ಇತ್ತೀಚಿನ ಸುದ್ದಿ
ನಾಡಕಚೇರಿ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ ಪ್ರಕರಣ: ಉಪ ತಹಸೀಲ್ದಾರ್ ಶಿವಕುಮಾರ್ ಸಸ್ಪೆಂಡ್; ಪ್ರಾದೇಶಿಕ ಆಯುಕ್ತರ ಆದೇಶ
08/01/2024, 15:05
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಿರಂತರ ಕಿರುಕುಳದಿಂದ ಬೇಸತ್ತು ಡೆತ್ ನೋಟ್ ಬರೆದು ಹುಲ್ಲಹಳ್ಳಿ ನಾಡಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾದ ಕಂಪ್ಯೂಟರ್ ಆಪರೇಟರ್ ಪರಮೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಉಪ ತಹಸೀಲ್ದಾರ್ ಶಿವಕುಮಾರ್ ಅವರನ್ನ ಸಸ್ಪೆಂಡ್ ಮಾಡಲಾಗಿದೆ.
ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ.ಪ್ರಕಾಶ್ ಅವರು ಅಮಾನತ್ತಿನ ಆದೇಶ ಹೊರಡಿಸಿದ್ದಾರೆ.



ಜನವರಿ 7 ಭಾನುವಾರದಂದು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ನಾಡಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಪರಮೇಶ್ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತನ್ನ ಸಾವಿಗೆ ಉಪ ತಹಸೀಲ್ದಾರ್ ಶಿವಕುಮಾರ್ ನೀಡುತ್ತಿರುವ ಕಿರುಕುಳ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದು ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ಹಾಕಿ ವಿಷ ಸೇವಿಸಿದ್ದರು. ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಪರಮೇಶ್ ಸಾವನ್ನಪ್ಪಿದ್ದರು. ಇಂದು ಶವಾಗಾರಕ್ಕೆ ನಂಜನಗೂಡು ಶಾಸಕ ದರ್ಶನ್ ಧ್ರವನಾರಾಯಣ್ ಹಾಗೂ ಜಿಲ್ಲಾಧಿಕಾರಿ ಡಾ.ರಾಜೇಂದ್ರ ರವರು ಭೇಟಿ ನೀಡಿದ್ದರು. ಈ ವೇಳೆ ಉಪತಹಸೀಲ್ದಾರ್ ಮೇಲೆ ಕ್ರಮ ಕೈಗೊಳ್ಳುವಂತೆ ಮೃತರ ಕುಟುಂಬಸ್ಥರು ಒತ್ತಾಯಿಸಿದ್ದರು. ಅಲ್ಲದೆ ಶಾಸಕ ದರ್ಶನ್ ಧೃವನಾರಾಯಣ್ ಸಹ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನಲೆ ಕ್ರಮಕ್ಕೆ ಮುಂದಾದ ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ.ಪ್ರಕಾಶ್ ರವರು ಉಪತಹಸೀಲ್ದಾರ್ ಶಿವಕುಮಾರ್ ಅವರನ್ನ ಅಮಾನತ್ತು ಪಡಿಸಿ ಆದೇಶ ಪ್ರಕಟಿಸಿದ್ದಾರೆ.














