ಇತ್ತೀಚಿನ ಸುದ್ದಿ
ನಂಜನಗೂಡು ನಿವಾಸಿಗಳಿಗೆ ಕಲುಷಿತ ನೀರು ಪೂರೈಕೆ..!: ನಗರಸಭಾ ಅಧಿಕಾರಿಗಳ ವಿರುದ್ಧ ಆಕ್ರೋಶ
15/06/2024, 18:48
ಸಿಎಂ ತವರಿನಲ್ಲೇ ನಗರಸಭಾ ಅಧಿಕಾರಿಗಳ ಬೇಜವಾಬ್ದಾರಿ
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.ಕಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ತವರು ಜಿಲ್ಲೆ ದಕ್ಷಿಣ ಕಾಶಿ ನಂಜನಗೂಡು ನಗರದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂಜನಗೂಡಿನ ಗೌತಮ ಬಡಾವಣೆ ಸೇರಿದಂತೆ ಎಲ್ಲ ಬಡಾವಣೆಗಳಿಗೆ ದೇವಿರಮ್ಮನಹಳ್ಳಿ ಬಡಾವಣೆಯ ಬಳಿ ಇರುವ ಕುಡಿಯುವ ನೀರಿನ ಶುದ್ಧೀಕರಣ ಘಟಕದಿಂದ ಕಳೆದ 15 ದಿನಗಳಿಂದ ನಂಜನಗೂಡು ನಗರಕ್ಕೆ ಕಲುಷಿತ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕುಡಿಯಲು ಯೋಗ್ಯವಲ್ಲದ ನೀರನ್ನು ಜನರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಪಿಲಾ ನದಿಯಿಂದ ನೀರನ್ನು ಶುದ್ಧೀಕರಿಸಿ ನಂತರ ನಿವಾಸಿಗಳಿಗೆ ಸರಬರಾಜು ಮಾಡಬೇಕು. ಆದರೆ, ನೀರನ್ನು ಶುದ್ಧೀಕರಿಸದೆ ಮುಂಜಾಗ್ರತಾ ಕ್ರಮ ಅನುಸರಿಸದೆ ನೀರನ್ನು ಪಟ್ಟಣದ ಎಲ್ಲಾ ಬಡಾವಣೆಗಳಿಗೆ ಮತ್ತು ಮನೆಗಳಿಗೆ ಕಲುಷಿತ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ನಂಜನಗೂಡಿನ ನಗರಸಭಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರನ್ನು ಶುದ್ಧೀಕರಿಸುವ ಯಂತ್ರಗಳು ಕೆಟ್ಟು ನಿಂತಿದ್ದು, ಅದನ್ನು ಸರಿಪಡಿಸುವಲ್ಲಿ ನಗರಸಭಾ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ.
ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಇನ್ನಾದರೂ ಸ್ಥಳೀಯ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರು ಇಂತಹ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕು ಎಂದು ಎಚ್ಚರಿಸಿದರು ಸ್ಥಳಕ್ಕೆ ಆಗಮಿಸಿದ ನಗರಸಭಾ ಅಧಿಕಾರಿಗಳಿಗೆ ಗೌತಮ ಬಡಾವಣೆಯ ನಿವಾಸಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕೂಡಲೇ ಶುದ್ಧ ಕುಡಿಯುವ ನೀರನ್ನು ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಜನರಿಗೆ ಪೂರೈಸುವ ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಿ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು. ಕೆಟ್ಟು ನಿಂತಿರುವ ಯಂತ್ರಗಳನ್ನು ದುರಸ್ತಿಗೊಳಿಸಬೇಕು ಇಲ್ಲವಾದಲ್ಲಿ ನಗರಸಭಾ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.