ಇತ್ತೀಚಿನ ಸುದ್ದಿ
ಮೊನ್ನೆಯಷ್ಟೇ ಬಸ್ಸಿಗೆ ಅಡ್ಡ ನಿಂತಿದ್ದ ಕಾಡಾನೆ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಪ್ರತ್ಯಕ್ಷ: ವಾಹನ ಸವಾರರಲ್ಲಿ ಭೀತಿ
14/06/2024, 10:45
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಂಗಳೂರು- ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷವಾಗಿ ವಾಹನ ಸವಾರರಲ್ಲಿ ಭೀತಿಯುಂಟು ಮಾಡಿದೆ.
ಮೂಡಿಗೆರೆ ತಾಲೂಕು ವ್ಯಾಪ್ತಿಗೆ ಸೇರಿದ ಘಾಟಿ ಪ್ರದೇಶದಲ್ಲಿ ಕಾಡಾನೆ ಶುಕ್ರವಾರ ಬೆಳ್ಳಂಬೆಳಗೆ ಪ್ರತ್ಯಕ್ಷವಾಗಿದೆ.
ಚಾರ್ಮಾಡಿ ಘಾಟಿಯಲ್ಲಿ 7 ಮತ್ತು 8ನೇ ತಿರುವಿನ ಮಧ್ಯೆ ಮೊನ್ನೆ ರಾತ್ರಿ ಸರಕಾರಿ ಬಸ್ಸಿಗೆ ಒಂಟಿ ಸಲಗ ಅಡ್ಡ ಬಂದು ನಿಂತಿತ್ತು. ಸುಮಾರು ಅರ್ಧ ತಾಸು ದಾರಿಯನ್ನು ತಡೆದಿತ್ತು. ಇದೀಗ ಶುಕ್ರವಾರ ಬೆಳಗ್ಗೆ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮತ್ತೆ ಒಂಟಿ ಕಾಡಾನೆ ಪ್ರತ್ಯಕ್ಷವಾಗಿದೆ. ರಸ್ತೆ ಮಧ್ಯೆ ಮತ್ತೆ ಒಂಟಿ ಸಲಗ ಕಾಣಿಸಿಕೊಂಡಿದೆ.
ಮೊನ್ನೆ ರಾತ್ರಿ ಸರ್ಕಾರಿ ಬಸ್ಸಿಗೆ ಅಡ್ಡ ಬಂದಿದ್ದ ಕಾಡಾನೆಯಿಂದ
ರಸ್ತೆಯ ಎರಡೂ ಕಡೆಗಳಲ್ಲಿ ಸುಮಾರು 2 ಕಿ.ಮೀ.ನಷ್ಟು ದೂರ ಟ್ರಾಫಿಕ್ ಕೂಡ ಜಾಮ್ ಆಗಿತ್ತು.
ಚಾರ್ಮಾಡಿ ಘಾಟ್ ಅತ್ಯಂತ ಕಿರಿದಾದ ಹಾವು-ಬಳುಕಿನ ಮೈಕಟ್ಟಿನ ರಸ್ತೆಯಾಗಿದೆ. ರಸ್ತೆಯ ಒಂದು ಬದಿ ಬೆಟ್ಟ, ಮತ್ತೊಂದು ಬದಿ ಸಾವಿರಾರು ಅಡಿ ಕಂದಕವಿದೆ. ಈ ಮಾರ್ಗದಲ್ಲಿ ಆನೆ ಎದುರಾದರೆ ತಪ್ಪಿಸಿಕೊಳ್ಳೋದು ಕಷ್ಟ.
ತಿರುವಿನಲ್ಲಿ ಬೈಕ್ ಸವಾರರು ಆನೆ ಕೈಗೆ ಸಿಕ್ಕರೆ ಅಪಾಯ ಕಟ್ಟಿಟ್ಟ ಬುತ್ತಿ. ಚಾರ್ಮಾಡಿ ಘಾಟಿ ತಪ್ಪಲಿನ ಗ್ರಾಮಗಳಿಗೂ ಒಂಟಿ ಸಲಗ ಬಂದಿತ್ತು.
ಆನೆಯನ್ನ ಸೆರೆ ಹಿಡಿದು ಸ್ಥಳಾಂತರಿಸುವಂತೆ ಸ್ಥಳೀಯರು ಈಗಾಗಲೇ ಹಲವು ಬಾರಿ ಒತ್ತಾಯಿಸಿದ್ದಾರೆ.ಕಳೆದ ಎರಡು ತಿಂಗಳಿಂದ ನಿರಂತರವಾಗಿರುವ ಕಾಡಾನೆ ಕಾಟ ನೀಡುತ್ತಿದೆ.