ಇತ್ತೀಚಿನ ಸುದ್ದಿ
ಎಂಆರ್‍ಪಿಎಲ್ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಂಕ್ರಿಟೀಕರಣ: ಶಾಸಕ ಡಾ. ಭರತ್ ಶೆಟ್ಟಿ ಉದ್ಘಾಟನೆ
04/02/2025, 00:04
ಸುರತ್ಕಲ್(reporterkarnataka.com): ಸುರತ್ಕಲ್ ಎಂಆರ್‍ಪಿಎಲ್ ರಸ್ತೆಯ ರೈಲ್ವೆ ಮೇಲ್ಸೇತುವೆಯನ್ನು ಮಂಗಳೂರು ಮಹಾನಗರ ಪಾಲಿಕೆ ನಿಧಿ 78 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ಕಾಮಗಾರಿ ನಡೆಸು ಸುಸಜ್ಜಿತ ರಸ್ತೆಯನ್ನಾಗಿ ಪರಿವರ್ತಿಸಲಾಗಿದ್ದು ಸೋಮವಾರ ಶಾಸಕ ಡಾ.ಭರತ್ ಶೆಟ್ಟಿ ವೈ. ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ರೈಲ್ವೆ ಇಲಾಖೆಯ ಆಧೀನದಲ್ಲಿರುವ ಸೇತುವೆಯಾದರೂ ಜನರ ಹಿತದೃಷ್ಠಿಯಿಂದ ಎನ್‍ಒಸಿ ಪಡೆದು ಕಾಂಕ್ರಿಟ್ ಮಾಡಲಾಗಿದೆ.
ರೈಲ್ವೆ ಮೇಲ್ಸೇತುವೆಯನ್ನು ಚತುಷ್ಪಥ ಮಾಡುವ ಅಗತ್ಯವಿದ್ದು ಜಾಗ ಗುರುತಿಸಿ ಹೆಚ್ಚುವರಿ ಕಾಂಕ್ರಿಟ್ ಮಾಡಲಾಗಿದೆ. ಸಂಸದರಾದ ಬೃಜೇಶ್ ಚೌಟ ಹಾಗೂ ರೈಲ್ವೆ ಸಚಿವ ಸೋಮಣ್ಣ ಅವರಲ್ಲಿ ಪ್ರಸ್ತಾವನೆ ಇರಿಸಲಾಗಿದ್ದು ಭವಿಷ್ಯದಲ್ಲಿ ಅನುದಾನ ದೊರಕುವ ಭರವಸೆಯಿದೆ ಎಂದರು. ಹಂಪ್ಸ್ ಆಳವಡಿಸಿ ವೇಗ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ ಎಂದರು.
ರಸ್ತೆಯನ್ನು ಅವಧಿಗಿಂತ ಮುಂಚಿತವಾಗಿ ತ್ವರಿತವಾಗಿ ನಿರ್ಮಿಸಲು ಸಹಕರಿಸಿದ ಪಾಲಿಕೆ ಎಂಜಿನಿಯರ್ ಕಾರ್ತಿಕ್ ಶೆಟ್ಟಿ ,ಗುತ್ತಿಗೆದಾರರಾದ ಸುಧಾಕರ ಪೂಂಜಾ,ಮನಪಾ ಸದಸ್ಯರನ್ನು ಹಾಗೂ ಸುಮಾರು ಒಂದು ತಿಂಗಳ ಕಾಲ ಸಂಚಾರದಲ್ಲಿ ಸಹಕರಿಸಿದ ವಾಹನ ಚಾಲಕರು,ಸ್ಥಳೀಯರನ್ನು ಶಾಸಕರು ಶ್ಲಾಘಿಸಿದರು.
ಶಾಸಕರು ಹೊಸ ರಸ್ತೆಯಲ್ಲಿ ಆಟೋ ರಿಕ್ಷಾ ಸ್ವತಃ ಚಲಾಯಿಸಿ ಹೊಸ ರಸ್ತೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಮೇಯರ್ ಮನೋಜ್ ಕುಮಾರ್ ಮಾತನಾಡಿ ಶಾಸಕರ ನೆರವಿನೊಂದಿಗೆ ಇಲ್ಲಿನ ಸೇತುವೆ ಕಾಂಕ್ರಿಟ್ ಮಾಡಲಾಗಿದ್ದು ಮೂಲಸೌಕರ್ಯಗಳಿಗೆ ಒತ್ತು ನೀಡಲಾಗಿದೆ ಎಂದರು. ಉಪಮೇಯರ್ ಬಾನುಮತಿ, ಸ್ಥಳೀಯ ಮನಪಾ ಸದಸ್ಯರಾದ ಸರಿತಶಶಿಧರ್, ವರುಣ್ ಚೌಟ, ಲೋಕೇಶ್ ಬೊಳ್ಳಾಜೆ,ನಯನ ಆರ್.ಕೋಟ್ಯಾನ್, ಶ್ವೇತ ಎ, ಶೋಭಾ ರಾಜೇಶ್,ವೇದಾವತಿ,ಲಕ್ಷ್ಮೀಶೇಖರ್ ದೇವಾಡಿಗ, ಮನಪಾದ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಸಹಕಾರ ಭಾರತಿ ಪ್ರಕೋಷ್ಟದ ಅಶೋಕ್ ಶೆಟ್ಟಿ ತಡಂಬೈಲ್, ಬಿಜೆಪಿ ಮಂಡಲ ಪ್ರಮುಖರು, ಪದಾಧಿಕಾರಿಗಳು, ರಿಕ್ಷಾಚಾಲಕ ಮಾಲಕ ,ಕಾರು ಚಾಲಕ ಮಾಲಕ ಸಂಘದ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.