ಇತ್ತೀಚಿನ ಸುದ್ದಿ
ಮೂಡಿಗೆರೆ: ಮನೆ ಮೇಲೆ ಮರ ಬಿದ್ದು ಇಬ್ಬರು ಮಹಿಳೆಯರ ದಾರುಣ ಸಾವು; ಕಾಫಿನಾಡಿನಲ್ಲಿ ಮುಂದುವರಿದ ಮಳೆ ಅಬ್ಬರ
10/08/2022, 09:22
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಮೂಡಿಗೆರೆ ತಾಲೂಕಿನ ಬಾಳೂರು ಠಾಣಾ ವ್ಯಾಪ್ತಿಯ ಕೆ ತಲಗೂರು ಎಂಬಲ್ಲಿ ಮನೆ ಮೇಲೆ ಬೃಹತಾಕಾರದ ಮರ ಒಂದು ಬಿದ್ದು ಮನೆಯಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ರಾತ್ರಿ ಸುಮಾರು10.00 ಗಂಟೆಯ ಸಮಯದಲ್ಲಿ ಕೆ. ತಲಗೂರು ಗ್ರಾಮದ ಚಂದ್ರಮ್ಮ ಅವರ ಮನೆಯಲ್ಲಿ ಚಂದ್ರಮ್ಮ ಮತ್ತು ಸರಿತಾ ಹಾಗೂ ಸರಿತಾ ಅವರ ಮಕ್ಕಳಾದ ಸುನಿಲ್ ಹಾಗೂ ದೀಕ್ಷಿತ್ ಅವರು ಮಲಗಿದ್ದಾಗ ಮನೆಯ ಪಕ್ಕದಲ್ಲಿ ಇದ್ದ ಬೃಹದಾಕಾರದ ಮರ ಚಂದ್ರಮ್ಮ ಅವರ ಮನೆಯ ಮೇಲೆ ಬಿದ್ದು ಮನೆಯೊಳಗೆ ಮಲಗಿದ್ದ ಸರಿತಾ
ಅವರು ಸ್ಥಳದಲ್ಲಿ ಮೃತಪಟ್ಟಿದ್ದು, ಚಂದ್ರಮ್ಮ ರವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮದ್ಯೆ ಮೃತಪಟ್ಟಿದ್ದಾರೆ. ಮೃತರಾದ ಸರಿತಾ ಮತ್ತು ಚಂದ್ರಮ್ಮ ರವರು ಸಂಬಂಧಿಕರಾಗಿದ್ದು, ಅಕ್ಕಪಕ್ಕದ ಮನೆಯವರಾಗಿದ್ದಾರೆ.
ಕಳೆದ ಒಂದು ವಾರದಿಂದ ಮೂಡಿಗೆರೆ ಮತ್ತು ಕಳಸ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಮತ್ತು ಗಾಳಿ ಬೀಸುತ್ತಿದ್ದು ಗಾಳಿ ಮಳೆಗೆ ಮರ ಬಿದ್ದು ಈ ಅನಾಹುತ ಸಂಭವಿಸಿದೆ.