ಇತ್ತೀಚಿನ ಸುದ್ದಿ
ಮೇ 4: ರಾಜ್ಯದ ಎಲ್ಲ ಶಾಸಕ, ಸಚಿವರ ಮನೆ ಮುಂಭಾಗ ಬಿಸಿಯೂಟ ತಯಾರಕರ ಪ್ರತಿಭಟನೆ
26/04/2022, 16:34
ಡಾ.ಕೆ.ಆರ್.ನೀಲಕಂಠ ಕೃಷ್ಣರಾಜಪೇಟೆ ಮಂಡ್ಯ
info.reporterkarnataka.com
ಗೌರವ ಧನ ಹೆಚ್ಚಳಕ್ಕಾಗಿ ಒತ್ತಾಯಿಸಿ ರಾಜ್ಯದ ಎಲ್ಲಾ ಶಾಸಕರು ಹಾಗೂ ಸಚಿವರ ಮನೆಯ ಮುಂಭಾಗ ಮೇ 4 ರಂದು ಬಿಸಿಯೂಟ ತಯಾರಕರ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ನಡೆಯಲಿದೆ.
ಬಿಸಿಯೂಟ ತಯಾರಕರ ಸಂಘದ ಜಿಲ್ಲಾಧ್ಯಕ್ಷೆ ಮತ್ತು ರಾಜ್ಯ ಕಾರ್ಯದರ್ಶಿಗಳಾದ ಮಹದೇವಮ್ಮ ಅವರಿಂದ ಕೆ.ಆರ್.ಪೇಟೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಪ್ರಕಟಿಸಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಧ್ಯಾಹ್ನದ ಬಿಸಿಯೂಟ ತಯಾರಕರ ಕೆಲಸವನ್ನು ಕಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಬಿಸಿಯೂಟ ತಯಾರಕರ ಸೇವೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಿ 60 ವರ್ಷ ತುಂಬಿದ ಬಿಸಿಯೂಟ ತಯಾರಕ ಮಹಿಳೆಯರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಬಾರದು ಎಂದು ಮಂಡ್ಯ ಜಿಲ್ಲಾ ಮಧ್ಯಾಹ್ನದ ಬಿಸಿಯೂಟ ತಯಾರಕರ ಸಂಘದ ಜಿಲ್ಲಾಧ್ಯಕ್ಷೆ ಮಹದೇವಮ್ಮ ಆಗ್ರಹಿಸಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಬಿಸಿಯೂಟ ತಯಾರಕರ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಕೇವಲ ದಿನಕ್ಕೆ 10 ರೂ ಗೌರವಧನ ಪಡೆದುಕೊಂಡು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಬಿಸಿಯೂಟ ತಯಾರಕ ಮಹಿಳೆಯರು ಬಡಕುಟುಂಬಕ್ಕೆ ಸೇರಿರುವ ನಿರ್ಗತಿಕ, ವಿಶೇಷಚೇತನ ಹಾಗೂ ವಿಧವಾ ಮಹಿಳೆಯರಾಗಿದ್ದಾರೆ.
ಕಳೆದ 19 ವರ್ಷಗಳಿಂದ ಬಿಸಿಯೂಟ ತಯಾರಿಕಾ ಕೆಲಸವನ್ನು ಮಾಡುತ್ತಿರುವ ಮಹಿಳೆಯರಿಗೆ ರಾಜ್ಯ ಸರ್ಕಾರವು ಕೇವಲ 2,600 ರೂ, 2,700 ರೂ. ಗೌರವ ಧನವನ್ನು ಮಾತ್ರ ನೀಡುತ್ತಿದೆ. ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ತಯಾರಕರು ನಡೆಸಿದ ಹೋರಾಟದ ಫಲವಾಗಿ ಈಗ ಮಾಸಿಕ ಒಂದು ಸಾವಿರ ರೂ ಗೌರವ ಧನವನ್ನು ಹೆಚ್ಚಿಸಲು ಒಪ್ಪಿರುವ ಸರ್ಕಾರವು 2022ರ ಜನವರಿ ತಿಂಗಳಿನಿಂದ ಒಂದು ಸಾವಿರ ರೂ. ಹೆಚ್ಚಿನ ಗೌರವ ಧನ ನೀಡದೇ ಜೂನ್ ತಿಂಗಳಿನಿಂದ ಗೌರವ ಧನ ಹೆಚ್ಚಿಸುವುದಾಗಿ ಮೊಂಡಾಟ ಮಾಡುತ್ತಿದೆ. ಕಳೆದ 19 ವರ್ಷಗಳಿಂದ ಸೇವೆ ಸಲ್ಲಿಸಿ ಈಗ 60 ವರ್ಷ ತುಂಬಿತೆಂದು ಕೆಲಸ ಕಳೆದುಕೊಂಡು ಖಾಲಿ ಕೈಯ್ಯಲ್ಲಿ ಮನೆಗೆ ಹೋಗುತ್ತಿರುವ ಬಿಸಿಯೂಟ ತಯಾರಕ ಮಹಿಳೆಯರಿಗೆ ತಲಾ 1 ಲಕ್ಷ ರೂ. ಸಹಾಯ ಧನ ನೀಡುವ ಜೊತೆಗೆ ಮಾಸಿಕ 3 ಸಾವಿರ ರೂ ಪಿಂಚಣಿ ಹಣ ನೀಡಬೇಕು ಎಂದು ಒತ್ತಾಯಿಸಿದ ಮಹದೇವಮ್ಮ ಮೇ 4ರಂದು ಆಯಾ ಕ್ಷೇತ್ರದ ಶಾಸಕರ ಮನೆಯ ಮುಂದೆ ಗೌರವ ಸಂಭಾವನೆಯ ಪ್ರತಿಭಟನೆ ನಡೆಸಲಿದ್ದಾರೆ.
ಮೇ 10ರಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಿದ್ದೇವೆ. ರಾಜ್ಯ ಸರ್ಕಾರವು ಮಾನವೀಯ ನೆಲೆಗಟ್ಟಿನ ಆಧಾರದ ಮೇಲೆ ಬಿಸಿಯೂಟ ತಯಾರಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಶಾಶ್ವತವಾದ ಪರಿಹಾರ ಕಂಡು ಹಿಡಿಯಬೇಕು ಎಂದು ಮಹದೇವಮ್ಮ ಆಗ್ರಹಿಸಿದರು.
ಸಭೆಯಲ್ಲಿ ಬಿಸಿಯೂಟ ತಯಾರಕರ ಸಂಘದ ಕೆ.ಆರ್.ಪೇಟೆ ತಾಲ್ಲೂಕು ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಕಾರ್ಯದರ್ಶಿ ಲಕ್ಷ್ಮಮ್ಮ , ಪದಾಧಿಕಾರಿಗಳಾದ ವಸಂತಮ್ಮ, ಲಕ್ಷ್ಮಮ್ಮ, ಗೀತಮ್ಮ, ಪ್ರಭಾ, ಭಾಗ್ಯ ಸೇರಿದಂತೆ ನೂರಾರು ಜನ ಮಹಿಳೆಯರು ಸಭೆಯಲ್ಲಿ ಭಾಗವಹಿಸಿದ್ದರು.