ಇತ್ತೀಚಿನ ಸುದ್ದಿ
Medical College | ಗದಗ ಮೆಡಿಕಲ್ ಕಾಲೇಜಿಗೆ ಕೆ.ಎಚ್. ಪಾಟೀಲ್ ಹೆಸರು: ರಾಜ್ಯ ಸಂಪುಟ ನಿರ್ಧಾರ
27/03/2025, 17:44

ಬೆಂಗಳೂರು(reporterkarnataka.com): ಗದಗಿನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹೆಸರನ್ನು ಸಹಕಾರಿ ರಂಗದ ಭೀಷ್ಮ ಕೆ.ಎಚ್. ಪಾಟೀಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂದು ಹೆಸರಿಸಲು ಸಂಪುಟ ನಿರ್ಧರಿಸಿದೆ.
ಈ ವಿಷಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಅವರು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಸಹಕಾರಿ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಕೆ.ಎಚ್. ಪಾಟೀಲರು ರಾಜ್ಯದಲ್ಲಿ ಸಚಿವರಾಗಿ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಮಹಾನ್ ನಾಯಕನ ಹೆಸರನ್ನು ಸಾರ್ವಜನಿಕ ಸೇವೆ ಮಾಡುತ್ತಿರುವ ಗದಗ ಮೆಡಿಕಲ್ ಕಾಲೇಜಿಗೆ ನಾಮಕರಣ ಮಾಡುವ ಮೂಲಕ ಅವರ ಸೇವೆಯನ್ನು ಗೌರವಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಸಚಿವರು ವಿವರಿಸಿದರು.