದು ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ನಂಜನಗೂಡು ತಾಲೂಕಿನ ಕಾಡಂಚಿನ ಹಲವು ಗ್ರಾಮಗಳಲ್ಲಿ ಆನೆಗಳು ಮತ್ತು ಚಿರತೆಗಳ ಹಾವಳಿ ವಿಪರೀತವಾಗಿದ್ದು ಇದರಿಂದ ಆ ಭಾಗದ ರೈತರಿಗೆ ಬಹಳ ತೊಂದರೆಯಾಗುತ್ತಿದೆ.
ಆನೆಗಳ ದಾಳಿಗೆ ಸಿಲುಕಿ ನಷ್ಟವಾದ ರೈತರ ಬೆಳೆ, ಸೋಲಾರ್ ತಂತಿ ಬೇಲಿ, ಪಂಪ್ಸೆಟ್ ಸೇರಿದಂತೆ ಯಾವುದಕ್ಕೂ ಸರಿಯಾದ ಪರಿಹಾರ ಸಿಗುತ್ತಿಲ್ಲ ಆನೆಗಳ ದಾಳಿ ತಡೆಗಟ್ಟುವಲ್ಲಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ತಿಳಿಸಿದರು.
ಇನ್ನು ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯಿಂದಾಗಿ ಹಲವಾರು ಕುಟುಂಬಗಳು ಗ್ರಾಮಗಳನ್ನೇ ತೊರೆದು ಸಾವು ನೋವುಗಳು ಸಹ ಸಂಭವಿಸಿವೆ ಇದಕ್ಕೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಅಥವಾ ತಹಸೀಲ್ದಾರ್ ಅವರು ಕಠಿಣ ಕ್ರಮ ವಹಿಸಬೇಕು ಎಂದರು.
ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಕಳೆಯುತ್ತಿದ್ದರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಸಿ ಮಹದೇವಪ್ಪ ಅವರು ತಾಲೂಕು ಅಭಿವೃದ್ಧಿ ಗೆ ಸಂಬಂಧಿಸಿದಂತೆ ಇದುವರೆಗೆ ಒಂದು ಕೆಡಿಪಿ ಸಭೆಯನ್ನು ಕರೆದಿಲ್ಲ ಎಂದು ಆರೋಪ ಮಾಡಿದರು.
ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿ ಲಂಚ ಇಲ್ಲದೆ ಯಾವುದೇ ಒಬ್ಬ ಬಡ ಹಾಗೂ ರೈತರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಲಂಚ ಕೊಟ್ಟವರ ಹಾಗೂ ಮಧ್ಯವರ್ತಿಗಳ ಕೆಲಸಗಳು ಮಾತ್ರ ನಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಪಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ, ಮುಖಂಡರುಗಳಾದ ವೃಷಬೇಂದ್ರ, ಮಂಜುನಾಥ್, ಉಮೇಶ್ ಮೋದಿ ಉಪಸ್ಥಿತರಿದ್ದರು.