ಇತ್ತೀಚಿನ ಸುದ್ದಿ
ಮುಜರಾಯಿ ಸಚಿವರೇ, ಅಡುಗೆ ಎಣ್ಣೆ ಬಿಡಿ, ದೇವರಿಗೆ ಹಚ್ಚುವ ದೀಪದೆಣ್ಣೆ ಬೆಲೆ ಆದ್ರೂ ಇಳಿಸಿ ಸ್ವಾಮಿ!!
19/06/2021, 12:34
ಮಂಗಳೂರು(reporterkarnataka news): ಒಂದು ಕಡೆ ಕೊರೊನಾ ಲಾಕ್ ಡೌನ್ ಕಾಟವಾದರೆ ಇನ್ನೊಂದು ಕಡೆ ಬೆಲೆಯೇರಿಕೆಯ ಕಾಟ. ಬಡವರು ಮತ್ತು ಮಧ್ಯಮ ವರ್ಗದವರು ಯಾವುದೇ ವಸ್ತುವಿಗೆ ಕೈ ಹಾಕುವಂತಿಲ್ಲ. ವ್ಯಾಪಾರಿಗಳು ಹೇಳಿದ್ದೇ ರೇಟ್. ಇದರೊಂದಿಗೆ ದೇವರ ಮೇಲೆ ಅತೀ ಭಕ್ತಿ, ವಿಶ್ವಾಸ ಇಟ್ಟುಕೊಂಡು ಬದುಕು ನಡೆಸುತ್ತಿರುವ ಬಡ ಮತ್ತು ಮಧ್ಯಮ ವರ್ಗದವರು ದೇವರಿಗೆ ಒಂದು ಹೊತ್ತು ದೀಪ ಹಚ್ಚುವುದು ಕೂಡ ಕಷ್ಟವಾಗಿದೆ. ಯಾಕೆಂದರೆ ದೀಪದ ಎಣ್ಣೆಯ ಬೆಲೆ ವಿಪರೀತ ಏರಿಕೆಯಾಗಿದೆ.
ಲೀಟರಿಗೆ 100 ರೂಪಾಯಿಗೆ ಸಿಗುತ್ತಿದ್ದ ದೀಪದೆಣ್ಣೆಯ ಬೆಲೆ 250 ರೂ. ಆಗಿದೆ. 10 ರೂ.ಗೆ ಸಿಗುತ್ತಿದ್ದ 100 ಮಿಲಿ ಲೀಟರ್ ಸಣ್ಣ ಪ್ಯಾಕ್ ಗೆ 25 ರೂ. ಆಗಿದೆ. ಕರಾವಳಿಯ ತುಳುನಾಡಿನವರು ಮಾತ್ರವಲ್ಲದೇ ಇಡೀ ರಾಜ್ಯದಲ್ಲೇ ಬಡ ಹಾಗೂ ಮಧ್ಯಮ ವರ್ಗದ ಜನತೆ ದೇವರಿಗೆ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ (ಶ್ರೀಮಂತರು ಹಚ್ಚಿದರೂ ಅವರಿಗೆ ಕಷ್ಟವಾಗಲಾರದು). ಅದಲ್ಲದೆ ಹೆಚ್ಚಿನ ಮನೆಯಲ್ಲಿ ಮುಸ್ಸಂಜೆ ವೇಳೆಯಲ್ಲಿ ತುಳಸಿಗೆ ದೀಪ ಹಚ್ಚಿ ಇಷ್ಟಾರ್ಥಗಳನ್ನು ಸಿದ್ಧಿಗಾಗಿ ಬೇಡುವ ಪರಿಪಾಠವಿದೆ. ಸ್ವಾಮಿ, ಮುಜರಾಯಿ ಸಚಿವರೇ 25 ರೂ. ಕೊಟ್ಟು ಕೊಂಡು ಹೋದ ಸಣ್ಣ ಪ್ಯಾಕ್ ಎಷ್ಟು ದಿನ ಬರುತ್ತೇ ಹೇಳಿ ?.
ಪ್ರತಿ ಚುನಾವಣೆಯ ಸಂದರ್ಭದಲ್ಲಿ ಹಿಂದುತ್ವವನ್ನು ಬೋಧಿಸಿ, ರಾಮ, ಕೃಷ್ಣ ದೇವರನ್ನು ತೋರಿಸಿ ಓಟು ಪಡೆದಿದ್ದೀರಿ. ಇದೀಗ ದೇವರಿಗೆ ದೀಪ ಹಚ್ಚದಾಗೆ ಮಾಡಿದರೆ ಹೇಗೆ ಸ್ವಾಮೀ?
ಸೋಮವಾರ ಶಿವನಿಗೆ, ಮಂಗಳವಾರ ಮತ್ತು ಶುಕ್ರವಾರ ದೇವಿಗೆ, ಶನಿವಾರ ಅಂಜನೇಯನಿಗೆ ದೀಪದೆಣ್ಣೆ ಕೊಡುವವರು ಏನು ಮಾಡಲಿ
ಹೇಳಿ? ಅದಲ್ಲದೆ ತುಳುನಾಡಿನ ದೈವಗಳಿಗೆ ಎಣ್ಣೆ ಹೂವು ಕೊಡುವ ಸಂಪ್ರದಾಯವನ್ನು ಈ ರೇಟಿನಲ್ಲಿ ಜನಸಾಮಾನ್ಯರು ಮುಂದುವರಿಸಿಕೊಂಡು ಹೋಗಲು ಸಾಧ್ಯವೇ ಹೇಳಿ ಮಂತ್ರಿಜೀ?
ಪೆಟ್ರೋಲ್ ಲೀಟರ್ ಗೆ 500. ರೂ. ಆದರೂ ನಾವು ಪೆಟ್ರೋಲ್ ಹಾಕಿಸುತ್ತೇವೆ ಎಂದು ಹೇಳಿಕೊಳ್ಳುವವರಿದ್ದಾರೆ. ಹಾಗೆ ದೀಪದೆಣ್ಣೆ ಲೀಟರಿಗೆ ಸಾವಿರ ರೂ. ಆದರೂ ದೀಪ ಹಚ್ಚುತ್ತೇವೆ ಎಂದು ಹೇಳಿಕೊಳ್ಳುವವರೂ ಇರಬಹುದು. ‘ಉಳ್ಳವರು ಶಿವಾಲಯ’ ಮಾಡುತ್ತಾರೆ. ಅದರೆ ಬಡವ ಏನು ಮಾಡಲಾಗುತ್ತದೆ ಹೇಳಿ ? 500 ರೂ.ಗೆ ಪೆಟ್ರೋಲ್ ಹಾಕುವವರಿಗೆ ಪ್ರತ್ಯೇಕ ಪೆಟ್ರೋಲ್ ಪಂಪ್ ಮಾಡಿಸಿ, ಹಾಗೆ ದೀಪದೆಣ್ಣೆ ಲೀಟರಿಗೆ 100 ರೂಪಾಯಿಯಲ್ಲಿ ಬಡವರಿಗೆ ಸಿಗುವ ಹಾಗೆ ರೇಶನ್ ನಲ್ಲಿ ವ್ಯವಸ್ಥೆ ಮಾಡಿ. ಉಳ್ಳವರು ಸಾವಿರ ಕೊಟ್ಟು ದೀಪ ಹಚ್ಚಿಯಾರು ಬಿಡಿ.