ಇತ್ತೀಚಿನ ಸುದ್ದಿ
ಮೂಡಿಗೆರೆ: ಮರ್ಕಲ್ ಎಸ್ಟೇಟ್‌ನಲ್ಲಿ ಜಾನುವಾರು ಹತ್ಯೆ: ಅಸ್ಸಾಂ ಮೂಲದ 6 ಮಂದಿ ಬಂಧನ
10/07/2025, 20:22

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಎಸ್ಟೇಟ್‌ನ ತೋಟದಲ್ಲಿ ಜಾನುವಾರು ಹತ್ಯೆ ಪ್ರಕರಣ ನಡೆದಿದ್ದು, ಅಸ್ಸಾಂ ಮೂಲದ 6 ಕೂಲಿ ಕಾರ್ಮಿಕರನ್ನು ಬಂಧಿಸಲಾಗಿದೆ.
ಹಸುವನ್ನು ಹತ್ಯೆ ಮಾಡಿ ಮಾಂಸ ಮಾಡಿ ಕೊಂಡಿರುವ ಆರೋಪದ ಮೇಲೆ ಅಸ್ಸಾಂ ರಾಜ್ಯದ ಅಜೀರ್ ಅಲೀ ಬಿನ್ ಅಲೀ ಹುಸೇನ್ (29), ಅಕ್ಬರ್ ಅಲಿ ಬಿನ್ ಅಕ್ಬರ್ ಅಲಿ (43),
ನಜ್ಮುಲ್ ಹಕ್ ಬಿನ್ ಅಬ್ಬಾಸ್ ಮನ್‌ಸೂರ್ (25), ಇಜಾಹುಲ್ ಹಕ್ ಬಿನ್ ಶೇರಮದ್ದಿನ (23), ಮೋಜೆರ್ ಅಲಿ ಬಿನ್ ಅಬ್ದುಲ್ ಲತೀಫ್ (31) ಹಾಗೂ ಮಂಜುಲ್ ಹಕ್ ಬಿನ್ ಅಬ್ಬಾಸ್ ಮನ್‌ಸೂರ್ (31) ಎಂಬವರನ್ನು ಬಂಧಿಸಲಾಗಿದೆ.
ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಪ್ರಕರಣದ ಹಿನ್ನೆಲೆ:* 2025ರ ಜುಲೈ 9ರ ಮಧ್ಯಾಹ್ನ 3:30ರಿಂದ ಸಂಜೆ 7:30ರ ವೇಳೆಗೆ ಮರ್ಕಲ್ ಎಸ್ಟೇಟ್‌ನೊಳಗೆ ಘಟನೆ ಸಂಭವಿಸಿದೆ. ಬಾಳೂರು ಠಾಣೆಯ ಪಿಎಸ್‌ಐ ದಿಲೀಪ್ ಕುಮಾರ್ ವಿ ಟಿ ಅವರು ಸ್ವಯಂ ಪಿರ್ಯಾದಿ ಆಗಿ, ತೋಟದೊಳಗೆ ಜಾನುವಾರು ಹತ್ಯೆ ನಡೆದಿರುವ ಬಗ್ಗೆ ಬಾಳೂರು ಠಾಣೆಯಲ್ಲಿ ರಾತ್ರಿ 9:50ಕ್ಕೆ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಜಾನುವಾರು ಹತ್ಯೆ ಮಾಡಿರುವ ಸ್ಥಿತಿ ಹಾಗೂ ಮಾಂಸದ ತುಂಡುಗಳು ಬಾಳೆ ಎಲೆಗಳ ಮೇಲೆ ಇರಿಸಿಕೊಂಡಿರುವುದು ಕಂಡು ಬಂದಿದೆ. ಜಾನುವಾರುವಿನ ಅಂಗಾಂಗಗಳನ್ನು ಮಣ್ಣುಡಿ ಹಾಕಲು ಗುಂಡಿ ತೋಡಲಾಗಿತ್ತು. ಸ್ಥಳದಲ್ಲಿ ಯಾರೂ ಕಂಡು ಬಂದಿಲ್ಲ.
*ಪತ್ತೆಯಾದ ಸಾಕ್ಷ್ಯಗಳು:* ಜಾನುವಾರುವಿನ ತಲೆ, ಕಾಲುಗಳು, ಪೂರ್ಣ ಚರ್ಮ, ಲಿವರ್ ಮತ್ತು ಇತರ ಅಂಗಾಂಗಗಳು ಪತ್ತೆಯಾಗಿದೆ.
ಅಂದಾಜು 25 ಕೆ.ಜಿ ಮಾಂಸ ಹಾಗೂ 20 ಕೆ.ಜಿ ಪಕ್ಕೆಲುಬು ಮಾಂಸವಿದೆ. ಮರದ ತುಂಡು ಮತ್ತು ಗುಂಡಿ ತೋಡಲು ಬಳಸಿದ ಗುದ್ದಲಿ ಜಪ್ತಿ ಮಾಡಲಾಗಿದೆ.
ಹತ್ಯೆ ಬಳಿಕ ಭಾಗಶಃ ಅಂಗಾಂಗಗಳನ್ನು ಗುಂಡಿಗೆ ಹಾಕಿ ಮಣ್ಣಿನಲ್ಲಿ ಮುಚ್ಚಲಾಗಿದೆ.
*ರೈಟರ್ ಅಭಿಲಾಷ್ ನೀಡಿದ ಮಾಹಿತಿ:*
ಎಸ್ಟೇಟ್ ರೈಟರ್ ಅಭಿಲಾಷ್ ಎಂಬವರು, “ನಮ್ಮ ತೋಟದಲ್ಲಿ ಸುಮಾರು 15 ಅಸ್ಸಾಂ ಮೂಲದ ಕಾರ್ಮಿಕರು ಮತ್ತು ಅವರ ಕುಟುಂಬವಿದೆ. ಅವರಲ್ಲಿ ಕೆಲವರು ಮದ್ಯಾಹ್ನ 3:30 ನಂತರ ತೋಟದೊಳಗೆ ಓಡಾಡುತ್ತಿರುವುದು ಕಂಡುಬಂದಿತ್ತು. ಸೌದೆಗಾಗಿ ಬಂದಿರಬಹುದು ಎಂದು ನಾನು ಗಮನಿಸಿಲ್ಲ, ದೂರದಿಂದ ನೋಡಿದ್ದುದು ಯಾರೋ ಎಂದು ಖಚಿತವಾಗಿ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.