ಇತ್ತೀಚಿನ ಸುದ್ದಿ
ಎಂಆರ್ ಪಿಎಲ್ ನಲ್ಲಿ ನಿರ್ಲಕ್ಷ್ಯಕ್ಕೆ ಆದಿವಾಸಿ ವಲಸೆ ಕಾರ್ಮಿಕ ಬಲಿ ಆರೋಪ: ಸೂಕ್ತ ಪರಿಹಾರ, ಕಂಪೆನಿ ಮೇಲೆ ಕಠಿಣ ಕ್ರಮಕ್ಕೆ ಹೋರಾಟ ಸಮಿತಿ ಆಗ್ರಹ
29/05/2024, 16:36

ಸುರತ್ಕಲ್(reporterkarnataka.com): ಎಂಆರ್ ಪಿಎಲ್ ನ ಹೈಡ್ರೋಲಿಕ್ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಮಿಕನಾಗಿ ನಿಯೋಜನೆಗೊಂಡಿದ್ದ ಮಂಗಲ್ ಎಂಬ ಜಾರ್ಖಂಡ್ ಮೂಲದ ಆದಿವಾಸಿಯೊಬ್ಬ ಕರ್ತವ್ಯದ ಸಂದರ್ಭದಲ್ಲಿ ಅವಘಡದಲ್ಲಿ ಮೃತ ಪಟ್ಟಿದ್ದು, ಕಂಪೆನಿಯ ನಿರ್ಲಕ್ಷ್ಯ, ಸರಿಯಾದ ಜೀವರಕ್ಷಕ ವ್ಯವಸ್ಥೆಗಳಿಲ್ಲದೆ ಕೆಲಸಕ್ಕೆ ನಿಯೋಜಿಸಿರುವುದರಿಂದ ಈ ಅವಘಡ ಸಂಭವಿಸಿ ವಲಸೆ ಕಾರ್ಮಿಕ ಮೃತ ಪಟ್ಟಿರುವುದಾಗಿ ಮಾಹಿತಿಗಳಿದ್ದು, ಎಮ್ಆರ್ ಪಿಎಲ್ ಕಂಪೆನಿಯು ಮೃತ ಕಾರ್ಮಿಕನ ಕುಟುಂಬಕ್ಕೆ ಕನಿಷ್ಟ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು, ನಿರ್ಲಕ್ಷ್ಯದಿಂದ ಅವಘಡಕ್ಕೆ ಕಾರಣವಾಗಿರುವ ಕಂಪೆನಿಯ ವಿರುದ್ದ ರಾಜ್ಯ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾಗರಿಕ ಹೋರಾಟ ಸಮಿತಿ, ಸುರತ್ಕಲ್ ಅಗ್ರಹಿಸಿದೆ.
ಎಂಆರ್ ಪಿ ಎಲ್ ಗುತ್ತಿಗೆ ಕಾರ್ಮಿಕರನ್ನು, ಅದರಲ್ಲೂ ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ. ಶೆಡೌನ್ ಸಂದರ್ಭದಲ್ಲಿ ದುಡಿಯಲು ಬರುವ ವಲಸೆ ಕಾರ್ಮಿಕರನ್ನಂತೂ ಅಕ್ಷರಶಃ ಜೀತದಾಳುಗಳಂತೆ ಸಮಯ ಹಾಗೂ ಸುರಕ್ಷತೆಯ ಯಾವ ಕಾಳಜಿಯೂ ಇಲ್ಲದೆ ದುಡಿಸಿಕೊಳ್ಳಲಾಗುತ್ತದೆ ಎಂಬ ಆರೋಪ ಹಿಂದಿನಿಂದಲೂ ಇದೆ. ಶೆಡೌನ್ ಸಂದರ್ಭದಲ್ಲಿ ಸ್ಥಳೀಯರನ್ನು ನೇಮಿಸಿಕೊಂಡರೆ ಅತ್ಯಂತ ಹೆಚ್ಚು ವೇತನ, ಸುರಕ್ಷತಾ ವ್ಯವಸ್ಥೆಗಳು ಹಾಗು ಉಳಿದ ಸವಲತ್ತುಗಳನ್ನು ನೀಡಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಉತ್ತರ ಭಾರತದ ಅದರಲ್ಲೂ ಜಾರ್ಖಂಡ್, ಒರಿಸ್ಸಾ, ಚತ್ತೀಸ್ ಗಢ್ ಮುಂತಾದ ಅತ್ಯಂತ ಹಿಂದುಳಿದ ರಾಜ್ಯಗಳ ಅಗ್ಗದ ಕಾರ್ಮಿಕರನ್ನು, ಆದಿವಾಸಿಗಳನ್ನು ಕಂಪೆನಿಯ ಗುತ್ತಿಗೆದಾರರ ಮೂಲಕ ತರಿಸಿಕೊಂಡು ಹಗಲು ರಾತ್ರಿಗಳ ಪರಿವೆಯಿಲ್ಲದೆ ಜೀತದಾಳುಗಳಂತೆ ದುಡಿಸಿಕೊಳ್ಳುಲಾಗುತ್ತದೆ. ಅವರಿಗೆ ವಿಶ್ರಾಂತಿ, ಸುರಕ್ಷತಾ ಸಾಮಾಗ್ರಿಗಳು, ಅವಘಡಗಳಿಗೆ ತುತ್ತಾಗದಂತೆ ಜೀವರಕ್ಷಕ ವ್ಯವಸ್ಥೆಗಳನ್ನು ಒದಗಿಸದೆ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಅವಘಡಗಳಿಗೆ ವಲಸೆ ಕಾರ್ಮಿಕರು ಬಲಿಯಾದಾಗ ಕಂಪೆನಿಗೂ, ಸಂತ್ರಸ್ತ ಕಾರ್ಮಿಕರಿಗೂ ಯಾವುದೇ ಸಂಬಂಧ ಇಲ್ಲ ಎಂದು ಎಲ್ಲವನ್ನೂ ಗುತ್ತಿಗೆದಾರರಿಗೆ ವಹಿಸಿ ಕಂಪೆನಿಯು ಜವಾಬ್ದಾರಿಯಿಂದ ಜಾರಿಕೊಳ್ಳುತ್ತದೆ. ಈಗ ಕಂಪೆನಿಯ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಜಾರ್ಖಂಡ್ ನ ಆದಿವಾಸಿ ಕಾರ್ಮಿಕ ಸ್ಥಳೀಯ ಗುತ್ತಿಗೆ ಕಂಪೆನಿಯೊಂದರ ಮೂಲಕ ಉದ್ಯೋಗಕ್ಕೆ ನಿಯೋಜನೆ ಗೊಂಡಿರುವುದಾಗಿ ತಿಳಿದಿಬಂದಿದೆ. ಶೆಡೌನ್ ಕಾರ್ಮಿಕನಾಗಿದ್ದರೂ ಹಲವಾರು ವರ್ಷಗಳಿಂದ ಇಲ್ಲೇ ನೆಲೆ ನಿಂತು ಗುತ್ತಿಗೆ ಏಜೆನ್ಸಿ ಮೂಲಕ ಎಂಆರ್ ಪಿಎಲ್ ನಲ್ಲಿ ಕಾರ್ಮಿಕನಾಗಿ ದುಡಿಯುತ್ತಾ ಬಂದಿದ್ದಾನೆ ಎಂದು ಹೇಳಲಾಗಿದೆ. ಈಗ ಶೆಡೌನ್ ಕೆಲಸಕ್ಕೆ ಜಾರ್ಖಂಡ್ ನ ನೂರಾರು ಆದಿವಾಸಿ ವಲಸೆ ಕಾರ್ಮಿಕರು ಎಂಆರ್ ಪಿ ಎಲ್ ನಲ್ಲಿ ನಿಯೋಜನೆ ಗೊಂಡಿದ್ದಾರೆ. ಇವರೆಲ್ಲರೂ ಮಂಗಲ್ ನ ದಾರುಣ ಸಾವಿನಿಂದ ಕಂಗೆಟ್ಟಿದ್ದು ಅಸಹಾಯಕತೆಯಿಂದ ಸುರತ್ಕಲ್ ಠಾಣೆಯ ಮುಂಭಾಗ ಜಮಾವಣೆ ಗೊಂಡಿದ್ದಾರೆ. ಸ್ಥಳದಲ್ಲಿ ಎಂಆರ್ ಪಿಎಲ್ ಅಧಿಕಾರಿಗಳು ಯಾರೂ ಕಂಡು ಬಂದಿಲ್ಲ. ಇದು ತನ್ನ ನಿರ್ಲಕ್ಷ್ತಕ್ಕೆ ಆದಿವಾಸಿ ಕಾರ್ಮಿಕನೊಬ್ಬ ಬಲಿಯಾದರೂ “ತನಗೂ ಬಲಿಯಾದ ವಲಸೆ ಕಾರ್ಮಿಕನಿಗೂ ಯಾವುದೇ ಸಂಬಂಧ ಇಲ್ಲ, ಎಲ್ಲವೂ ಗುತ್ತಿಗೆದಾರನಿಗೆ ಸಂಬಂಧಿಸಿದ್ದು” ಎಂಬ ಕಂಪೆನಿಯ ಅಮಾನುಷವಾದ ತೀರಾ ಬೇಜವಾಬ್ದಾರಿ ನಡೆಯಲ್ಲದೆ ಮತ್ತೇನಲ್ಲ. ಕಂಪೆನಿಯ ಈ ನಡೆಯನ್ನು ಹೋರಾಟ ಸಮಿತಿ ಬಲವಾಗಿ ಖಂಡಿಸುತ್ತದೆ.
ಈ ಕುರಿತು ರಾಜ್ಯ ಸರಕಾರ, ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶಿಸಬೇಕು.ಆದಿವಾಸಿ ಕಾರ್ಮಿಕನ ಸಾವಿಗೆ ಕಾರಣವಾದ ದುರಂತದ ಕುರಿತು ಪಾರದರ್ಶಕ ತನಿಖೆ ನಡೆಸಬೇಕು, ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯೊಂದನ್ನು ಅವಘಡ ನಡೆದ ಕಂಪೆನಿಯೊಳಗಡೆ ಕರೆದೊಯ್ದು ಆ ಸಮಿತಿಯ ಸಮ್ಮುಖ ನಿಯಮ ಪಾಲನೆ, ಸುರಕ್ಷತೆಯ ಕುರಿತು ಪರಿಶೀಲನೆ ನಡೆಸಬೇಕು. ಹಾಗೆಯೆ ಮೃತಪಟ್ಟ ಆದಿವಾಸಿ ಕಾರ್ಮಿಕನ ಕುಟುಂಬಕ್ಕೆ ಕಂಪೆನಿಯು ಅವಘಡದ ಹೊಣೆ ಹೊತ್ತು ಒಂದು ಕೋಟಿ ರೂಪಾಯಿ ಪರಿಹಾರ ಒದಗಿಸಬೇಕು. ಕಂಪೆನಿಗಾಗಿ ಪ್ರಾಣತೆತ್ತ ಆದಿವಾಸಿ ಕಾರ್ಮಿಕನ ಕುಟುಂಬದ ಸದಸ್ಯರೊಬ್ಬರಿಗೆ ಕಂಪೆನಿಯಲ್ಲಿ ಅನುಕಂಪ ಆಧಾರದಲ್ಲಿ ಉದ್ಯೋಗ ಒದಗಿಸಬೇಕು ಎಂದು ನಾಗರಿಕ ಹೋರಾಟ ಸಮಿತಿ ಬಲವಾಗಿ ಆಗ್ರಹಿಸುತ್ತದೆ ಎಂದು ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.