ಇತ್ತೀಚಿನ ಸುದ್ದಿ
ಮುಂಗಾರು ಪ್ರವಾಹ ಎದುರಿಸಲು ಸಜ್ಜು: ಮಳೆಗಾಲಕ್ಕೆ ಮುನ್ನವೇ ನದಿ ತೀರದ ಕುಟುಂಬಗಳಿಗೆ ನೋಟಿಸ್!
26/05/2022, 10:44
ಮಡಿಕೇರಿ(reporterkarnataka.com): ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಈ ಬಾರಿ ಕೊಡಗು ಜಿಲ್ಲಾಡಳಿತ ತಕ್ಕ ಮಟ್ಟಿಗೆ ಎಚ್ಚೆತ್ತುಕೊಂಡ ಹಾಗೆ ಕಾಣಿಸುತ್ತಿದೆ. ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಸಮರ್ಥವಾಗಿ ಎದುರಿಸಲು ಸಜ್ಜಾಗುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ನಿರ್ದೇಶನ ನೀಡಿದರು.
ಮಡಿಕೇರಿ ತಾಲೂಕಿನ ಭಾಗಮಂಡಲ, ನಾಪೋಕ್ಲು ಮತ್ತು ಬೇಂಗೂರು ಗ್ರಾಪಂ ಗಳಿಗೆ ಭೇಟಿ ನೀಡಿದ ಅವರು, ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಜನಸಾಮಾನ್ಯರ ನೆರವಿಗೆ ಬರಲು ಸಜ್ಜಾಗಬೇಕು ಮತ್ತು ಮಳೆಗಾಲ ಆರಂಭಕ್ಕೂ ಮೊದಲು ನದಿ ಸಮೀಪದ ಕುಟುಂಬಗಳಿಗೆ ನಿಯಮಾನುಸಾರ ಜಂಟಿ ನೋಟೀಸ್ ನೀಡಬೇಕು ಎಂದು ತಿಳಿಸಿದರು.
ಭಾಗಮಂಡಲ ಗ್ರಾಪಂ ವ್ಯಾಪ್ತಿಯಲ್ಲಿರುವ ಕಾಶಿ ಮಠ ಮತ್ತು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿನ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಸಿಇಒ ಪರಿಶೀಲನೆ ನಡೆಸಿದರು.
ಪ್ರವಾಹ ಸಂದರ್ಭ ಕಾಳಜಿ ಕೇಂದ್ರದಲ್ಲಿ ಎಷ್ಟು ಜನರಿಗೆ ವಸತಿ ಕಲ್ಪಿಸಲು ಸಾಧ್ಯವಿದೆ ಎಂಬ ಅಂಶಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಕಾಳಜಿ ಕೇಂದ್ರವನ್ನು ಸುಸ್ಥಿತಿಯಲ್ಲಿಡುವಂತೆ ಹಾಗೂ ಅಗತ್ಯ ವಸ್ತುಗಳನ್ನು ಮುಂಚಿತವಾಗಿಯೇ ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದರು.
ಬಳಿಕ ನಾಪೋಕ್ಲು ಬೇತು ಸಮೀಪದ ಚೆರಿಯಪರಂಬು ನದಿ ಪಾತ್ರದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಳೆಗಾಲ ಆರಂಭಕ್ಕೂ ಮುನ್ನ ನದಿ ಸಮೀಪದ ಕುಟುಂಬಗಳಿಗೆ ನಿಯಮಾನುಸಾರ ಜಂಟಿ ನೋಟೀಸ್ ನೀಡುವಂತೆ ತಿಳಿಸಿದರು. ಜೊತೆಗೆ ನದಿ ಪಾತ್ರದಲ್ಲಿನ ಕುಟುಂಬದ ವಿವರಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರಿಂದ ಪಡೆದರು. ಅಪಾಯ ಸಂದರ್ಭದಲ್ಲಿ ತೊಂದರೆಗೀಡಾದವರಿಗೆ ಸೂಕ್ತ ಸಹಕಾರ ನೀಡುವಂತೆ ತಿಳಿಸಿದರು.
ಬಳಿಕ ನಾಪೋಕ್ಲು ಗ್ರಾಪಂ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಶಾಲೆಯ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಜೊತೆಗೆ ತುರ್ತು ಸಂದರ್ಭದಲ್ಲಿ ಪ್ರವಾಹ ಪೀಡಿತರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಕಾಳಜಿ ಕೇಂದ್ರಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಿಇಒ ತಿಳಿಸಿದರು.
ಬೇಂಗೂರು ಪಂಚಾಯತ್ ವ್ಯಾಪ್ತಿಯ ಪ್ರವಾಹ ಉಂಟಾಗಬಹುದಾದ ಕೂಡಕಂಡಿ ಪರಂಬು ಸ್ಥಳಕ್ಕೂ ಭೇಟಿ ನೀಡಿದರು. ಪ್ರವಾಹ ಸಂದರ್ಭ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ಬೋಟ್‍ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಸಲಹೆ ನೀಡಿದರು.
ಮಡಿಕೇರಿ ತಾಪಂ ಕಾರ್ಯನಿರ್ವಹಣಾಧಿಕಾರಿ ಶೇಖರ್, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಚೋಂದಕ್ಕಿ, ನಂದಾ ಮತ್ತಿತರರು ಉಪಸ್ಥಿತರಿದ್ದರು.