ಇತ್ತೀಚಿನ ಸುದ್ದಿ
ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ
05/10/2025, 14:37

ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಸ್ತಬ್ಧಚಿತ್ರ ಪ್ರದರ್ಶನದ ಬೆಂಗಳೂರು ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಯ ರಾಜ ವೀರ ಮದಕರಿ ನಾಯಕ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ.
ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆ, ರಾಜಾ ಮದಕರಿ ನಾಯಕ ಆನೆಯ ಮದವನ್ನು ಅಡಗಿಸುತ್ತಿರುವ ದೃಶ್ಯ,ಒಂಟಿಕಂಬದ ಬಸವಣ್ಣ, ಕೋಟೆಯನ್ನು ರಕ್ಷಿಸುತ್ತಿರುವ ಸೈನಿಕರು, ಕಹಳೆ ಊದುತ್ತಿರುವ ಸೈನಿಕರು,ಆಡುಮಲ್ಲೇಶ್ವರ ಮೃಗಾಲಯ ಸೇರಿದಂತೆ ವನ್ಯಜೀವಿಗಳು ಇರುವಂತಹ ಸ್ಥಬ್ದ ಚಿತ್ರ ನೋಡುಗರನ್ನು ಮನಸೂರೆಗೊಳಿಸಿದ್ದು, ಹೀಗಾಗಿ ದಸರಾ ಮಹೋತ್ಸವದಲ್ಲಿ ಈ ಸ್ತಬ್ದಚಿತ್ರಕ್ಕೆ ಬೆಂಗಳೂರು ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದೆ. ಮೈಸೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಸ್ತಬ್ಧಚಿತ್ರ ಎರಡನೇ ಬಹುಮಾನ ಪಡೆದಿದೆ.
ಆರೋಗ್ಯಪೂರ್ಣ ಮನಸ್ಸು, ನಶಾಮುಕ್ತ ಕ್ಯಾಂಪಸ್ ಎಂಬ ಥೀಮ್‌ನೊಂದಿಗೆ ಗಮನಸೆಳೆದ ಸ್ತಬ್ಧಚಿತ್ರ ಕೇಂದ್ರ/ರಾಜ್ಯ ಹಾಗೂ ವಿವಿಧ ನಿಗಮಗಳ ವಿಭಾಗದಲ್ಲಿ ಎರಡನೇ ಬಹುಮಾನಕ್ಕೆ ಪಾತ್ರವಾಯಿತು. ಬೆಳಗಾವಿಯ ಶ್ರೀ ಮಹಾಕಾಳಿ ಮಾಯಕ್ಕಾದೇವಿ ದೇವಸ್ಥಾನ ಚಿಂಚಲಿ ಸ್ತಬ್ಧಚಿತ್ರಕ್ಕೆ ಮೂರನೇ ಸ್ಥಾನ ಲಭಿಸಿದೆ ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ.