ಇತ್ತೀಚಿನ ಸುದ್ದಿ
1 ತಿಂಗಳ ವೇತನದಲ್ಲಿ ಕವಿ ಎಚ್ ಎಸ್ ವಿ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ: ಶಾಸಕ ದಿನೇಶ್ ಗೂಳಿಗೌಡ
13/07/2025, 23:47

ಬೆಂಗಳೂರು(reporterkarnataka.com):ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕನ್ನಡ ಸೇವೆ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು. ಅವರ ಹೆಸರು ಸಾಹಿತ್ಯ ಲೋಕದಲ್ಲಿ ಸ್ಥಿರಸ್ಥಾಯಿಯಾಗಿ ಉಳಿಯಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ನನಗೆ ನೀಡುವ ಒಂದು ತಿಂಗಳ ವೇತನದ ಹಣದಲ್ಲಿ ಎಚ್ ಎಸ್ ವಿ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಲಾಗುವುದು ಎಂದು ಶಾಸಕ ದಿನೇಶ್ ಗೂಳಿಗೌಡ ಹೇಳಿದರು.
ಉಲ್ಲಾಳು ಉಪಕಾರ್ ಕ್ಲಬ್ ಹೌಸ್ ನ ಉರ್ವ ಸಭಾಂಗಣದಲ್ಲಿ ಸವಿಗಾನಲಹರಿ ಸುಗಮ ಸಂಗೀತ ಶಾಲೆ(ರಿ) ವತಿಯಿಂದ ಆಯೋಜಿಸಿದ್ದ, ಇತ್ತೀಚಿಗೆ ನಿಧನರಾದ ಭಾವಕವಿ ಡಾ. ಹೆಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಗೀತ ನಮನ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ದತ್ತಿನಿಧಿ ಸ್ಥಾಪನೆ ಮಾಡುವುದಾಗಿ ಘೋಷಿಸಿದರು.
ಎಚ್.ಎಸ್.ವಿ ಅವರ ಹೆಸರಿನಲ್ಲಿ ಪ್ರತಿವರ್ಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುವ ಸಾಹಿತಿಗಳು, ಗಾಯಕರು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಲಾಗುವುದು. ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ಗೀತೆಗಳ ಗಾಯನ ಪ್ರಸ್ತುತಪಡಿಸುವ ಮೂಲಕ ಅವರಿಗೆ ಗೀತೆ ನಮನ ಹಾಗೂ ನುಡಿ ನಮನ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ಸವಿಗಾನಲಹರಿ ಸುಗಮ ಸಂಗೀತ ಶಾಲೆ ಪ್ರತಿವರ್ಷ ಹಮ್ಮಿಕೊಳ್ಳುವ ಉದ್ದೇಶದಿಂದ ದತ್ತಿನಿಧಿ ಸ್ಥಾಪಿಸಲಾಗುತ್ತಿದೆ ಎಂದರು.
ಇತ್ತೀಚೆಗೆ ನಮ್ಮನಗಲಿದ ನಲ್ಮೆಯ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವುದರ ಜೊತೆಗೆ ಸಾಹಿತ್ಯ ಕ್ಷೇತ್ರವನ್ನು ಆಧುನೀಕರಣಗೊಳಿಸಿದವರು. ಅವರು ಸಾಹಿತ್ಯ ಕ್ಷೇತ್ರದ ಜೀವನದಿ. ಅವರ ಲೇಖನಿಯಿಂದ ಮೂಡಿಬಂದ ಗೀತೆಗಳ ಮೂಲಕ ಈ ಜೀವನದಿ ಎಂದು ಬತ್ತುವುದಿಲ್ಲ ಎಂದು ಹೇಳಿದರು.
ಕವಿ, ನಾಟಕಕಾರ, ಕಾದಂಬರಿಕಾರ, ವಿಮರ್ಶಕ, ಮಕ್ಕಳ ಸಾಹಿತಿ, ಮತ್ತು ಚಿತ್ರಗೀತೆvರಚನೆಕಾರರಾಗಿ ಬಹುಮುಖ ಪ್ರತಿಭೆ ಹೊಂದಿದವರು. ಕಾವ್ಯವನ್ನೇ ಜೀವಿಸುತ್ತಿದ್ದ ಎಚ್ಎಸ್ವಿ ಅವರು, ಅವರ ಹಾಡುಗಳಲ್ಲಿ ಸದಾ ಜೀವಂತ. ಭೌತಿಕವಾಗಿ ಇಲ್ಲದಿದ್ದರೂ ಸಾಹಿತ್ಯದ ಮೂಲಕ, ಗೀತೆಗಳ ಮೂಲಕ ಕನ್ನಡಿಗರ ಮನಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ಅವರ ಸಾಹಿತ್ಯದಲ್ಲಿ ಜಾನಪದ ಮೆರಗಿದೆ. ಹಳ್ಳಿಯ ಸೊಗಡಿದೆ. ನಗುಮುಖದ ಈ ಕವಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡದ ತೇರನು ಕೂಡ ಎಳೆದಿದ್ದಾರೆ. ಎಚ್.ಎಸ್.ವಿ ಕನ್ನಡ ನಾಡಿನ ಅಸಾಧಾರಣ ಪ್ರತಿಭೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ ಎಂದರು.
ಕವಿಯಾಗಿ ಸಾಹಿತ್ಯ ಬಳಗವನ್ನು ಹೊಂದಿದ್ದ ಅವರು ಪ್ರಾಧ್ಯಾಪಕರಾಗಿ ಕೂಡ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿದ್ದರು. ಅವರ ಶಿಷ್ಯಕೋಟಿ ಇಂದು ಅವರ ಗೀತಾಗಾಯನ ಮೂಲಕ ಎಚ್.ಎಸ್..ವಿ ಅವರ ಸಾಹಿತ್ಯವನ್ನು ಎಲ್ಲರೂ ಮೆಲಕುಹಾಕುವಂತೆ ಮಾಡಿದ್ದಾರೆ ಎಂದು ಹೇಳಿದರು.
ಸವಿಗಾನಲಹರಿ ಸುಗಮ ಸಂಗೀತ ಶಾಲೆ(ರಿ)ಅಧ್ಯಕ್ಷರಾದ ಕಲಾಶ್ರೀ ಟಿ.ರಾಜಾರಾಮ್ ಮಾತನಾಡಿ, ಸ್ಫುಟವಾಗಿ ಮನಮುಟ್ಟುವಂತೆ ಮಾತನಾಡುತ್ತಿದ್ದರು ಎಚ್.ಎಸ್.ವಿ. ಅವರ ಮೇಲಿನ ಅಭಿಮಾನದಿಂದ ಗೀತಾಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ರಂಗಕರ್ಮಿ, ಹಿರಿಯ ನಟ, ನಿರೂಪಕ ಶ್ರೀನಿವಾಸ ಪ್ರಭು ಅವರು ಎಚ್.ಎಸ್.ವಿ ಅವರೊಂದಿಗಿನ ಒಡನಾಟ, ಸಾಹಿತ್ಯ ಕೃಷಿಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ ಅವರ ಹಿರಿಯ ಪುತ್ರ ಹೆಚ್.ವಿ.ಸಂಜಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಂಗಳಾರವಿ, ರಾಘವೇಂದ್ರ ಬೀಜಾಡಿ, ವರ್ಷ ಸುರೇಶ್, ವೆಂಕಟೇಶಮೂರ್ತಿ ಶಿರೂರ, ರವಿಕೃಷ್ಣಮೂರ್ತಿ, ತನ್ವಿ ಡಿ. ಗೌಡ ಮತ್ತು ಸವಿಗಾನಲಹರಿ ಸುಗಮಸಂಗೀತ ಶಾಲೆಯ ವಿದ್ಯಾರ್ಥಿಗಳು ಡಾ. ಹೆಚ್.ಎಸ್.ವೆಂಕಟೇಶಮೂರ್ತಿ ಅವರ ವಿರಚಿತ ಗೀತೆಗಳ ಗಾಯನ ಪ್ರಸ್ತುತಪಡಿಸಿದರು.