ಇತ್ತೀಚಿನ ಸುದ್ದಿ
ಕೊಡಗಿನಲ್ಲಿ ಬಿಎಸ್ಸೆನ್ನೆಲ್ ಟವರ್‌ಗಳಿಗೆ ಬ್ಯಾಟರಿ ಸೆಟ್ ತ್ವರಿತವಾಗಿ ಅಳವಡಿಸಲು ಸಂಸದ ಯದುವೀರ್ ಮನವಿ
13/12/2025, 11:41
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭೇಟಿ ಮಾಡಿದ ಮೈಸೂರು-ಕೊಡಗು ಸಂಸದರು,ಕೊಡಗು ಲೋಕಸಭಾ ಕ್ಷೇತ್ರದ ಕೊಡಗು ಜಿಲ್ಲೆಯಲ್ಲಿ ದೂರ ಸಂಪರ್ಕ ಕ್ಷೇತ್ರಕ್ಕೆ ಹೆಚ್ಚುವರಿ ಸೌಲಭ್ಯ ಒದಗಿಸಬೇಕಾದ ಅಗತ್ಯವಿರುವುದರಿಂದ ಕೂಡಲೇ ಟವರ್‌ಗಳಿಗೆ ಬ್ಯಾಟರಿ ಸೆಟ್ ಅಳವಡಿಕೆ ಹಾಗೂ 15 ಪವರ್ ಪ್ಲಾಂಟ್ ಹಂಚಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿ ಈ ಸಂಬಂಧ ಭೇಟಿ ಮಾಡಿ ಮತ್ತೊಮ್ಮೆ ಮನವಿ ನೀಡಿದ ನಂತರ ಯದುವೀರ್ ಒಡೆಯರ್ ಈ ಮಾಹಿತಿ ನೀಡಿದ್ದಾರೆ.
ಕಳೆದ ಭಾರಿ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಕಂಬಗಳು ಧರೆಗುರುಳಿದಿದ್ದು, ಇದರಿಂದ ಸಾರ್ವಜನಿಕರಿಗೆ ಸಂಪರ್ಕ ಸಾಧಿಸಲು ಭಾರಿ ತೊಂದರೆ ಎದುರಾಗಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸಚಿವರಿಗೆ ಪತ್ರ ಬರೆದು ಮೂಲ ಸೌಕರ್ಯ ಹೆಚ್ಚಿಸಲು ಆಗ್ರಹಿಸಲಾಗಿತ್ತು ಎಂದರು.
ಈ ನಿಟ್ಟಿನಲ್ಲಿ ಇಂದು ಕೇಂದ್ರ ಸಚಿವರನ್ನು ಮತ್ತೊಮ್ಮೆ ಭೇಟಿ ಮಾಡಿ ಈ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ, ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮನವಿ ಮಾಡಿದ್ದೇನೆ ಎಂದು ಸಂಸದರು ವಿವರಿಸಿದರು.
ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಅತಿ ಶೀಘ್ರದಲ್ಲೇ ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ಮಾಹಿತಿ ನೀಡಿದರು.












