ಇತ್ತೀಚಿನ ಸುದ್ದಿ
ನಮಗೆ ಬೇಕಾದ ವಸ್ತುಗಳನ್ನು ನಾವೇ ಉತ್ಪಾದಿಸಿ ಬಳಸುವಂತಾಗಬೇಕು: ಸಚಿವ ವಿ. ಸುನಿಲ್ ಕುಮಾರ್
14/01/2022, 18:20
ಕಾರ್ಕಳ(reporterkarnataka.com): ನಮಗೆ ಬೇಕಾದ ವಸ್ತುಗಳನ್ನು ನಾವೇ ಉತ್ಪಾದಿಸಿ ಬಳಸುವಂತಾಗಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ನಿಟ್ಟೆ ಕಾಲೇಜು ಸಭಾಂಗಣದಲ್ಲಿ ನಡೆದ ಭಾರತ ಸರ್ಕಾರದ ಎಸ್ ಎಫ್ ಯು ಆರ್ ಟಿ ಐ ಸ್ಟೀಮ್ ನಿಂದ ಪ್ರಾಯೋಜಿತ ಹಲಸಿನ ಹಣ್ಣಿನ ಸಂಸ್ಕರಣ ಕ್ಲಸ್ಟರ್ ಶಂಕುಸ್ಥಾಪನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಚಿವರು, ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತದ ಕಲ್ಪನೆಯಡಿಯಲ್ಲಿ ದೇಶಾದ್ಯಂತ ಹತ್ತಾರು ಪ್ರಯೋಗಗಳು ನಡೆಯುತ್ತಿವೆ. ಒಂದು ತಾಲೂಕು ಒಂದು ಉತ್ಪನ್ನ ಯೋಜನೆಯನ್ನು ಕಾರ‍್ಯರೂಪಕ್ಕೆ ತರಲಾಗುತ್ತಿದ್ದು ,ಗ್ರಾಮೀಣ ಉತ್ಪನ್ನಗಳಿಗೆ ಮಹತ್ವ ನೀಡಲಾಗುತ್ತಿದೆ. ಎಂದರು.
ಹಲಸಿನ ಹಣ್ಣಿನ ಸಂಸ್ಕರಣ ಕ್ಲಸ್ಟರ್ ಘಟಕದ ಶಂಕುಸ್ಥಾಪನೆ ನೆರವೇರಿಸಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ವಿನಯ್ ಹೆಗ್ಡೆ ಮಾತನಾಡಿ, ನಿಟ್ಟೆಯಲ್ಲಿ ಅಭಿವೃದ್ದಿಯ ಕ್ರಾಂತಿಯಾಗಿ, ಸ್ಥಳೀಯರಿಗೆ ಉದ್ಯೋಗವಾಕಾಶ ನೀಡುವ ಮೂಲಕ ಅಭಿವೃದ್ದಿ ಪಥದತ್ತ ಸಾಗಲಿ ಎಂದು ಶುಭ ಹಾರೈಸಿದರು.
ಎಐಸಿ ನಿಟ್ಟೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎ. ಪಿ. ಆಚಾರ್ ಕಂಪೆನಿಯ ಮಹತ್ವವನ್ನು ವಿವರಿಸಿದರು.
ಸಭೆಯಲ್ಲಿ ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಎನ್ ಸಾಲಿಯಾನ್, ಸುಫಲ ಫಾರ್ಮರ್ ಪ್ರೋಡ್ಯೂಸರ್ ಕಂಪನಿ ಅಧ್ಯಕ್ಷ ನಾರಾಯಣ ಟಿ ಪೂಜಾರಿ, ಸುಫಲ ಫಾರ್ಮಸ್ ಪ್ರೊಡ್ಯೂಸರ್ ಕಂಪನಿ(ನಿ) ಆಡಳಿತ ನಿರ್ದೇಶಕರಾದ ನವೀನ್ ನಾಯಕ್ ಉಪಸ್ಥಿತರಿದ್ದರು .