8:47 AM Wednesday16 - April 2025
ಬ್ರೇಕಿಂಗ್ ನ್ಯೂಸ್
ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:…

ಇತ್ತೀಚಿನ ಸುದ್ದಿ

Mysore BJP | ಜನರ ತಲೆ ಬೋಳಿಸುತ್ತಿರೋ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಿರಿ: ಜನಾಕ್ರೋಶ ಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ

09/04/2025, 10:07

ಮೈಸೂರು(reporterkarnataka.com): ರಾಜ್ಯದಲ್ಲಿ ಜನನ-ಮರಣಕ್ಕೂ ಶುಲ್ಕ ಹೆಚ್ಚಿಸುತ್ತ ಜನರ ತಲೆ ಬೋಳಿಸುತ್ತಿರುವಂತಹ ಕಡುಭ್ರಷ್ಟ ಮತ್ತು ಕಳ್ಳ-ಮಳ್ಳರ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೆಸೆಯಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶಭರಿತರಾಗಿ ನುಡಿದರು.


ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಕರೆ ನೀಡಿರುವ “ಜನಾಕ್ರೋಶ ಯಾತ್ರೆʼಗೆ ಮೈಸೂರಿನಲ್ಲಿ ಚಾಲನೆ ನೀಡಿದ ಸಚಿವರು, “ಮಾತು ಮಾತಿಗೂ 16 ಬಾರಿ ಬಜೆಟ್‌ ಮಂಡಿಸಿದ್ದೇನೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 48 ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿ ಇತಿಹಾಸ ಸೃಷ್ಟಿಸಿದಂತಹ ಸಿಎಂ ಆಗಿದ್ದಾರೆʼ ಎಂದು ಚಾಟಿ ಬೀಸಿದರು.
ರಾಜ್ಯದಲ್ಲಿ ಕೇವಲ ₹5 ರೂ. ಇದ್ದ ಜನನ-ಮರಣ ಪ್ರಮಾಣ ಪತ್ರ ಶುಲ್ಕವನ್ನು ₹50 ರೂಪಾಯಿಗೆ ಹೆಚ್ಚಿಸಿ ಹುಟ್ಟು-ಸಾವಿನ ವಿಚಾರದಲ್ಲೂ ಜನರನ್ನು ಚಿಂತೆಗೀಡು ಮಾಡಿದೆ. ಹಾಲಿನ ದರ, ಆಲ್ಕೋಹಾಲಿನ ಬೆಲೆ, ಪೆಟ್ರೋಲ್‌-ಡಿಸೇಲ್‌ ಬೆಲೆ, ವಿದ್ಯುತ್‌ ದರ, ಆಸ್ತಿ ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕ, ನೀರಿನ ಕರ, ಕಸ ವಿಲೇವಾರಿ ಶುಲ್ಕ, ಬಸ್‌ ಪ್ರಯಾಣ ದರ, ಮೆಟ್ರೋ ದರ, ಪಹಣಿ ಶುಲ್ಕ, ಆಸ್ಪತ್ರೆ ಬಿಲ್‌…ಒಂದೇ ಎರಡೇ ಇವರ ದರ್ಬಾರಿನಲ್ಲಿ “ಕರ-ಭಾರʼ ಏರಿಕೆ ಕಂಡಿರುವುದು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

*₹70-75 ಸಾವಿರ ಕೋಟಿ ವಸೂಲಿ:* ರಾಜ್ಯದಲ್ಲಿ ಜನರಿಗೆ ಗ್ಯಾರೆಂಟಿಗಳ ಮಂಕುಬೂದಿ ಎರಚಿ ಅಧಿಕಾರಕ್ಕೆ ಬಂದ ಕಳ್ಳ-ಮಳ್ಳರ ಕಾಂಗ್ರೆಸ್‌ ಸರ್ಕಾರ, ಈಗ ಹೀಗೆ ತೆರಿಗೆ, ಶುಲ್ಕ, ಬೆಲೆ ಹೆಚ್ಚಳ ವಿಧಿಸಿ ಕನಿಷ್ಠ ₹70ರಿಂದ 75 ಸಾವಿರ ಕೋಟಿ ಹಣವನ್ನು ಜನರಿಂದಲೇ ಕಿತ್ತುಕೊಳ್ಳುತ್ತಿದೆ ಎಂದು ಸಚಿವ ಜೋಶಿ ಕಿಡಿ ಕಾರಿದರು.

ರಾಜ್ಯ ಸರ್ಕಾರ ಗ್ಯಾರೆಂಟಿಗಳಿಗೆ ₹50 ಸಾವಿರ ಕೋಟಿ ಖರ್ಚು ಮಾಡುತ್ತಿರುವುದಾಗಿ ಹೇಳಿದೆ. ಅದರೆ, ಇತ್ತ ಗ್ಯಾರೆಂಟಿ ಯೋಜನೆಗಳನ್ನೂ ಸರಿಯಾಗಿ ಕೊಡುತ್ತಿಲ್ಲ. ಬದಲಾಗಿ ಅದಕ್ಕೂ ದುಪ್ಪಟ್ಟು ಹಣವನ್ನು ನಾನಾ ಮೂಲಗಳಿಂದ ಜನರಿಂದಲೇ ಕಿತ್ತುಕೊಳ್ಳುತ್ತಿದೆ. ಇಂಥ ಸರ್ಕಾರವನ್ನು ಕಿತ್ತೊಗೆಯಲು ಜನರೇ ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.

ಮೂರ್ನಾಲ್ಕು ತಿಂಗಳಿಂದ ಗೃಹಲಕ್ಷ್ಮಿ ಹಣ ಭರಿಸಿಲ್ಲ. ಕೇಳಿದರೆ ಅದೇನು ಸಂಬಳವೇ? ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ ಅವರು. ಹಾಗಾದರೆ ಇಂಥ ಸುಳ್ಳು ಗ್ಯಾರೆಂಟಿಗಳನ್ನೇಕೆ ಘೋಷಿಸಿದರಿ? ಎಂದು ಪ್ರಶ್ನಿಸಿದ ಪ್ರಲ್ಹಾದ ಜೋಶಿ, ಗ್ಯಾರೆಂಟಿಗಳ ಘೋಷಣೆ ಮಾಡಿ ಜನರನ್ನು ಮೋಸಗೊಳಿಸಿದ್ದಾರೆ ಎಂದು ಆರೋಪಿಸಿದರು.

*ಪ್ರಿಯಾಂಕಾ ಮೆಚ್ಚಿಸುವ ಸಿಎಂ-ಡಿಸಿಎಂ:* ರಾಜ್ಯದಲ್ಲಿ ಯಾರಾದರೂ ಸತ್ತರೆ ₹5 ಲಕ್ಷ ಪರಿಹಾರ ಕೊಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಯನಾಡಿನಲ್ಲಿ ಆನೆ ಕಾಲ್ತುಳಿತದಿಂದ ಸತ್ತ ವ್ಯಕ್ತಿಗೆ ರಾಜ್ಯದಿಂದ ₹25 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿದರೆ ಅದು ನಮ್ಮ ರಾಜ್ಯಕ್ಕೆ ಸೇರಿದ ಆನೆ ಎಂಬ ಸಬೂಬು ನೀಡಿದ್ದಾರೆ. ಪ್ರಿಯಾಂಕಾ ವಾಧ್ರಾರನ್ನು ಮೆಚ್ಚಿಸಲು ಸಿಎಂ-ಡಿಸಿಎಂ ಈ ರೀತಿಯ ಕಳ್ಳ-ಮಳ್ಳ ಆಟವಾಡುತ್ತಿದ್ದಾರೆ ಎಂದು ಕುಟುಕಿದರು ಜೋಶಿ.

*ಅಕ್ಕಿಗೆ ಇನ್ನೂ ಆರ್ಡರ್‌ ಕೊಟ್ಟಿಲ್ಲ:* ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಕೇಜಿ ಅಕ್ಕಿ ಕೊಡುತ್ತೇವೆಂದು ಘೋಷಿಸಿದ್ದಷ್ಟೇ. ಇನ್ನೂ ಅದನ್ನೂ ಕೊಡುತ್ತಿಲ್ಲ. ಜನರ ಖಾತೆಗೆ ಹಣವನ್ನೂ ಹಾಕಿಲ್ಲ. ರಾಜ್ಯ ಸರ್ಕಾರ ಈವರೆಗೂ ಕೇಂದ್ರಕ್ಕೆ ಹೆಚ್ಚುವರಿ ಅಕ್ಕಿಗೆ ಆರ್ಡರ್‌ ಕೊಟ್ಟಿಲ್ಲ ಎಂದು ಆರೋಪಿಸಿದರು.

*ಹಣ ಹೊಡೆಯುತ್ತಿರುವ ಸರ್ಕಾರ:* ಈ ಕಾಂಗ್ರೆಸ್‌ ಸರ್ಕಾರ ಎದರಲ್ಲಿ ಬೇಕದರಲ್ಲಿ ಹಣ ಹೊಡೆಯುತ್ತಿದೆ. ಎಸ್ಸಿ-ಎಸ್ಟಿ ಅಭಿವೃದ್ಧಿ ಹಣವನ್ನೂ ಬಿಟ್ಟಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿಗೆ ಸಂಬಳ ಕೊಡಲೂ ಹಣವಿಲ್ಲ. ರಾಜ್ಯವನ್ನು ಆರ್ಥಿಕವಾಗಿ ಅಷ್ಟೊಂದು ದಿವಾಳಿ ಮಾಡಿದ್ದಾರೆ. ವಾಲ್ಮೀಕಿ, ಮೂಡಾ ನಾನಾ ಹಗರಣಗಳನ್ನು ನಡೆಸಿದೆ. ಕಾಮಗಾರಿಗಳಿಗೆ ಅನುದಾನ ಒದಗಿಸದೆ ರಾಜ್ಯದ ಅಭಿವೃದ್ಧಿಯನ್ನು ತೀವ್ರ ಕುಂಠಿತಗೊಳಿಸಿದೆ ಎಂದು ಹರಿ ಹಾಯ್ದರು.

*ಆತ್ಮಹತ್ಯೆ ಮಟ್ಟಕ್ಕೆ ಕಿರುಕುಳ ನೀಡೋ ಸರ್ಕಾರ:* ರಾಜ್ಯ ಕಾಂಗ್ರೆಸ್‌ ಸರ್ಕಾರ ಜನರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಕಿರುಕುಳ ನೀಡುತ್ತಿದೆ. ವಕ್ಫ್‌ ನೀಡಿದ ಕಿರುಕುಳದಲ್ಲಿ ಹಾವೇರಿ ಜಿಲ್ಲೆಯ ಯುವ ರೈತನೊಬ್ಬ ಆತ್ಮಹತ್ಯೆಗೆ ಒಳಗಾದ. ಈಗ ನೋಡಿದರೆ ವಾಟ್ಸಪ್‌ನಲ್ಲಿ ಪೋಸ್ಟ್‌ ಹಾಕಿದ ಕಾರಣಕ್ಕೆ ಕಾಂಗ್ರೆಸ್‌ ಶಾಸಕರು ನೀಡಿದ ಕಿರುಕುಳದಿಂದ ಅಮಾಯಕ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

*ಮೋಸಗಾರ ಕಾಂಗ್ರೆಸ್‌ ಎನ್ನೋದು ಮುಸಲ್ಮಾನರಿಗೂ ಗೊತ್ತಾಗಿದೆ:* ಕಾಂಗ್ರೆಸ್‌ ಪಕ್ಷ ಬರೀ ಸುಳ್ಳು ಹೇಳುವ ಮೋಸಗಾರ ಪಕ್ಷ ಎನ್ನುವುದು ಈಗ ಮುಸಲ್ಮಾನರಿಗೂ ಅರಿವಾಗಿದೆ. ಕೇಂದ್ರ ಸರ್ಕಾರ ತ್ರಿವಳಿ ತಲಾಖ್‌ ತೆಗೆದಾಗ ಬೆಂಕಿ ಹತ್ತುತ್ತದೆ ಎಂದರು ಕಾಂಗ್ರೆಸ್‌ ನಾಯಕರು. ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್‌ ೩೭೦ ಕಿತ್ತೊಗೆದರೆ ರಕ್ತದ ಓಕುಳಿ ಹರಿಯುತ್ತದೆ ಎಂದರು. ಈಗ ವಕ್ಫ್‌ ಮಸೂದೆ ತಿದ್ದುಪಡಿ ಮಾಡಿದ್ದಕ್ಕೆ ಮುಸಲ್ಮಾನರ ಆಸ್ತಿ ಮೆಲೆ ಕಣ್ಣಿಟ್ಟಿದೆ ಎಂಬೆಲ್ಲ ಹಸಿ ಹಸಿ ಸುಳ್ಳು ಹೇಳುತ್ತಲೇ ಮುಸ್ಲಿಂರನ್ನು ಮೋಸಗೊಳಿಸುತ್ತಿದ್ದಾರೆ. ಎದೆಲ್ಲ ಅಲ್ಪಸಂಖ್ಯಾತರಿಗೂ ಅರ್ಥವಾಗುತ್ತಿದೆ ಎಂದು ಜೋಶಿ ಹೇಳಿದರು.

*ಮೋದಿ ನೇತೃತ್ವದಲ್ಲಿ ಮುಸ್ಲಿಂರು ಹಾಯಾಗಿದ್ದಾರೆ:* ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ದೇಶದೆಲ್ಲೆಡೆ ಮುಸಲ್ಮಾನರು ಹಾಯಾಗಿದ್ದಾರೆ. ಎಲ್ಲೂ ಯಾರನ್ನೂ ನಾವು ಒಕ್ಕಲೆಬ್ಬಿಸಿಲ್ಲ. ಆರ್ಟಿಕಲ್‌ ೩೭೦ ತೆಗೆದುಹಾಕಿದ ಜಮ್ಮುಕಾಶ್ಮೀರದಲ್ಲೂ ಮುಸ್ಲಿಂರು ಈಗ ಶಾಂತಿ-ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಸುಖ-ಸಂತೋಷದಿಂದ ಇದ್ದಾರೆ. ಕಾಂಗ್ರೆಸ್‌ನವರಿಗೆ ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಪ್ರಲ್ಹಾದ ಜೋಶಿ ತಿರುಗೇಟು ನೀಡಿದರು.

ವಕ್ಫ್‌ ವಿಚಾರದಲ್ಲಿ ಕಾಂಗ್ರೆಸ್‌, ಮುಸಲ್ಮಾನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ವಕ್ಫ್‌ ತಿದ್ದುಪಡಿ ಮಸೂದೆ ಜಾರಿಯಿಂದ ಯಾವುದೇ ದರ್ಗಾ, ಮಸೀದಿಗಳಿಗೂ ಧಕ್ಕೆ ತರುವುದಿಲ್ಲ. ಬದಲಾಗಿ ಸೆಕ್ಷನ್‌ ೪೦ ರದ್ದುಪಡಿಸಿದ್ದೇವೆ. ವಕ್ಫ್‌ ಆಸ್ತಿ ಕಬಳಿಕೆಯನ್ನು ತಡೆದಿದ್ದೇವೆ. ಬಡ ಮುಸಲ್ಮಾನರಿಗೂ ಸೌಲಭ್ಯ ಕಲ್ಪಿಸಬೇಕಿತ್ತು ಮತ್ತು ವಕ್ಫ್‌ ಆಡಳಿತದಲ್ಲಿ ಪಾರದರ್ಶಕತೆ ತರಬೇಕಿತ್ತು. ಇದಕ್ಕಾಗಿ ಈ ಐತಿಹಾಸಿಕ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.

*ತಾತ-ಮುತ್ತಾತ ಬಂದರೂ ಅನುಷ್ಠಾನಕ್ಕೆ ತರಬೇಕು:* ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಜಾರಿಗೊಳಿಸಿದರೂ ಕಾಂಗ್ರೆಸ್‌ನವರು ಅನುಷ್ಠಾನಕ್ಕೆ ತರುವುದಿಲ್ಲ ಎನ್ನುತ್ತಿದ್ದಾರೆ. ಆದರೆ, ಅಧಿಕಾರದಲ್ಲಿ ಕಾಂಗ್ರೆಸ್ಸಿಗರ ತಾತ-ಮುತ್ತಾತಂದೀರು ಬಂದರೂ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಅನುಷ್ಠಾನಗೊಳಿಸಲೇಬೇಕಾಗುತ್ತದೆ ಎಂದು ಸಚಿವ ಜೋಶಿ ಕಾಂಗ್ರೆಸ್‌ ನಾಯಕರಿಗೆ ತಿವಿದರು.
ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಸಚಿವರಾದ ಶ್ರೀರಾಮುಲು, ಸಿಟಿ ರವಿ, ಸಂಸದ ಯದುವೀರ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕರು, ಪರಿಷತ್‌ ಸದಸ್ಯರು, ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು