ಇತ್ತೀಚಿನ ಸುದ್ದಿ
ಮುಂದಿನ 5 ವರ್ಷಗಳಲ್ಲಿ 500ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆ ಆರಂಭ: ಎಂಆರ್ ಪಿಎಲ್ ಎಂಡಿ
14/01/2023, 11:20

ಮಂಗಳೂರು(reporterkarnataka.com): ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡ, ಆಂಧ್ರಪ್ರದೇಶದಲ್ಲಿ 500 ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳು ಕಾರ್ಯಾರಂಭ ಮಾಡಲಿವೆ.
ಎಂದು ಎಂಆರ್ ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ ಹೇಳಿದರು.
ಎಂಆರ್ ಪಿಎಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದಲ್ಲಿ ಮಾತನಾಡಿದ ಅವರು, ಸದ್ಯ ಕರ್ನಾಟಕ ಹಾಗೂ ಕೇರಳದಲ್ಲಿ 40 ಚಿಲ್ಲರೆ ಮಾರಾಟ ಮಳಿಗೆ ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂದರು.
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್ ಪಿಎಲ್) ವಿಶೇಷವಾಗಿ ಮಾಲಿನ್ಯ ಹಾಳಾಗದಂತೆ ನಿರ್ವಹಣೆ ಮಾಡುತ್ತಿದ್ದು, ಪರಿಸರ ಉಳಿಸುವ ಜತೆಗೆ ಸುತ್ತಲಿನ ಹವಾಮಾನಕ್ಕೆ ಯಾವುದೇ ವೈಪರೀತ್ಯ ಉಂಟಾಗದ ರೀತಿ ಕಾಳಜಿ ಹೊಂದಿದೆ. ಇದಕ್ಕಾಗಿ ತಂಡವಾಗಿ ಕೆಲಸ ಮಾಡಲಾಗುತ್ತಿದೆ ಎಂದು ನುಡಿದರು.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಎರಡನೇ ಹಂತದ ಎಥೆನಾಲ್ ಸ್ಥಾವರಕ್ಕೆ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯ ಅಗತ್ಯವಿದ್ದು, ಇದಕ್ಕಾಗಿ ಕಾಯುತ್ತಿದ್ದೇವೆ. 1,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಯೋಜನೆಗಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, 2025 ರಲ್ಲಿ ಎಥಿನಾಲ್ ಸ್ಥಾವರವು ಶುರುವಾಗಲಿದೆ ಎಂದರು.
ದಿನಕ್ಕೆ 60,000 ಲೀಟರ್ ಎಥೆನಾಲ್ ಉತ್ಪಾದಿಸುವ ಗುರಿ ಹೊಂದಲಾಗಿದ್ದ, ಜೋಳ, ಹತ್ತಿ ಕಾಂಡ ಮತ್ತು ಮುಂತಾದ ಕೃಷಿ ತ್ಯಾಜ್ಯಗಳನ್ನು ಬಳಸಲಾಗುತ್ತದೆ. ಜೈವಿಕ ಇಂಧನಗಳ ಪ್ರಚಾರದ ವೇಗ ತೀವ್ರಗೊಳಿಸುವ ಜತೆಗೆ ಹಸಿರು ವಾತಾವರಣ ನಿರ್ಮಾಣ ಮಾಡಿ, ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಜತೆಗೆ ರೈತರಿಗೆ ಆದಾಯವನ್ನೂ ನೀಡುತ್ತದೆ ಎಂದರು.
ನಾಲ್ಕನೇ ಹಂತದ ಎಲೆಕ್ಟ್ರಿಕ್ ವಾಹನಗಳು ಮತ್ತು ನೈಸರ್ಗಿಕ ಅನಿಲದಿಂದ ನಡೆಸಲ್ಪಡುವ ವಾಹನಗಳಿಗೆ ಸರ್ಕಾರದ ಉತ್ತೇಜನದೊಂದಿಗೆ, ನಾಲ್ಕನೇ ಹಂತದ ವಿಸ್ತರಣೆಯು ವಾಸ್ತವವಾದಾಗ ಇಂಧನಕ್ಕಿಂತ ಪೆಟ್ರೋಕೆಮಿಕಲ್‌ಗಳ ಮೇಲೆ ಹೆಚ್ಚು ಗಮನಹರಿಸುವ ಬಗ್ಗೆ ಎಂಆರ್ ಪಿಎಲ್ ಯೋಚಿಸಲಿದೆ. ರಿಫೈನರಿ ವಿಸ್ತರಣೆಯ ನಾಲ್ಕನೇ ಹಂತಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ. ಪೆರ್ಮುದೆ ಮತ್ತು ಕುಥೆತ್ತೂರು ಪ್ರದೇಶಗಳಲ್ಲಿ ಶುದ್ಧೀಕರಣಕ್ಕಾಗಿ ಸುಮಾರು 850 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು. ಮೂಳೂರು-ಕಂದಾವರದಲ್ಲಿ ಪುನರ್ವಸತಿ ಕಾಲೋನಿ ಅಭಿವೃದ್ಧಿ ಪಡಿಸಲು 120 ಎಕರೆ ಭೂಮಿ ಪಡೆಯಲಾಗುವುದು ಎಂದರು.
ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಎಂಆರ್ಪಿಎಲ್ ಸಿಎಸ್ಆರ್ ಅಡಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ನಮಗೆ ಬೇಕಾದ ವಸ್ತುಗಳನ್ನು ನಾವೇ ಉತ್ಪಾದನೆ ಮಾಡದೇ ಇದ್ದಲ್ಲಿ ಭವಿಷ್ಯದಲ್ಲಿ ನಾವು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಇದರ ಜತೆಗೆ ಕಚ್ಚಾ ವಸ್ತುಗಳ ಉತ್ಪಾದನೆಗೆ ಹೆಚ್ಚು ಆದ್ಯತೆ ಸಿಗಬೇಕು. ಪರಿಸರವನ್ನು ಹಾಳು ಮಾಡದ ರೀತಿಯಲ್ಲಿ ಎಂಆರ್ ಪಿಎಲ್ ಸೇವೆ ನೀಡುತ್ತಿದೆ ಎಂದು ಹೇಳಿದರು.
ಸಂವಾದಲ್ಲಿ ಎಂಆರ್ಪಿಎಲ್ ಹಿರಿಯ ಅಧಿಕಾರಿಗಳು ಇದ್ದರು