ಇತ್ತೀಚಿನ ಸುದ್ದಿ
ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳ ಶೀಘ್ರ ನೇಮಕಾತಿ: ಐವನ್ ಪ್ರಶ್ನೆಗೆ ವಿಧಾನ ಪರಿಷತ್ ನಲ್ಲಿ ಸಚಿವ ಖಂಡ್ರೆ ಉತ್ತರ
12/08/2025, 20:04

ಬೆಂಗಳೂರು (reporterkarnataka.com):ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳ ಶೀಘ್ರ ನೇಮಕ ಮಾಡಲಾಗುವುದೆಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗದಲ್ಲಿ ಮಾನವ- ಆನೆ ಸಂಘರ್ಷ ತಡೆಯುವಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರು ನಿಯಮ 72 ರಡಿ ಕೇಳಲಾದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅರಣ್ಯ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವ- ಆನೆ ಸಂಘರ್ಷ ನಿಯಂತ್ರಿಸುವ ಸಲುವಾಗಿ ಸರ್ಕಾರ ಆನೆ ನಿರೋಧಕ ಕಂದಕ ನಿರ್ಮಾಣ, ನಿರಂತರ ಗಸ್ತು ತಿರುಗುವುದು, ಆನೆಗಳನ್ನು ಮತ್ತೆ ಅರಣ್ಯ ಪ್ರದೇಶಕ್ಕೆ ಓಡಿಸುವುದು, ಕಾಡಾನೆ ಹಾವಳಿ ಇರುವ ಗ್ರಾಮಗಳಲ್ಲಿ ವಾಟ್ಸಪ್ ಗುಂಪು ರಚಿಸಿ ಆನೆ ಹಾವಳಿ ಕುರಿತು ಸಂದೇಶ ನೀಡುವುದು, ಆನೆ ಸಂಚರಿಸುವ ಪ್ರದೇಶಗಳಲ್ಲಿ ಸೂಚನಾ ಫಲಕ ಅಳವಡಿಸುವಂತಹ ಕಾರ್ಯಗಳನ್ನು ಇಲಾಖೆ ಕೈಗೊಂಡಿದೆ. ಸಂಘರ್ಷದ ಸಂದರ್ಭದಲ್ಲಿ ಕಾಡಾನೆಗಳನ್ನು ಸೆರೆಹಿಡಿಯುವ ಸಲುವಾಗಿ ಮೂರು ತಂಡಗಳನ್ನು ರಚಿಸಿದ್ದು ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಸೆರೆಹಿಡಿಯುವ ಕಾರ್ಯಾಚರಣೆ ನಡೆದಲ್ಲಿ ಈ ತಂಡವನ್ನು ನಿಯೋಜಿಸಲಾಗುತ್ತಿದೆ.
ಗಸ್ತು ಅರಣ್ಯ ಪಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ವಹಿಸಲಾಗಿದೆ. ಅದರಲ್ಲಿ ಮಂಗಳೂರು ವಿಭಾಗಕ್ಕೆ 21 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಇನ್ನು ಅರಣ್ಯ ವೀಕ್ಷಕ ವೃಂದದಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿಯಡಿ ಶೀಘ್ರವೇ ಭರ್ತಿ ಮಾಡಲಾಗುವುದೆಂದರು