ಇತ್ತೀಚಿನ ಸುದ್ದಿ
ಮೈಸೂರಿನ ಕೆ.ಆರ್.ನಗರದಲ್ಲಿ ರೈಲ್ವೆ ರಕ್ಷಣಾ ಪಡೆ ತರಬೇತಿ ಕೇಂದ್ರ ಸ್ಥಾಪನೆ: ರೈಲ್ವೆ ಸಚಿವರ ಒಪ್ಪಿಗೆ
07/01/2025, 21:51
*ಹೆಚ್.ಡಿ.ಕುಮಾರಸ್ವಾಮಿ ಅವರ ಮನವಿಗೆ ಅಸ್ತು ಎಂದ ರೇಲ್ವೆ ಸಚಿವ ಅಶ್ವಿನಿ ವೈಷ್ಣವ*
*ರಾಮನಗರ - ಚನ್ನಪಟ್ಟಣ ಲೆವೆಲ್ ಕ್ರಾಸಿಂಗ್ ನಲ್ಲಿ ಮೇಲು ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ*
*ಸಚಿವರ ಹತ್ತು ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರೇಲ್ವೆ ಸಚಿವರು*
ನವದೆಹಲಿ(reporterkarnataka.com): ಮೈಸೂರಿನ ಕೆ.ಆರ್.ನಗರದಲ್ಲಿ ರೈಲ್ವೆ ರಕ್ಷಣಾ ಪಡೆಯ ತರಬೇತಿ ಕೇಂದ್ರ (RPF) ಆರಂಭಿಸುವುದಾಗಿ ಕೇಂದ್ರ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ ಕುಮಾರಸ್ವಾಮಿ ಅವರ ಮನವಿಗೆ ತತ್ ಕ್ಷಣವೇ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಅವರು, ಇದು ಅತ್ಯಂತ ಮಹತ್ವದ ಪ್ರಸ್ತಾವನೆ. ಈ ಬಗ್ಗೆ ಖುದ್ದು ತಾವೇ ಗಮನ ಹರಿಸುವುದಾಗಿ ತಿಳಿಸಿದರು.
ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ರೈಲ್ವೆ ರಕ್ಷಣಾ ಪಡೆಯ ತರಬೇತಿ ಶಾಲೆ ತೆರೆಯುವಂತೆ ರೇಲ್ವೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು ಕುಮಾರಸ್ವಾಮಿ ಅವರು, ರೈಲ್ವೆ ಸುರಕ್ಷತೆಗೆ ಮೈಸೂರು ಭಾಗದಲ್ಲಿ ಹೆಚ್ಚು ಆದ್ಯತೆ ಕೊಡಬೇಕಿದೆ ಹಾಗೂ ಈ ಭಾಗದಲ್ಲಿ ಪ್ರಯಾಣಿಕರ ದಟ್ಟಿಣಿಯು ಹೆಚ್ಚಾಗಿದ್ದು, ಒಟ್ಟಾರೆ ರೇಲ್ವೆ ಸುರಕ್ಷತೆಯು ಮಹತ್ವದ ಅಂಶವಾಗಿದೆ ಎಂದು ಕುಮಾರಸ್ವಾಮಿ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿಕೊಟ್ಟರು. ಈ ಬಗ್ಗೆ ತಕ್ಷಣವೇ ಗಮನ ಹರಿಸುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿದರು.
ದೇವೇಗೌಡರು ಪ್ರಧಾನಿಯಾಗಿದ್ದಾಗ ಕೆ.ಆರ್.ನಗರದಲ್ಲಿದ್ದ ಹಳೆಯ ರೈಲು ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಹಳೆಯ ನಿಲ್ದಾಣದ ಜಾಗ ಹಾಗೆಯೇ ಖಾಲಿ ಉಳಿದಿದ್ದು, ಭೂಸ್ವಾಧೀನದ ಸಮಸ್ಯೆ ಇಲ್ಲ ಎಂದು ಅಶ್ವಿನಿ ವೈಷ್ಣವ ಅವರಿಗೆ ಸಚಿವರು ಮನವರಿಕೆ ಮಾಡಿಕೊಟ್ಟರು.
ರೈಲ್ವೆ ರಕ್ಷಣಾ ಪಡೆಯ ತರಬೇತಿ ಶಾಲೆ ಬಂದರೆ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗುತ್ತದೆ. ಸ್ಥಳೀಯ ಯುವಕರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ದುಡಿಮೆಗೆ ಅವಕಾಶ ಲಭ್ಯವಾಗುತ್ತದೆ. ಮೈಸೂರು ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಸಚಿವರು ಹೇಳಿದರು.
ಇದಲ್ಲದೆ; ರಾಜ್ಯದಲ್ಲಿ ಬಾಕಿ ಇರುವ ವಿವಿಧ ರೈಲ್ವೆ ಯೋಜನೆಗಳನ್ನು ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸುವ ಬಗ್ಗೆ ಕುಮಾರಸ್ವಾಮಿ ಅವರು ರೈಲ್ವೆ ಸಚಿವರ ಜತೆ ಚರ್ಚಿಸಿದರು.
ರಾಮನಗರ – ಚನ್ನಪಟ್ಟಣ ನಡುವೆ ರೇಲ್ವೆ ಲೆವೆಲ್ ಕ್ರಾಸಿಂಗ್ -44/100-200 ಬಳಿ ರೇಲ್ವೆ ಮೇಲು ಸೇತುವೆ (ಫ್ಲೈ ಓವರ್) ನಿರ್ಮಾಣದ ಬಗ್ಗೆಯೂ ಕುಮಾರಸ್ವಾಮಿ ಅವರು ಸಲ್ಲಿಸಿದ ಮನವಿಗೆ ರೇಲ್ವೆ ಸಚಿವರು ಒಪ್ಪಿಗೆ ನೀಡಿದರು. ಈ ಬಗ್ಗೆಯೂ ಕೂಡಲೇ ಕ್ರಮ ವಹಿಸುವುದಾಗಿ ಅವರು ಭರವಸೆ ನೀಡಿದರು.
ಬೆಂಗಳೂರು – ಮಂಗಳೂರು ನಡುವಿನ ರೇಲ್ವೆ ಮಾರ್ಗದಲ್ಲಿ ಪ್ರಮುಖದ್ದಾಗಿರುವ ಸಕಲೇಶಪುರ ರೇಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಮನವಿಗೂ ಸ್ಪಂದಿಸಿದ ಸಚಿವರು, ಈ ಕಾರ್ಯವನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಿ ಅತ್ಯಾಧುನಿಕ ರೇಲ್ವೆ ನಿಲ್ದಾಣ ನಿರ್ಮಾಣ ಮಾಡುವುದಾಗಿ ಅಶ್ವಿನಿ ವೈಷ್ಣವ ಅವರು ಸಚಿವರಿಗೆ ತಿಳಿಸಿದರು.