ಇತ್ತೀಚಿನ ಸುದ್ದಿ
‘ಮೇ 10 – ವೋಟು ಒತ್ತು’ ಜಾಗೃತಿ ಜಾಥಾ: ಕರಪತ್ರ ವಿತರಣೆ
07/05/2023, 10:56
ಚಿತ್ರ: ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಮತದಾನ ಪವಿತ್ರವಾದ ಹಕ್ಕು. ಮೇ 10ರಂದು ಮಂಗಳೂರು ನಗರದ ಮತದಾರರೆಲ್ಲರೂ ತಮ್ಮ ಸಮೀಪದ ಮತಗಟ್ಟೆಗೆ ಬಂದು ಈ ಹಕ್ಕನ್ನು ಚಲಾಯಿಸಿ, ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಕರೆ ನೀಡಿದ್ದಾರೆ.
ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆ ಸಹಯೋಗ ದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಮೇ 10 – ವೋಟು ಒತ್ತು’ ಎಂಬ ಜಾಗೃತಿ ಜಾಥಾಗೆ ಚಾಲನೆ ನೀಡಿದರು.
ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಚೆನ್ನಬಸಪ್ಪ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಕೆ.ಎಚ್., ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಕಿಶೋರ್ ಕುಮಾರ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ. ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸ್ವಯಂ ಸೇವಕ,ಸೇವಕಿಯರು ಭಾಗವಹಿಸಿದ್ದರು.
ಮಂಗಳೂರು ನಗರದ ಜಿಲ್ಲಾಧಿಕಾರಿಯವರ ಕಚೇರಿಯಿಂದ ಹೊರಟ ಜಾಥಾವು ಮೀನು ಮಾರುಕಟ್ಟೆಯಲ್ಲಿ ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಿತು. ರಥಬೀದಿಯವರೆಗೆ ಸಾಗಿ ಕೊನೆಗೊಂಡಿತು.