ಇತ್ತೀಚಿನ ಸುದ್ದಿ
ನಂಜನಗೂಡು: ಕೆರೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ನವಂಬರ್ 6ರಿಂದ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ
05/11/2024, 19:01
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ತಾಲೂಕು ಹೆಡತಲೆ ಗ್ರಾಮದ ಸರ್ವೆ ನಂಬರ್ 517ರಲ್ಲಿರುವ 19 ಎಕರೆ ಪ್ರದೇಶದ ಹಳೆಗುಂಡ್ಲಾ ಚೆನ್ನಯ್ಯನ ಕೆರೆಗೆ ಕಬಿನಿ ನದಿಯಿಂದ ನೀರು ತುಂಬಿಸುವ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ನಾಳೆ ನವಂಬರ್ 6ರಿಂದ ಅನಿರ್ದಿಷ್ಟಾವಧಿ ರೈತರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್ ತಿಳಿಸಿದ್ದಾರೆ.
ಇಂದು ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ತಾಲೂಕಿನ ಕೆರೆಗಳ ರಕ್ಷಣೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ.
ನಮ್ಮ ಹೋರಾಟದ ಫಲವಾಗಿ ತಾಲೂಕಿನ ಹಲವಾರು ಕೆರೆಗಳನ್ನು ರಕ್ಷಣೆ ಮಾಡಿ ಕೆಲವು ಕೆರೆಗಳಿಗೆ ನೀರನ್ನು ತುಂಬಿಸುವ ಕೆಲಸವು ಕೂಡ ನಡೆದಿದೆ. ಅದರಂತೆ ರೈತರ ಅನುಕೂಲಕ್ಕಾಗಿ ನಮ್ಮ ತಾಲೂಕಿನ ಹೆಡತಲೆ ಗ್ರಾಮದ ಸರ್ವೆ ನಂಬರ್ 517ರಲ್ಲಿ ಇರುವ 19 ಎಕರೆ ಪ್ರದೇಶದ ಹಳೆ ಗುಂಡ್ಲ ಚನ್ನಯ್ಯನ ಕೆರೆಗೆ ಕಬಿನಿ ನದಿಯಿಂದ ನೀರು ತುಂಬಿಸುವ ಯೋಜನೆಗಾಗಿ ಸರ್ಕಾರವನ್ನು ಒತ್ತಾಯಿಸಿ ನವೆಂಬರ್ 6ರಿಂದ ಅನಿರ್ದಿಷ್ಟಾವಧಿ ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಪ್ರತಿಭಟನೆಗೆ ಆ ಭಾಗದ ಎಲ್ಲಾ ಗ್ರಾಮಗಳ ರೈತರು ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡರು.
ಕಪಿಲಾ ನದಿಯಿಂದ ತಮಿಳುನಾಡಿಗೆ ನೂರಾರು ಟಿಎಂಸಿ ನೀರು ಹರಿದು ಹೋಗಿದೆ. ನಮ್ಮ ಭಾಗದ ಕಪಿಲ ಮಾತೆಯ ನೀರನ್ನು ತಮಿಳುನಾಡಿನ ನೀರಿನ ಸಾಲ ತೀರಿಸಲು ಕಟ್ಟಿರುವ ಅಣೆಕಟ್ಟೆ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಹಾಗಾಗಿ ಸರ್ಕಾರಗಳು ಮತ್ತು ಅಧಿಕಾರಿಗಳು ನಮ್ಮ ಈ ಭಾಗದ ರೈತರಿಗೆ ದ್ರೋಹ ಮಾಡುತ್ತಿವೆ. ಇದನ್ನು ನಮ್ಮದೌರ್ಬಲ್ಯವೆಂದು ತೀರ್ಮಾನಿಸಿವೆ. ಇದನ್ನು ನಾವು ಈಗ ಸರ್ಕಾರ ಪ್ರಶ್ನಿಸಲೇ ಬೇಕಾಗಿದೆ ಎಂದರು.
ಕೆರೆಕಟ್ಟೆಗಳು, ಗೋಮಾಳಗಳು, ಸೇಂದಿವನ ಸೇರಿದಂತೆ ಸರ್ಕಾರಿ ಜಾಗಗಳ ಒತ್ತುವರಿ ಹಾಗೂ ರಕ್ಷಣೆಗೆ ನಮ್ಮ ಸಂಘಟನೆಯು ಸದಾ ಮುಂದಿದೆ ಎಂದು ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿಮ್ಮಾವುರಘು, ತಾಲೂಕು ಘಟಕದ ಅಧ್ಯಕ್ಷ ಸತೀಶ್ ರಾವ್ ಮುಖಂಡರುಗಳಾದ ಶಿವಣ್ಣ, ಉಪ್ಪಿನಳ್ಳಿ ದೇವರಾಜ್, ಕೆಂಪಿಪಿಸಿದ್ದನಹುಂಡಿ ಮಂಜು, ಸೇರಿದಂತೆ ಹೇಳುತ್ತಲೇ ಹೆಮ್ಮರಗಲ ಕುಂಬರಹಳ್ಳಿ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.