ಇತ್ತೀಚಿನ ಸುದ್ದಿ
ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ ಕೋರ್ಟ್
31/12/2025, 14:04
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿ ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಕನ ತಂದೆ ಶಂಕರ ಅವರಿಗೆ ನ್ಯಾಯಾಲಯವು 25,000 ರೂ. ದಂಡ ವಿಧಿಸಿದೆ.
ಬಾಳೂರು ಪೊಲೀಸ್ ಠಾಣೆಯ ಪಿಎಸ್ಐ ದಿಲೀಪ್ ಕುಮಾರ್ ಅವರು ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ಪ್ರಕರಣವು ಮೂಡಿಗೆರೆ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿದ್ದು, ಅಪ್ರಾಪ್ತನಿಗೆ ಬೈಕ್ ನೀಡಿದ್ದಕ್ಕೆ ಹೊಣೆಗಾರರಾಗಿರುವ ತಂದೆ ಶಂಕರ ಅವರ ಹೆಸರಿನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದಂಡ ವಿಧಿಸಲಾಗಿದೆ.
ದಂಡದ ಮೊತ್ತವನ್ನು ಡಿಸೆಂಬರ್ 29ರಂದು ಸರ್ಕಾರದ ಖಾತೆಗೆ ಜಮಾ ಮಾಡಲಾಗಿದ್ದು, ಈ ಕುರಿತು ನ್ಯಾಯಾಲಯದಿಂದ ಫಾರ್ಮ್–Q ರಸೀದಿ ನೀಡಲಾಗಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.



ಅಪ್ರಾಪ್ತ ಮಕ್ಕಳ ಸುರಕ್ಷತೆ ಹಾಗೂ ರಸ್ತೆ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ತೀರ್ಪು ಮಹತ್ವ ಪಡೆದಿದೆ.












