8:54 AM Sunday5 - January 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚನೆ ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನ ವಿನಿಯೋಗ: ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ… ರಾಜ್ಯದ 4 ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ದರ ಹೆಚ್ಚಳ: ಸಚಿವ ಸಂಪುಟ ಅನುಮೋದನೆ ಮಂಗಳೂರು ಸಹಿತ ರಾಜ್ಯದ 6 ಸ್ಮಾರ್ಟ್‌ ಸಿಟಿ ಕಾಮಗಾರಿಗಳ ತನಿಖೆ: ಸಚಿವ ಬೈರತಿ… ಕ್ರೆಡಲ್ ನಿಂದ 40.53 ಕೋಟಿ ಲಾಭಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಸ್ತಾಂತರ ಬೆಂಗಳೂರು: ಬೈಕ್ ಶೋ ರೂಂನಲ್ಲಿ ಅಗ್ನಿ ಅನಾಹುತ: ಸುಟ್ಟು ಕರಕಲಾದ 60ಕ್ಕೂ ಹೆಚ್ಚು… ಮುಂದಿನ ವರ್ಷ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆ… ಎಚ್.ಡಿ.ಕೋಟೆ ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ: ಪರಿಶೀಲನೆ

ಇತ್ತೀಚಿನ ಸುದ್ದಿ

ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಯೂ ನೀಡಲಿ, ಸಿಬಿಐ ತನಿಖೆಯೂ ನಡೆಯಲಿ: ಶಾಸಕ ವೇದವ್ಯಾಸ ಕಾಮತ್ ಆಗ್ರಹ

03/01/2025, 17:40

ಮಂಗಳೂರು(reporterkarnataka.com):ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗುತ್ತಿಗೆದಾರರು ಅತ್ಯಂತ ಆತಂಕ ಸ್ಥಿತಿ ಎದುರಿಸುತ್ತಿದ್ದಾರೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಸಾಲದ್ದಕ್ಕೆ ಸರ್ಕಾರದ ಕೃಪಾಕಟಾಕ್ಷ ಹೊಂದಿರುವ ಪ್ರಭಾವಿ ಕಾಂಗ್ರೆಸ್ ನಾಯಕರುಗಳ ಆಪ್ತರ ಕಿರುಕುಳ, ಬೆದರಿಕೆಗೆ ಮಣಿದು ಉಸಿರುಗಟ್ಟಿಸುವಂತಹ ವಾತಾವರಣದಲ್ಲಿ ಬದುಕಲಾಗದೇ ಹಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆಯಾಗಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರ ಕಿರುಕುಳಕ್ಕೆ ಹೆದರಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬೀದರ್ ನ ಗುತ್ತಿಗೆದಾರ ಸಚಿನ್ ಪಂಚಾಳ್ ಪ್ರಕರಣವೇ ಸಾಕ್ಷಿ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಗುತ್ತಿಗೆದಾರ ಸಚಿನ್ ಅವರು 7 ಪುಟಗಳ ಡೆತ್ ನೋಟ್ ಬರೆದು ಅದನ್ನು ಸಾಮಾಜಿಕ ಜಾಲತಾಣದಲ್ಲೂ ಹಾಕಿದ್ದಾರೆ. ಅದರಲ್ಲಿ ಪ್ರಿಯಾಂಕ್ ಖರ್ಗೆ ಅವರ ಆಪ್ತ ದುಷ್ಟ ಕೂಟದ ಸದಸ್ಯರು ತನಗೆ ಮಾಡಿದ ಮಹಾ ಮೋಸ, ನೀಡಿದ ಚಿತ್ರಹಿಂಸೆ, ಅಲ್ಲದೇ ಸನಾತನ ಧರ್ಮ ರಕ್ಷಣೆಗೆ ಬದುಕು ಮೀಸಲಿಟ್ಟಿರುವ ಆಂದೋಲ ಸ್ವಾಮೀಜಿ, ಬಿಜೆಪಿ ಮುಖಂಡ ಚಂದು ಪಾಟೀಲ, ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಸೇರಿದಂತೆ ಹಲವು ಹಿಂದೂ ನಾಯಕರನ್ನು ಸುಪಾರಿ ಕೊಟ್ಟು ಹತ್ಯೆ ಮಾಡುವ ಸಂಚಿನ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಸಾಯುವ ಅಂತಿಮ ಕ್ಷಣದಲ್ಲಿ ಇಂತಹ ವಿಷಯದಲ್ಲಿ ಯಾವ ವ್ಯಕ್ತಿಯೂ ಸುಳ್ಳು ಹೇಳಲು ಸಾಧ್ಯವೇ? ಇದೊಂದು ಅತ್ಯಂತ ಆತಂಕಕಾರಿ ವಿಷಯವಾಗಿದ್ದು ಎಲ್ಲಾ ಆರೋಪಗಳು ಸಚಿವ ಪ್ರಿಯಾಂಕ್ ಖರ್ಗೆಯವರ ಸುತ್ತವೇ ಗಿರಕಿ ಹೊಡೆಯುತ್ತಿದ್ದು ಈ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿಯವರು ಎಷ್ಟು ಬೇಕಾದರೂ ಹೋರಾಟ ಮಾಡಿಕೊಳ್ಳಲಿ ನಾನು ರಾಜೀನಾಮೆ ಕೊಡುವುದಿಲ್ಲ, ಎಂದು ಹಠ ಹಿಡಿದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ನನ್ನ ರಾಜೀನಾಮೆ ಕೇಳಿದರೆ ಎಚ್ಚರಿಕೆ ಎಂಬ ಸಂದೇಶವನ್ನು ಸಿಎಂ ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ರವಾನಿಸಿದ್ದಾರೆ. ಅಲ್ಲದೇ ಈ ಪ್ರಕರಣದ ಕುರಿತಂತೆ ಸಿಐಡಿ ತನಿಖೆ ಸಾಕು, ಬೇರಾವುದೇ ತನಿಖೆಯೂ ಬೇಡ ಎಂಬಂತೆ ಈಗಲೇ ವ್ಯವಸ್ಥಿತವಾಗಿ ಎಲ್ಲಾ “ಸಿದ್ಧತೆ”ಗಳನ್ನು ತಮ್ಮದೇ ಸರ್ಕಾರಕ್ಕೆ ಒತ್ತಡ ಹಾಕುವ ಮೂಲಕ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ವಾಲ್ಮೀಕಿ ಹಗರಣದಲ್ಲಿ ಸಿಲುಕಿದ್ದ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಯನ್ನು ಕೂಡಲೇ ಪಡೆದುಕೊಂಡಿದ್ದ ಸಿದ್ದರಾಮಯ್ಯನವರಿಗೆ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ಪಡೆದುಕೊಳ್ಳಲು ಧೈರ್ಯವಿಲ್ಲವೇ? ರಾಜೀನಾಮೆ ಬಿಡಿ, ಈ ಪ್ರಕರಣದ ವಿರುದ್ಧ ಒಂದೇ ಒಂದು ಪದ ಮಾತನಾಡಿದರೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಕೋಪಗೊಂಡು ತಮ್ಮ ಕುರ್ಚಿಗೆ ಕಂಟಕ ಬರುವ ಭಯ ಅವರನ್ನು ಕಾಡುತ್ತಿರಬಹುದು ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕೆ.ಎಸ್. ಈಶ್ವರಪ್ಪನವರ ಪ್ರಕರಣ ಸೇರಿದಂತೆ ಸಣ್ಣಪುಟ್ಟ ವಿಷಯಕ್ಕೂ ಸಿದ್ದರಾಮಯ್ಯ ಆದಿಯಾಗಿ, ಪ್ರಿಯಾಂಕ ಖರ್ಗೆ ಸಹಿತ ಕಾಂಗ್ರೆಸ್ ನಾಯಕರು ಬೀದಿ ಬೀದಿಯಲ್ಲಿ ರಾಜೀನಾಮೆ ಕೊಡಿ ಎಂದು ಆರ್ಭಟಿಸುತ್ತಿದ್ದರು. ಈಗ ಅವರ ಸರ್ಕಾರವೇ ಆರೋಪಿ ಸ್ಥಾನದಲ್ಲಿರುವಾಗ ಎಲ್ಲರೂ ಮೌನ ವಹಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು, ಅಮಾಯಕರು ಸರ್ಕಾರದ ಕಾರಣದಿಂದಲೇ ಸಾಯುತ್ತಿದ್ದರೂ ಭಂಡ ಕಾಂಗ್ರೆಸ್ ಸರಕಾರ ಮಾತ್ರ ಕಿಂಚಿತ್ತೂ ಮಾನ, ಮರ್ಯಾದೆ ಇಲ್ಲದಂತೆ ವರ್ತಿಸುತ್ತಿದೆ ಎಂದು ಅವರು ನುಡಿದರು.
ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರ ಅಟ್ಟಹಾಸ ಮಿತಿ ಮೀರಿದ್ದು ಅಲ್ಲಿ ಅನ್ಯಾಯದ ದರ್ಬಾರ್ ನಡೆಯುತ್ತಿದೆ ಎಂದು ನೊಂದ ಕುಟುಂಬದವರೇ ಹೇಳುತ್ತಿದ್ದಾರೆ. ಪೊಲೀಸರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ತಮ್ಮದೇ ಆಡಳಿತ ನಡೆಸುತ್ತಿರುವ ಅವರು, ಪುಡಿ ರೌಡಿಗಳನ್ನು ಸಹ ಸಾಕಿಕೊಂಡು ಜನರಲ್ಲಿ ಒಂದು ರೀತಿಯ ಭಯಭೀತ ವಾತಾವರಣ ಸೃಷ್ಟಿಸಿದ್ದಾರೆ. ಆದರೆ ಒಬ್ಬ ಅಮಾಯಕನ ಸಾವಿನ ವಿಚಾರವನ್ನು ಬಿಜೆಪಿ ಇಷ್ಟಕ್ಕೇ ಬಿಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಚಿವ ಪ್ರಿಯಾಂಕ ಖರ್ಗೆಯವರನ್ನು ಬಂಧಿಸಬೇಕು ಮತ್ತು ತನಿಖೆಯನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸಬೇಕು. ಒಂದು ವೇಳೆ ತನಿಖೆ ನಂತರ ಅವರದ್ದು ಯಾವುದೇ ತಪ್ಪಿಲ್ಲ ಎಂದು ಸಾಬೀತಾದರೆ ಸಚಿವ ಸ್ಥಾನ ಅಷ್ಟೇ ಅಲ್ಲ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಹುದ್ದೆ ಬೇಕಾದರೂ ಪಡೆಯಲಿ. ಯಾರದ್ದೂ ಅಭ್ಯಂತರವಿಲ್ಲ ಎಂದರು.
ಇತ್ತೀಚೆಗಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕನ ಕಿರುಕುಳಕ್ಕೆ ತಹಸೀಲ್ದಾರ್ ಕಚೇರಿಯ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ ಬೆನ್ನಲ್ಲೇ, ಇದೀಗ ಪ್ರಿಯಾಂಕ್ ಖರ್ಗೆ ಅವರ ಆಪ್ತನ ಬೆದರಿಕೆಯಿಂದ ಸಚಿನ್ ಸುದೀರ್ಘ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಜೊತೆಗೆ ಅಮಾಯಕರಿಗೆ, ಪ್ರಾಮಾಣಿಕರಿಗೆ ಆತ್ಮಹತ್ಯೆಯ ಭಾಗ್ಯವನ್ನೂ ಕರುಣಿಸಿ ಅನೇಕ ಕುಟುಂಬಗಳನ್ನು ಅನಾಥವಾಗಿಸುತ್ತಿದೆ. ಆ ಎಲ್ಲಾ ಕುಟುಂಬಗಳ ಶಾಪ ಕಾಂಗ್ರೆಸ್ ಸರ್ಕಾರವನ್ನು ತಟ್ಟದೇ ಬಿಡದು, ಇದರ ಫಲ ಅನುಭವಿಸಲೇಬೇಕು.

ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಸಚಿನ್ ಪಡೆದಿದ್ದ ಗುತ್ತಿಗೆ ಕೆಲಸಗಳ ಬಾಕಿ ಉಳಿದಿರುವ ಹಣವನ್ನು ಪಾವತಿಸುವುದರ ಜೊತೆಗೆ ಆ ಕುಟುಂಬಕ್ಕೆ ಸೂಕ್ತ ಪರಿಹಾರವನ್ನೂ ಘೋಷಿಸಬೇಕು, ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಹುದ್ದೆಯನ್ನು ನೀಡಬೇಕು, ಮತ್ತು ಈ ಅನ್ಯಾಯದ ಸಾವಿಗೆ ಕಾರಣರಾದ ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಉಪಮೇಯರ್ ಭಾನುಮತಿ, ಪೂರ್ಣಿಮಾ, ನಿತಿನ್ ಕುಮಾರ್, ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು