ಇತ್ತೀಚಿನ ಸುದ್ದಿ
Mysore | ದಕ್ಷಿಣ ಕಾಶಿ ನಂಜನಗೂಡಿನ ಪಂಚ ಮಹಾ ರಥೋತ್ಸವ ದೊಡ್ಡ ಜಾತ್ರೆಗೆ ಸಕಲ ಸಿದ್ಧತೆ
13/02/2026, 09:49
*ಶಾಸಕ ದರ್ಶನ್, ಡಿಸಿ ಲಕ್ಷ್ಮಿಕಾಂತ ರೆಡ್ಡಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ*
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಮತ್ತು ಪ್ರಖ್ಯಾತಿಗಳಿಸಿರುವ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಮಾರ್ಚ್ 30 ರಂದು ನಡೆಯಲಿರುವ ಪಂಚ ಮಹಾ ರಥೋತ್ಸವ ದೊಡ್ಡ ಜಾತ್ರೆ ಎಂದೇ ಮನೆ ಮಾತಾಗಿರುವ ಜಾತ್ರ ಮಹೋತ್ಸವವನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಶಾಸಕ ದರ್ಶನ್ ಧ್ರುವನಾರಾಯಣ ಸೂಚನೆ ನೀಡಿದರು.
ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದ ಆವರಣದಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸಮ್ಮುಖದಲ್ಲಿ ನಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯನ್ನುದ್ಧೇಶಿಸಿ ಮಾತನಾಡಿದರು.
ಒಂದೂವರೆ ತಿಂಗಳು ಮುಂಚಿತವಾಗಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದ್ದು ಜಾತ್ರೆಯನ್ನು ವೈಭವಯುತವಾಗಿ ಆಚರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಜೊತೆಗೆ ಜಾತ್ರೆಯ ಕುರಿತು ರಾಜ್ಯವ್ಯಾಪಿ ಪ್ರಚಾರ ನೀಡಲು ಈಗಿನಿಂದಲೇ ಕ್ರಮ ವಹಿಸಬೇಕು. ಇನ್ನು ಕಪಿಲಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸದ್ಯ ತೀರಾ ಕಡಿಮೆಯಿರುವುದರಿಂದ ಯಂತ್ರಗಳನ್ನು ಬಳಸಿ ಜೊಂಡು ತೆರವುಗೊಳಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಜೊತೆಗೆ ಜಾತ್ರೆಯ ಸಮಯದಲ್ಲಿ ದೇಗುಲದ ಅಂಗಳ ಹಾಗೂ ರಥ ಬೀದಿಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವ ಸಲುವಾಗಿ ನಗರಸಭೆಯಿಂದ ಹೆಚ್ಚುವರಿಯಾಗಿ ಪೌರ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ ರಥೋತ್ಸವದ ಸಮಯದಲ್ಲಿ ರಥವನ್ನೆಳೆಯುವವರನ್ನು ಹೊರತುಪಡಿಸಿ ಸಾರ್ವಜನಿಕರು ರಥದ ಸಮೀಪಕ್ಕೆ ತೆರಳದಂತೆ ಮುನ್ನೆಚ್ಚರಿಕೆ ವಹಿಸಬೇಕು ಜೊತೆಗೆ ಜಾತ್ರಾ ಮಹೋತ್ಸವದ ಸಮಯದಲ್ಲಿ ಸಿಕ್ಕಸಿಕ್ಕವರೆಲ್ಲರೂ ಡ್ರೋನ್ಗಳನ್ನು ಹಾರಿಸುತ್ತಾರೆ ಭದ್ರತೆಯ ಸಲುವಾಗಿ ಡ್ರೋನ್ಗಳನ್ನು ಹಾರಿಸುವುದನ್ನು ನಿಯಂತ್ರಿಸಲು ಸೂಚನೆ ನೀಡಿದರು. ಜಾತ್ರೆಯ ಸಮಯದಲ್ಲಿ ಐದು ದಿನಗಳ ಕಾಲ ಕಬಿನಿ ಅಣೆಕಟ್ಟೆಯಿಂದ ನದಿಗೆ ನೀರು ಹರಿಸಲು ಕ್ರಮ ವಹಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸುವ ಸಲುವಾಗಿ ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಬೇಕು ಇನ್ನು ಜಾತ್ರಾ ಮಹೋತ್ಸವದ ನೋಡೆಲ್ ಅಧಿಕಾರಿಯನ್ನಾಗಿ ಅಪರ ಜಿಲ್ಲಾಧಿಕಾರಿ ಶಿವರಾಜು ಅವರನ್ನು ನಿಯೋಜಿಸಲಾಗುತ್ತಿದ್ದು ಜಾತ್ರೆಯ ಒಂದು ವಾರ ಮೊದಲೇ ನಂಜನಗೂಡಿಗೆ ಆಗಮಿಸಿ ಅವರು ಪ್ರತಿದಿನ ಜಾತ್ರಾ ಮಹೋತ್ಸವ ಆಚರಣೆ ಸಂಬಂಧ ಅಧಿಕಾರಿಗಳೊಡನೆ ಸಭೆಗಳನ್ನು ನಡೆಸಲಿದ್ದಾರೆ ಹೀಗಾಗಿ ಸಂಘಸಂಸ್ಥೆಗಳವರು ಹಾಗೂ ಸ್ಥಳೀಯ ನಾಗರೀಕರು ಜಾತ್ರಾ ಮಹೋತ್ಸವದ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭ ಕೆಲವು ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಮಾತನಾಡಿ ಜಾತ್ರೆಯ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಎಡಿಸಿ ಶಿವರಾಜು, ಎ ಸಿ ಆಶಪ್ಪ ಪೂಜಾರಿ, ತಹಶೀಲ್ದಾರ್ ಸ್ಮಿತಾ, ಡಿವೈಎಸ್ಪಿ ರಘು, ದೇವಸ್ಥಾನದ ಇಒ ಕೃಷ್ಣ, ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್, ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ವಿಚಾರವೇದಿಕೆ ಅಧ್ಯಕ್ಷ ಜಗದೀಶ್,ಪುರಸಭೆ ಮಾಜಿ ಉಪಾಧ್ಯಕ್ಷ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.












