ಇತ್ತೀಚಿನ ಸುದ್ದಿ
ನಂಜನಗೂಡು: ಭೀಮಾ ಕೋರೆಗಾಂವ್ ವಿಜಯೋತ್ಸವದ ಜಾಗೃತಿ ರಥಕ್ಕೆ ಚಾಲನೆ
01/01/2024, 17:20
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಭೀಮಾ ಕೋರೆಗಾಂವ್ ವಿಜಯೋತ್ಸವದ ಹಿನ್ನಲೆಯಲ್ಲಿ ನಂಜನಗೂಡು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಆರ್.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಲಾಯಿತು.
ನಂಜನಗೂಡಿನ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಜ.7 ರಂದು ನಂಜನಗೂಡಿನಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಸ್ವಾಭಿಮಾನದ ನಡಿಗೆ ಪ್ರಬುದ್ಧ ಭಾರತದ ಕಡೆಗೆ ಎಂಬ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅದರ ಹಿನ್ನೆಲೆ ಇಂದು
ವಾಲ್ಮೀಕಿ ಗುರುಪೀಠದ ಪ್ರಸನ್ನನಂದಪುರಿ ಸ್ವಾಮೀಜಿ ಹಾಗೂ ಹಿರಿಯ ಹೋರಾಟಗಾರ ಉಗ್ರ ನರಸಿಂಹೇಗೌಡ ಸೇರಿದಂತೆ ಮತ್ತಿತರ ಗಣ್ಯರು 206ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ಜಾಗೃತಿ ರಥಕ್ಕೆ ನೀಲಿ ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಭಾರತ ದೇಶವು ಜಾತಿ ವ್ಯವಸ್ಥೆಯಿಂದ ಕೂಡಿರುವ ದೇಶವಾಗಿದೆ. ಜಾತಿಯ ಕಾರಣಕ್ಕಾಗಿ ವ್ಯಕ್ತಿಯನ್ನು ಕೆಟ್ಟದಾಗಿ ಕಾಣುವ ಪರಿಸ್ಥಿತಿ ಇದೆ. ಈ ನಾಡಿನ ಶೋಷಿತರಿಗೆ ಒಂದು ಬದುಕನ್ನು ಕಟ್ಟಿಕೊಟ್ಟವರು ಅಂಬೇಡ್ಕರ್ ಅವರು, ಅಂಬೇಡ್ಕರ್ ಅವರನ್ನು ನಾವು ಸ್ಮರಣೆ ಮಾಡಿಕೊಳ್ಳಲೇ ಬೇಕು. ಜ.1, 1818 ರಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಾಭಿಮಾನಕ್ಕಾಗಿ ಭೀಮಾ ಕೋರೆಗಾಂವ್ ಯುದ್ಧವು ನಡೆದು ಐನೂರು ಜನ ಮಹರ್ ಸೈನಿಕರು, 25,000 ಸಾವಿರ ಪೇಶ್ವೆಗಳ ವಿರುದ್ಧ ಯುದ್ಧ ಮಾಡಿ ಜಯಗಳಿಸಿದ್ದರು. ಇದನ್ನು ನಾವು ವಿಜಯೋತ್ಸವವಾಗಿ ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೇವೆ ಎಂದರು.
ಇದೇ ಸಂದರ್ಭ ಭೀಮಕೋರೆಗಾವ್ ವಿಜಯೋತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಜಯಕಾರದ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜು, ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ನಂಜುಂಡಸ್ವಾಮಿ, ಪ್ರತಿಧ್ವನಿ ವೇದಿಕೆಯ ತಾಲೂಕು ಅಧ್ಯಕ್ಷ ತ್ರಿನೇಶ್, ಅನುರಾಗ ಮಕ್ಕಳ ಮಂಟಪದ ಅಧ್ಯಕ್ಷ ಸೋಮಶೇಖರ್, ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ವಿಜಯಕುಮಾರ್ ಸೇರಿದಂತೆ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮುಖಂಡರು ಭಾಗವಹಿಸಿದ್ದರು.