ಇತ್ತೀಚಿನ ಸುದ್ದಿ
Bangalore | ಮೋಸ ಹೋಗಬೇಡಿ; ಇಲಾಖೆಯಲ್ಲಿ ಯಾವುದೇ ನೇಮಕಾತಿ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ
05/04/2025, 19:57

ಬೆಂಗಳೂರು(reporterkarnataka.com): ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ ನೇಮಕಾತಿ ವಿಚಾರವಾಗಿ ಕೆಲವರು ಹಣ ವಸೂಲು ಮಾಡುತ್ತಿರುವ ಕುರಿತು ದೂರುಗಳು ಕೇಳಿ ಬಂದಿದ್ದು, ಯಾರೂ ಮೋಸ ಹೋಗಬಾರದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ನೇಮಕಾತಿ ವಿಚಾರವಾಗಿ ಮೋಸ ಹೋಗುವ ಪ್ರಕರಣಗಳು ಹೆಚ್ಚುತ್ತಿದೆ. ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಲ್ಲಿ ನೇಮಕಾತಿ ವಿಚಾರವಾಗಿ ಸಾರ್ವಜನಿಕರಿಂದ ಕೆಲವು ಅನಾಮಧೇಯ ವ್ಯಕ್ತಿಗಳು ಹಣ ವಸೂಲು ಮಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿಬಂದಿದೆ. ಈ ಕುರಿತು ಪ್ರಸ್ತುತ ಸಾಕ್ಷ್ಯಾಧಾರಗಳು ಸಹ ಲಭ್ಯವಾಗಿವೆ. ಈ ಕುರಿತು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಸಾಕ್ಷ್ಯಾಧಾರ ಸಮೇತ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಡಿ ಪ್ರಸ್ತುತ ಯಾವುದೇ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲಿರುವುದಿಲ್ಲ. ಹಾಗೇನಾದರೂ ನೇಮಕಾತಿ ಇದ್ದಲ್ಲಿ ಸಕ್ಷಮ ಪ್ರಾಧಿಕಾರದ ಮೂಲಕವೇ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು. ಸಾರ್ವಜನಿಕರು ಯಾವುದೇ ನೇಮಕಾತಿ ಆಮಿಷಕ್ಕೆ ಒಳಗಾಗದೇ, ಯಾವುದೇ ಮಧ್ಯವರ್ತಿ ತಮ್ಮನ್ನು ನೇಮಕಾತಿ ಕುರಿತು ಸಂಪರ್ಕಿಸಿದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಕೋರಿದ್ದಾರೆ.